ಮಡಿಕೇರಿ, ಮೇ 17: ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆ ನಡೆಯಿತು. 2019ರ ಮಾರ್ಚ್ 7 ರಿಂದ ಹೊಸ ಸಮಗ್ರ ಪ್ರದೇಶ ಸಾರಿಗೆ ಯೋಜನೆಯು ಅನುಮೋದನೆಗೊಂಡಿರುವದರಿಂದ ಕರ್ನಾಟಕ ರಾಜ್ಯಾದ್ಯಂತ ಕೆಎಸ್ಆರ್ಟಿಸಿ ಸಂಸ್ಥೆಯ ವಾಹನಗಳನ್ನು ಮಾತ್ರ ಕಾರ್ಯಾಚರಣೆ ನಡೆಸುವದಾಗಿ, ಸಮಗ್ರ ಯೋಜನೆಯ ಉದ್ದೇಶವಾಗಿದ್ದು ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿತಗೊಂಡಿರುತ್ತದೆ.
ಆದರೂ ಮಾರ್ಚ್ 24 ರಂದು ನಡೆದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದಿಂದ ಖಾಸಗಿ ಬಸ್ ಮಾಲೀಕರು ತಮ್ಮ ವಾಹನಗಳಿಗೆ ರಹದಾರಿ ಹೊಂದಿಕೊಂಡಿದ್ದಲ್ಲಿ ಈ ರಹದಾರಿಯನ್ನು ಸೇವ್ಡ್ ಪರ್ಮಿಟ್ ಎಂದು ಪರಿಗಣಿಸಿದ್ದು, ಅಂತಹ ರಹದಾರಿ ಹೊಂದಿಕೊಂಡಿರುವ ಖಾಸಗಿ ವಾಹನಗಳು ಮಾತ್ರ ಕಾರ್ಯಾಚರಣೆ ಗೊಳಿಸಬಹುದಾಗಿದೆ ಎಂದು ಸಭೆಯಲ್ಲಿ ಪ್ರಸ್ತಾಪವಾಗಿದೆ ಎಂದು ಅವರು ತಿಳಿಸಿದರು.
ಈಗಾಗಲೇ ಸಾರಿಗೆ ಆಯುಕ್ತರ ಆದೇಶದಂತೆ 15 ವರ್ಷ ಮೇಲ್ಪಟ್ಟ ಪ್ರಯಾಣಿಕರ ವಾಹನಗಳಿಗೆ ರಹದಾರಿ ನಿರ್ಭಂದಿಸಿರುವದರಿಂದ ಈ ಕುರಿತು ತೀರ್ಮಾನವನ್ನು ಮುಂದಿನ ಪ್ರಾಧಿಕಾರದ ಸಭೆಯಲ್ಲಿ ನೀಡಲಾಗುವದು ಜಿಲ್ಲಾಧಿಕಾರಿ ಹೇಳಿದರು.
ಸಭೆಯಲ್ಲಿ ಪ್ರಾಧಿಕಾರದ ಸದಸ್ಯರಾದ ಜಿಲ್ಲಾ ಪೊಲೀಸ್ ಅಧೀಕಕ್ಷಿ ಸುಮನ್ ಅವರು ಮಾತನಾಡಿ ಸಾರ್ವಜನಿಕರ ಹಿತರಕ್ಷಣೆಗೆ ಕಾನೂನಿನಲ್ಲಿ ಅವಕಾಶ ನೀಡಿರುವಂತೆ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕಿದೆ. ಆ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕಿದೆ ಎಂದು ತಿಳಿಸಿದರು.
ಈಗಾಗಲೇ ಸಾರ್ವಜನಿಕರು ಬಸ್ ಸೌಕರ್ಯ ಕೋರಿ ಸಲ್ಲಿಸಿರುವ ಮನವಿಯನ್ನು ಪರಿಗಣಿಸಿ, ಮುಂದಿನ ದಿನಗಳಲ್ಲಿ ಕೊಡಗು ಜಿಲ್ಲೆಯಲ್ಲಿ ಮಾರ್ಗ ಸಮೀಕ್ಷೆ ನಡೆಸಲಾಗುವದು ಹಾಗೂ ಸಾರಿಗೆ ಸಂಪರ್ಕ ಕಲ್ಪಿಸಲು ಈ ಮನವಿಗಳನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ನೀಡಿ, ಅವರ ಕೇಂದ್ರ ಕಚೇರಿಯ ನಿರ್ದೇಶನದಂತೆ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವದು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಜೆ. ಪಿ.ಗಂಗಾಧರ ಹೇಳಿದರು.