ಕೂಡಿಗೆ, ಮೇ 16: ಹುಲುಸೆ ಯೂತ್ ಕ್ಷಬ್ ಇವರ ವತಿಯಿಂದ ನಡೆದ ರಾಜ್ಯಮಟ್ಟದ ಮುಕ್ತ ವಾಲಿಬಾಲ್ ಪಂದ್ಯಾವಳಿಯಲ್ಲಿ ಚನ್ನರಾಯಪಟ್ಟಣ ಕಿಟ್ಟಿ ಫ್ರೆಂಡ್ಸ್ ತಂಡ ಪ್ರಥಮ ಸ್ಥಾನ ಪಡೆಯಿತು. ಪ್ರಥಮ ಬಹುಮಾನ ರೂ. 10,000 ಹಾಗೂ ಪಾರಿತೋಷಕ, ದ್ವಿತೀಯ ಸ್ಥಾನವನ್ನು ಜೆ. ಕಿಗ್ಸ್ ಸಿದ್ದಲಿಂಗಪುರ ಪಡೆದು ನಗದು 7,000, ಪಾರಿತೋಷಕ, ತೃತೀಯ ಬಹುಮಾನ ರಾಯಲ್ ಫ್ರೆಂಡ್ ತಂಡ ಪಡೆದು, 5000 ಹಾಗೂ ಟ್ರೋಫಿ, ಚತುರ್ಥ ಸ್ಥಾನವನ್ನು ಹುಲುಸೆ ತಂಡ ಪಡೆಯಿತು. ಬಹುಮಾನ ವಿತರಣೆಯನ್ನು ಹೆಬ್ಬಾಲೆ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಸದಸ್ಯ ಶ್ರೀನಿವಾಸ ನೆರವೇರಿಸಿ ನಂತರ ಮಾತನಾಡಿ, ಗ್ರಾಮಾಂತರ ಪ್ರದೇಶಗಳಲ್ಲಿ ಇಂತಹ ಕ್ರೀಡಾಕೂಟಗಳು ನಡೆಯುವ ಮೂಲಕ ಗ್ರಾಮದ ಜನರನ್ನು ಒಗ್ಗೂಡಿಸುವ ಮೂಲಕ ಸೌಮ್ಯ ಮನೋಭಾವ ಬೆಳೆಯಲು ಸಹಕಾರಿ, ಇದರಿಂದ ಸ್ನೇಹ ಸಂಬಂಧವನ್ನು ಹಚ್ಚಿಸುವದು ಎಂದರು. ಮುಖ್ಯ ಅತಿಥಿಯಾಗಿದ್ದ ಹೆಬ್ಬಾಲೆ ಗ್ರಾಮ ಪಂಚಾಯಿತಿ ಸದಸ್ಯ ವೆಂಕಟೇಶ ಮಾತನಾಡಿ, ಯುವಕರು ಕ್ರೀಡೆಯತ್ತ ಹೆಚ್ಚು ಒಲವು ತೋರುವದರ ಮೂಲಕ ತನ್ನ ಜೀವನದ ದಾರಿಗೆ ಅನುಕೂಲ ಕಲ್ಪಿಸುತ್ತದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಷಬ್‍ನ ಅಧ್ಯಕ್ಷ ದಿಲೀಪ್ ವಹಿಸಿದ್ದರು. ವೇದಿಕೆಯಲ್ಲಿ ಸಿದ್ದಲಿಂಗಪುರ ಶುಂಠಿ ಬೆಳೆಗಾರರಾದ ಎ.ಎಸ್. ರಾಮಣ್ಣ, ರಾಜ್ಯದ ಮಟ್ಟದ ವಾಲಿಬಾಲ್ ಮಾಜಿ ಅಟಗಾರರಾದ ಸೋಮಶೇಖರ್, ದಿನೇಶ್ ಗ್ರಾಮ ಪಂಚಾಯಿತಿ ಸದಸ್ಯರಾದ ವೆಂಕಟೇಶ್, ಮಹೇಶ್, ಹುಲುಸೆಯ ರಂಗಸ್ವಾಮಿ ದಿನೇಶ್, ರವಿ, ಚಂದ್ರ ಸೇರಿದಂತೆ ಕ್ಲಬ್‍ನ ಸದಸ್ಯರು ಹಾಜರಿದ್ದರು.