ಗೋಣಿಕೊಪ್ಪಲು, ಮೇ 17: ಗೋಣಿಕೊಪ್ಪಲುವಿನ ಕಸ ವಿಲೇವಾರಿಗೆ ಸಂಬಂಧಿಸಿದಂತೆ ಗೋಣಿಕೊಪ್ಪ ಪಂಚಾಯ್ತಿ ಸರ್ವ ಸದಸ್ಯರು ನಡೆಸಿದ ತುರ್ತು ಸಭೆಯು ಯಶಸ್ವಿಯಾಗಿದ್ದು ತಕ್ಷಣವೇ ಜಾರಿಗೆ ಬರುವಂತೆ ಕಸವಿಲೇವಾರಿಯನ್ನು ಮಾಡಲು ಸದಸ್ಯರು ಸರ್ವಾನುಮತದಿಂದ ಒಪ್ಪಿಗೆ ನೀಡಿದರು.

ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸೆಲ್ವಿ ಅಧ್ಯಕ್ಷತೆಯಲ್ಲಿ ನಡೆದ ಪಂಚಾಯಿತಿ ಸದಸ್ಯರ ತುರ್ತು ಸಭೆಯಲ್ಲಿ ಹಿರಿಯ ಸದಸ್ಯ ಬಿ.ಎನ್. ಪ್ರಕಾಶ್ ಕಸ ವಿಲೇವಾರಿ ವಿಷಯದಲ್ಲಿ ನಾಗರಿಕನ ಮುಂದೆ ಸದಸ್ಯರು ತಲೆತಗ್ಗಿಸಿ ನಡೆಯುವ ಪರಿಸ್ಥಿತಿಯಾಗಿದೆ. ಕಸ ವಿಲೇವಾರಿ ವಿಚಾರದಲ್ಲಿ ಯಾವೊಬ್ಬ ಸದಸ್ಯರಿಗೂ ಪ್ರತಿಷ್ಠೆ ಬೇಡ ಸಾರ್ವಜನಿಕರು,ಸಂಘ ಸಂಸ್ಥೆಗಳು ಈಗಾಗಲೇ ಪಂಚಾಯ್ತಿ ವಿರುದ್ಧ ತಿರುಗಿ ನಿಂತಿದ್ದಾರೆ. ಜನತೆ ಧಂಗೆ ಏಳುವ ಮೊದಲು ಕಸ ವಿಲೇವಾರಿಗೆ ಅಗತ್ಯ ಕ್ರಮ ಕೈಗೊಳ್ಳಲೇಬೇಕು. ಈ ಸಭೆಯಲ್ಲಿ ಇದು ಒಮ್ಮತಕ್ಕೆ ಬರಲೇಬೇಕೆಂದು ಒತ್ತಾಯಿಸಿದರು. ಈ ಸಂದರ್ಭ ಪಂಚಾಯಿತಿ ಸದಸ್ಯ ರಾಮಕೃಷ್ಣರವರು ಸಭೆಯನ್ನು ಕರೆಯುವ ಸಂದರ್ಭ ಅಧ್ಯಕ್ಷರ ಗಮನಕ್ಕೆ ಬಂದಿಲ್ಲ ಎಂದರು. ಸದಸ್ಯ ಕುಲ್ಲಚಂಡ ಬೋಪಣ್ಣ ಪಂಚಾಯಿತಿ ಕಸ ವಿಲೇವಾರಿ ಮಾಡಲು ಅನಾವಶ್ಯಕ ವಿಳಂಬ ನಡೆಸಿದರೆ ತಾನೇ ಸ್ವತಃ ಮುಂಜಾನೆ ಕಸ ತೆಗೆಯುವ ಕೆಲಸಕ್ಕೆ ಇಳಿಯುತ್ತೇನೆ ಎಂದರು.

ಪಂಚಾಯ್ತಿ ಅಭಿವೃದ್ದಿ ಅಧಿಕಾರಿ ಚಂದ್ರಮೌಳಿ ಮಾತನಾಡಿ ಕಸ ವಿಲೇವಾರಿಗೆ ಸಾರ್ವಜನಿಕರೊಬ್ಬರು ಮುಂದೆ ಬಂದಿದ್ದಾರೆ. ಇವರು ಕಸ ವಿಲೇವಾರಿ ಮಾಡುವ ಬಗ್ಗೆ ಹಲವು ನಿಬಂಧನೆಗಳನ್ನು ತಿಳಿಸಿದ್ದಾರೆ ಎಂದು ನಿಬಂಧನೆಗಳನ್ನು ಸದಸ್ಯರ ಮುಂದೆ ಮಂಡಿಸಿದರು. ಈ ಬಗ್ಗೆ ಟೆಂಡರ್ ಮೂಲಕ ಪ್ರಕಟಣೆ ನೀಡಿ ಕಸ ವಿಲೇವಾರಿಗೆ ಕ್ರಮ ಕೈಗೊಳ್ಳಬಹುದು ಎಂದು ಸಮಜಾಯಿಸಿಕೆ ನೀಡಿದರು.

ಟೆಂಡರ್ ಪ್ರಕಟಣೆಗೆ ಏಳು ದಿನ ಕಾಲವಕಾಶ ಬೇಕಾಗಿರುವದರಿಂದ ಕಸ ಸಮಸ್ಯೆ ಪರಿಹಾರವಾಗುವದಿಲ್ಲ. ತಕ್ಷಣ ಕ್ರಮ ಕೈಗೊಳ್ಳಲು ತೀರ್ಮಾನ ಮಾಡೋಣ ಎಂದು ಸದಸ್ಯ ಕುಲ್ಲಚಂಡ ಪ್ರಮೋದ್‍ಗಣಪತಿ ಅಧ್ಯಕ್ಷರಿಗೆ, ಪಿಡಿಒಗೆ ಸಲಹೆ ನೀಡಿದರು. ಈ ಸಲಹೆಗೆ ಸದಸ್ಯರಾದ ಜಮ್ಮಡ ಸೋಮಣ್ಣ, ಪ್ರಭಾವತಿ, ಧ್ವನಿಗೂಡಿಸಿದರು. ಮಧ್ಯ ಪ್ರವೇಶಿಸಿದ ಸದಸ್ಯ ರಾಮಕೃಷ್ಣ ಪಂಚಾಯಿತಿ ನೌಕರರಿಂದ ಇಂದಿನಿಂದಲೇ ಕಸ ವಿಲೇವಾರಿ ಮಾಡಿಸೋಣ ಟೆಂಡರ್ ಪ್ರಕ್ರಿಯೆಗಳು ನಿಯಮದಂತೆ ನಡೆಯಲಿ ಎಂದರು. ಇವರ ಮಾತಿಗೆ ಸುರೇಶ್ ರೈ ಒಪ್ಪಿಗೆ ಸೂಚಿಸಿದರು. ಸದಸ್ಯ ಬಿ.ಎನ್.ಪ್ರಕಾಶ್ ಎಲ್ಲಾ ಒಪ್ಪಿಗೆಗಳಿಗೆ ನಮ್ಮ ಸಹಮತವಿದೆ. ಕಸ ವಿಲೇವಾರಿ ಮಾತ್ರ ನಿಲ್ಲಬಾರದು ಎಂದು ವಿಷಯಕ್ಕೆ ತೆರೆ ಎಳೆಯುವ ಪ್ರಯತ್ನ ನಡೆಸಿದರು.

ಚೇಂಬರ್ ಆಫ್ ಕಾಮರ್ಸ್ ಸಭೆಯಲ್ಲಿ ಕೆಲವು ಸದಸ್ಯರು ಕಸ ಸಮಸ್ಯೆಗೆ ವಿರೋಧ ಮಾಡುತ್ತಿದ್ದಾರೆಂಬ ಮಾಹಿತಿ ಸಾರ್ವಜನಿಕವಾಗಿ ಕೇಳಿ ಬರುತ್ತಿವೆ. ಇದು ಸರಿಯಲ್ಲ. ಕಸ ವಿಲೇವಾರಿಯಲ್ಲಿ ಯಾವ ಸದಸ್ಯರು ಹಸ್ತಕ್ಷೇಪ ನಡೆಸುತ್ತಿಲ್ಲ. ಅನಾವಶ್ಯಕವಾಗಿ ಸದಸ್ಯರ ಹೆಸರು ಪ್ರಸ್ತಾಪ ಸರಿ ಅಲ್ಲ ಎಂದು ಮುರುಗ ಸಮಜಾಯಿಸಿಕೆ ಬಯಸಿದರು.

ಇವರ ಪ್ರಶ್ನೆಗೆ ಉತ್ತರಿಸಿದ ಸದಸ್ಯರಾದ ಬಿ.ಎನ್.ಪ್ರಕಾಶ್ ಚೇಂಬರ್ ಆಫ್ ಕಾಮರ್ಸ್ ಒಳ್ಳೇಯ ಉದ್ದೇಶದಿಂದ ಸಭೆಯನ್ನು ಆಯೋಜಿಸಿ ಸದಸ್ಯರನ್ನು ಒಗ್ಗೂಡಿಸುವ ಪ್ರಯತ್ನ ನಡೆಸಿದೆ. ಇವರ ಪ್ರಯತ್ನದಿಂದಲೇ ಇಂದು ನಾವೆಲ್ಲರೂ ಸಭೆ ಸೇರುವ ಅವಕಾಶ ಸಿಕ್ಕಿದೆ. ಚೇಂಬರ್ ನಡೆಸಿದ ಸಭೆಯಲ್ಲಿ ಯಾವ ಸದಸ್ಯರ ಹೆಸರು ಪ್ರಸ್ತಾಪವಾಗಿಲ್ಲ. ಈ ಬಗ್ಗೆ ನಾನೇ ಸಾಕ್ಷಿಯಾಗಿದ್ದೇನೆ ಎಂದು ವಿಷಯಕ್ಕೆ ತೆರೆ ಎಳೆದರು. ಅಂತಿಮವಾಗಿ ಕಸ ವಿಲೇವಾರಿಗೆ ಸರ್ವ ಸದಸ್ಯರು ತಮ್ಮ ಪ್ರತಿಷ್ಠೆಗಳನ್ನು ಬದಿಗೊತ್ತಿ ಒಮ್ಮತದ ತೀರ್ಮಾನದಿಂದ ಸಭೆ ಮುಕ್ತಾಯಗೊಳಿಸಿದರು. ಸಭೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ದ್ಯಾನ್ ಸುಬ್ಬಯ್ಯ, ಸುರೇಶ್ ರೈ, ಮಂಜುಳ, ಯಾಸ್ಮೀನ್, ರತಿ ಅಚ್ಚಪ್ಪ, ಮುಂತಾದವರು ಹಾಜರಿದ್ದರು. ಪಿ.ಡಿ.ಓ. ಚಂದ್ರಮೌಳಿ ಸ್ವಾಗತಿಸಿ, ವಂದಿಸಿದರು.

ಕಸ ವಿಲೇವಾರಿ ವಿಷಯದಲ್ಲಿ ಸುದ್ದಿ ಪ್ರಕಟಿಸುವ ಮೂಲಕ ಕ್ರಮ ಕೈಗೊಳ್ಳುವ ಬಗ್ಗೆ ‘ಶಕ್ತಿ’ ಬೆಳಕು ಚೆಲ್ಲಿದ್ದನ್ನು ಇಲ್ಲಿ ಸ್ಮರಿಸಬಹುದು. ಗೋಣಿಕೊಪ್ಪ ಚೇಂಬರ್ ಆಫ್ ಕಾಮರ್ಸ್ ನಡೆಸಿದ ಪಂಚಾಯಿತಿ ಸದಸ್ಯರ ನಡುವಿನ ಸಭೆ ಯಶಸ್ವಿಯಾಗಿದ್ದು ನಗರದಲ್ಲಿ ಕಸ ಸಮಸ್ಯೆಗೆ ಪರಿಹಾರ ಸಿಕ್ಕಿದಂತಾಗಿದೆ.

-ಹೆಚ್.ಕೆ.ಜಗದೀಶ್