ಸಂಪಾಜೆ, ಮೇ 16: ಕಳೆದ ವರ್ಷದ ಮಳೆಗಾಲದ ಭೀಕರ ಪ್ರಳಯಕ್ಕೆ ಸಿಲುಕಿ ಕೊಚ್ಚಿ ಹೋಗಿರುವ ಸಂಪಾಜೆ - ಊರುಬೈಲುವಿಗೆ ಸಂಪರ್ಕ ಕಲ್ಪಿಸುವ ಸೇತುವೆ ಪುನರ್ ನಿರ್ಮಾಣಕ್ಕೆ ನಬಾರ್ಡ್ ಮೂಲಕ ರೂ. 50 ಲಕ್ಷ ಅನುದಾನ ಮಂಜೂರಾಗಿದೆ.
ಸೇತುವೆ ಕೊಚ್ಚಿ ಹೋಗಿರುವ ಕಾರಣ ಗ್ರಾಮದ ನಿವಾಸಿಗಳು ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಜಿ.ಪಂ. ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮಿಪ್ರಿಯ ಅವರ ಗಮನಕ್ಕೆ ತಂದ ಸಂದರ್ಭದಲ್ಲಿ ಅವರು ಈಗಾಗಲೇ ರೂ. 50 ಲಕ್ಷ ಮಂಜೂರಾಗಿದ್ದು, ಟೆಂಡರ್ ಪ್ರಕ್ರಿಯೆ ಬಳಿಕ ಸೇತುವೆ ಕಾಮಗಾರಿ ಆರಂಭಿಸುವದಾಗಿ ಹೇಳಿದರು. ಅಲ್ಲದೆ, ಮುಂದಿನ ವಾರದಲ್ಲಿ ಜಿಲ್ಲಾಧಿಕಾರಿಗಳೊಡಗೂಡಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸುವದಾಗಿ ಹೇಳಿದರು. ಸೇತುವೆ ಇಲ್ಲದೆ ಗ್ರಾಮಸ್ಥರು ಎದುರಿಸುತ್ತಿರುವ ಸಮಸ್ಯೆ ಬಗ್ಗೆ ತಾ.11ರಂದು ‘ಶಕ್ತಿ’ ಬೆಳಕು ಚೆಲ್ಲಿತ್ತು.
ಇದೇ ಸಂದರ್ಭದಲ್ಲಿ ಗ್ರಾಮಸ್ಥರ ಪರವಾಗಿ ಗ್ರಾಮಕ್ಕೆ ಸಾರಿಗೆ ಸಂಸ್ಥೆ ಬಸ್ ಸೌಕರ್ಯ ಒದಗಿಸುವಂತೆ ಸಿಇಓ ಅವರಿಗೆ ಮನವಿ ಸಲ್ಲಿಸಲಾಯಿತು.
-ಮೋಕ್ಷಿತಾ ಪಟೇಲ್.