ಹುಣಸೂರು, ಮೇ 17: ಬೈಕ್‍ನಲ್ಲಿ ಕರ್ಕಶ ಶಬ್ಧ ಹೊರಡಿಸುವ ಸೈಲೆನ್ಸರ್ ಅಳವಡಿಸಿಕೊಂಡು ವ್ಹೀಲಿಂಗ್ ಮಾಡುತ್ತಾ ದುರ್ವರ್ತನೆ ಪ್ರದರ್ಶಿಸುವ ಯುವಕರಿಗೆ ಹುಣಸೂರು ನಗರ ಪೊಲೀಸರು ‘ಬಿಸಿ’ ಮುಟ್ಟಿಸಿದ್ದಾರೆ. ಈ ಹಿಂದೆ ಗೋಣಿಕೊಪ್ಪಲುವಿನಲ್ಲಿ ಠಾಣಾಧಿಕಾರಿಯಾಗಿದ್ದು, ಇದೀಗ ಹುಣಸೂರು ಎಸ್.ಐ. ಆಗಿರುವ ಮಹೇಶ್ ಅವರ ನೇತೃತ್ವದಲ್ಲಿ ಕಳೆದ ಆರು ತಿಂಗಳಲ್ಲಿ ಈ ರೀತಿಯ ಹಲವಾರು ಬೈಕ್‍ಗಳನ್ನು ವಶಪಡಿಸಿಕೊಂಡು ಕ್ರಮ ಜರುಗಿಸಲಾಗಿತ್ತು. ಕೊಡಗಿನಿಂದ ಅತ್ತ ತೆರಳುತ್ತಿದ್ದ ಬೈಕ್‍ಗಳೂ ಇದರಲ್ಲಿ ಸೇರಿವೆ. ಇಂತಹ ಬೈಕ್‍ಗಳನ್ನು ಹರಾಜು ಮಾಡುವದು ಮಾತ್ರವಲ್ಲ, ಸೈಲೆನ್ಸರ್‍ಗಳನ್ನು ಮತ್ತೆ ಬಳಸಿ ಕಿರಿಕಿರಿ ಮಾಡುತ್ತಾರೆ ಎಂದು ರೋಡ್ ರೋಲರ್ ಯಂತ್ರದ ಮೂಲಕ ಇವುಗಳನ್ನು ನಾಶಪಡಿಸಿ ಸಾರ್ವಜನಿಕವಾಗಿ ಕಿರಿಕಿರಿ ಮಾಡುವವರಿಗೆ ಎಚ್ಚರಿಕೆಯ ಸಂದೇಶವನ್ನು ಇಲಾಖೆ ನೀಡಿದೆ. ಕೊಡಗಿನ ದ್ವಿಚಕ್ರ ವಾಹನ ಸವಾರರಿಗೂ ಇದು ಪಾಠವಾಗಿದೆ.