ಸೋಮವಾರಪೇಟೆ,ಮೇ.17: ತಾಲೂಕಿನ ಶಾಂತಳ್ಳಿ ಹೋಬಳಿ ವ್ಯಾಪ್ತಿಯ, ಬೆಟ್ಟದಳ್ಳಿ ಗ್ರಾಮ ಪಂಚಾಯಿತಿಗೆ ಒಳಪಡುವ ಕುಂದಳ್ಳಿ, ಬೆಟ್ಟದಳ್ಳಿ ಹಾಗೂ ಶಾಂತಳ್ಳಿ ಗ್ರಾ.ಪಂ.ಗೊಳಪಡುವ ತಲ್ತರೆಶೆಟ್ಟಳ್ಳಿ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಸಾರ್ವಜನಿಕರು ಪರದಾಟ ಅನುಭವಿಸುತ್ತಿದ್ದಾರೆ.ಈ ಭಾಗದಲ್ಲಿರುವ ಬೋರ್‍ವೆಲ್, ಬಾವಿಗಳಲ್ಲಿ ನೀರು ಕಣ್ಮರೆಯಾಗಿದ್ದು, ಸಾರ್ವಜನಿಕರು ಕುಡಿಯುವ ನೀರಿಗೆ ಸಮಸ್ಯೆ ಎದುರಿಸುತ್ತಿದ್ದಾರೆ. ಗ್ರಾಮದ ಪಕ್ಕದಲ್ಲಿ ಹರಿಯುವ ತೋಡು, ಸಣ್ಣ ಹೊಳೆ, ಕೊಲ್ಲಿಗಳಲ್ಲಿನ ನೀರನ್ನು ಸಂಗ್ರಹಿಸಿ ಮನೆಮಂದಿ ಬಳಸಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ.ಜಾನುವಾರುಗಳು ಮತ್ತು ಜನರು ಒಂದೇ ಮಾದರಿಯ ನೀರನ್ನು ಸೇವಿಸುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಅಂತರ್ಜಲ ಪಾತಾಳ ಸೇರಿರುವ ಹಿನ್ನೆಲೆ ಬಾವಿಗಳು ಖಾಲಿ ಖಾಲಿಯಾಗಿವೆ. ಪರಿಣಾಮ ತಲ್ತರೆಶೆಟ್ಟಳ್ಳಿ ಗ್ರಾಮದಲ್ಲಿ ಸುಮಾರು 7 ಕುಟುಂಬಗಳು ಕುಡಿಯುವ ನೀರಿಗಾಗಿ ಇನ್ನಿಲ್ಲದ ಪರದಾಟ ಅನುಭವಿಸುತ್ತಿವೆ. ಗ್ರಾಮದಿಂದ ಒಂದೂವರೆ ಕಿ.ಮೀ. ದೂರದಲ್ಲಿರುವ ಸಣ್ಣ ತೋಡಿನಲ್ಲಿರುವ ಕಲುಷಿತ ನೀರನ್ನು ಬಿಂದಿಗೆಯಲ್ಲಿ ಹೊತ್ತುತಂದು ದೈನಂದಿನ ಬಳಕೆಗೆ ಉಪಯೋಗಿಸಬೇಕಿದೆ. ಇದೇ ತೋಡಿನಲ್ಲಿ ಜಾನುವಾರುಗಳೂ ಸಹ ನೀರನ್ನು ಕುಡಿಯುತ್ತವೆ.

(ಮೊದಲ ಪುಟದಿಂದ) ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಕುಂದಳ್ಳಿ ಗ್ರಾಮದ ಹಲವಷ್ಟು ಮನೆಗಳಿಗೆ ನೀರಿನ ಸಮಸ್ಯೆ ಎದುರಾಗಿದ್ದು, ಬಾವಿಯ ತಳಭಾಗದಲ್ಲಿ ಶೇಖರಣೆಯಾಗಿರುವ ಒಂದಿಷ್ಟು ನೀರನ್ನು ಮಿತಬಳಕೆ ಮಾಡಬೇಕಿದೆ. ಇನ್ನು ಮಳೆ ಬೀಳದ ಹಿನ್ನೆಲೆ ಗದ್ದೆ ಹಾಗೂ ತೋಟಗಳಿಗೆ ನೀರಿಲ್ಲದಂತಾಗಿದೆ. ಕೆಲವು ಕೃಷಿಕರು ಹೊಂದಿರುವ ಸ್ವಂತ ಬೋರ್‍ವೆಲ್‍ಗಳಲ್ಲೂ ಸಾಕಷ್ಟು ನೀರಿನ ಕೊರತೆ ಕಂಡುಬಂದಿದೆ. 2 ಇಂಚು ನೀರು ಇದ್ದ ಬೋರ್‍ಬೆಲ್‍ಗಳಲ್ಲಿ ಇದೀಗ ಅರ್ಧ ಇಂಚು ನೀರಿದೆ. ಕುಂದಳ್ಳಿ ಗ್ರಾಮದಲ್ಲಿ ಹಲವಷ್ಟು ಮಂದಿ ಮನೆ-ತೋಟ ಕೆಲಸಗಳಿಗೆ ನೈಸರ್ಗಿಕ ನೀರಿನ ಮೊರೆ ಹೋಗಿದ್ದಾರೆ.

ಕುಂದಳ್ಳಿ-ಮಾಗೇರಿ ಮುಖ್ಯರಸ್ತೆಯ ಬದಿಯಲ್ಲಿರುವ ಸಣ್ಣ ತೋಡಿಗೆ ಪೈಪ್ ಅಳವಡಿಸಿ ಮನೆಗಳಿಗೆ ನೀರನ್ನು ಕೊಂಡೊಯ್ಯುತ್ತಿದ್ದಾರೆ. ಸ್ವಂತ ವಾಹನ ಹೊಂದಿರುವ ಮಂದಿ ಡ್ರಮ್, ಬಿಂದಿಗೆಯ ಮೂಲಕ ನೀರು ಸಂಗ್ರಹಿಸುತ್ತಿದ್ದಾರೆ.ಶಾಂತಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳಪಡುವ ತಲ್ತರೆಶೆಟ್ಟಳ್ಳಿ ಗ್ರಾಮದಲ್ಲಿ ಸುಮಾರು 180ಕ್ಕೂ ಅಧಿಕ ಮನೆಗಳಿದ್ದು, ಇವುಗಳ ಪೈಕಿ ಹಳೆಊರು ಗ್ರೂಪ್‍ನಲ್ಲಿ ಏಳೆಂಟು ಮನೆಗಳಿಗೆ ಮಾತ್ರ ಬೇಸಿಗೆ ಬಂತೆಂದರೆ ಜೀವಜಲಕ್ಕೆ ಸಂಕಟ ಶುರುವಾಗುತ್ತದೆ. ಸುಮಾರು ಐದಾರು ದಶಕಗಳಿಂದಲೂ ಇಲ್ಲಿ ಬದುಕು ಕಟ್ಟಿಕೊಂಡಿರುವ ಇವರುಗಳಿಗೆ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ಇದುವರೆಗೂ ಸಾಧ್ಯವೇ ಆಗಿಲ್ಲ ಎಂಬದು ದುರಂತ.

25 ವರ್ಷಗಳ ಹಿಂದೆ ಇಲ್ಲಿ ಕೊಳವೆ ಬಾವಿ ತೋಡಿದ್ದು, ಒಂದೆರಡು ವರ್ಷಗಳ ನಂತರ ಸ್ಥಗಿತಗೊಂಡ ಬೋರ್‍ವೆಲ್‍ನ್ನು ದುರಸ್ತಿಗೊಳಿಸುವ ಕಾರ್ಯ ಇಂದಿಗೂ ನಡೆದಿಲ್ಲ. ಇದರೊಂದಿಗೆ ಕಳೆದ 5 ವರ್ಷಗಳ ಹಿಂದೆ ತೆರೆದ ಬಾವಿಯನ್ನು ತೋಡಿದ್ದು, ಈಗ ಇಣುಕಿದರೂ ಒಂದು ತೊಟ್ಟು ನೀರಿಲ್ಲ. ನೈಸರ್ಗಿಕ ಜಲಮೂಲವನ್ನು ಅವಲಂಬಿಸಿದ್ದ ಈ ಕುಟುಂಬಗಳಿಗೆ ತೊಟ್ಟಿಯನ್ನು ನಿರ್ಮಿಸಲಾಗಿದ್ದು, ಬೇಸಿಗೆಯಲ್ಲಿ ಈ ತೊಟ್ಟಿಗೆ ಹನಿ ನೀರೂ ಹರಿದು ಬರುವದಿಲ್ಲ.

ಈ ಭಾಗದ ಬಸಮ್ಮ, ಕುಶಾಲಪ್ಪ, ಮೇದಪ್ಪ, ವಿನೋದ್, ಮಾದಪ್ಪ, ಸುರೇಶ್, ಪವಿತ್ರ, ಮಾಚಯ್ಯ, ಚಿನ್ನಮ್ಮ ಅವರುಗಳ ಮನೆಗಳಿಗೆ ನೀರಿನ ಸಂಪರ್ಕ ಕಲ್ಪಿಸಿಲ್ಲ. ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿ ಎಂದು ಹಲವಷ್ಟು ಬಾರಿ ಗ್ರಾಮ ಪಂಚಾಯಿತಿ ಸೇರಿದಂತೆ ಜನಪ್ರತಿನಿಧಿಗಳ ಗಮನ ಸೆಳೆದರೂ ಸಹ ಇಂದಿಗೂ ದಿವ್ಯ ನಿರ್ಲಕ್ಷ್ಯ ಮುಂದುವರೆದಿದೆ. ಈ ಭಾಗದಲ್ಲಿರುವವರೂ ಸಹ ಮನುಷ್ಯರೇ. ನಮಗಳಿಗೂ ಸಹ ಕನಿಷ್ಟ ಮೂಲಭೂತ ಸೌಕರ್ಯ ಒದಗಿಸಿ, ಸರ್ಕಾರದಿಂದ ಕುಡಿಯುವ ನೀರಿನ ಯೋಜನೆಗಳಿಗೆ ಬಿಡುಗಡೆಯಾಗುವ ಅನುದಾನವನ್ನು ನಮ್ಮಕಡೆಗೂ ವಿಸ್ತರಿಸಿ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಒಟ್ಟಾರೆ ಕನಿಷ್ಟ ಮೂಲಭೂತ ಸೌಕರ್ಯಗಳಲ್ಲಿ ಅಗ್ರಮಾನ್ಯವಾಗಿರುವ ಕುಡಿಯುವ ನೀರನ್ನು ಈ ಭಾಗದ ಮಂದಿಗೆ ಕಲ್ಪಿಸಲು ಇಂದಿಗೂ ಸಾಧ್ಯವಾಗಿಲ್ಲ ಎಂಬದು, ಆಡಳಿತಗಾರರ ಇಚ್ಛಾಶಕ್ತಿ, ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಸಾಕ್ಷಿಯೇ ಸರಿ. ಇನ್ನಾದರೂ ಈ ಭಾಗದ ಮಂದಿಯ ಬವಣೆ ನೀಗುತ್ತದೆಯೇ? ಎಂಬದು ಸದ್ಯದ ಪ್ರಶ್ನೆ! - ವಿಜಯ್ ಹಾನಗಲ್