ಕುಶಾಲನಗರ, ಮೇ 17: ಕುಶಾಲನಗರ ವಲಯದ ಅರಣ್ಯ ಇಲಾಖಾ ಅಧಿಕಾರಿ, ಸಿಬ್ಬಂದಿಗಳು ತಮ್ಮ ತಿಂಗಳ ವೇತನವನ್ನು ಪಡೆಯಲು ಪರದಾಡುವ ಸ್ಥಿತಿ ಎದುರಾಗಿದೆ. ಕಳೆದ ಹಲವು ವರ್ಷಗಳಿಂದ ಸ್ಥಳೀಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಖಾತೆಗಳ ಮೂಲಕ ವೇತನ ಪಡೆಯುತ್ತಿದ್ದ ಸಿಬ್ಬಂದಿಗಳಿಗೆ ಇದೀಗ ತಿಂಗಳು ಅಂತ್ಯವಾಗಿ 3 ವಾರ ಕಳೆದರೂ ವೇತನ ದೊರೆಯದೆ ಸಂಕಷ್ಟಕ್ಕೆ ಒಳಗಾಗಿರುವ ಬಗ್ಗೆ ದೂರುಗಳು ಕೇಳಿಬಂದಿವೆ.
ಜನವರಿಯಲ್ಲಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯಿಂದ ಬಂದ ಸುತ್ತೋಲೆ ಪ್ರಕಾರ ಅರಣ್ಯ ಇಲಾಖಾ ಸಿಬ್ಬಂದಿಗಳು ವೇತನವನ್ನು ಖಾಸಗಿ ಬ್ಯಾಂಕ್ ಒಂದರ ಮೂಲಕ ಪಡೆಯಲು ಅನುಕೂಲ ಮಾಡಿರುವ ಹಿನ್ನೆಲೆ ಈ ಪರಿಸ್ಥಿತಿ ಸೃಷ್ಟಿಯಾಗಿದೆ. ಶೂನ್ಯ ಬ್ಯಾಲೆನ್ಸ್ ಖಾತೆ, ಇನ್ನಿತರ ಉಚಿತ ಸೌಲಭ್ಯ ನೀಡುವ ಅನುಕೂಲಗಳ ಬಗ್ಗೆ ಬ್ಯಾಂಕ್ ಇಲಾಖೆಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದರೂ ಬಹುತೇಕ ಸಿಬ್ಬಂದಿಗಳು ಈ ಖಾಸಗಿ ಬ್ಯಾಂಕ್‍ನಲ್ಲಿ ಖಾತೆ ತೆರೆಯಲು ಹಿಂದೇಟು ಹಾಕಿದ್ದಾರೆ. ಈ ಕಾರಣದಿಂದ ಕಳೆದ ತಿಂಗಳ ಸಂಬಳ ದೊರಕದೆ 50 ಕ್ಕೂ ಅಧಿಕ ಸಿಬ್ಬಂದಿಗಳು ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದು ಹಲವರು ದೂರಿದ್ದಾರೆ. - ಸಿಂಚು