ಮಡಿಕೇರಿ, ಮೇ 16: ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಬಳಿ ಇರುವ 19 ನೇ ಕರ್ನಾಟಕ ಬೆಟಾಲಿಯನ್ ಎನ್‍ಸಿಸಿ ನವೀಕರಣಗೊಂಡ ಕಟ್ಟಡವನ್ನು ಎನ್‍ಸಿಸಿ ಡೈರೆಕ್ಟರ್ ಜನರಲ್ ಮತ್ತು ಲೆಫ್ಟಿನೆಂಟ್ ಜನರಲ್ ಎವಿಎಸ್‍ಎಂ ರಾಜೀವ್ ಛೋಪ್ರ ಅವರು ಗುರುವಾರ ಉದ್ಘಾಟಿಸಿದರು. ಕಟ್ಟಡ ಉದ್ಘಾಟಿಸಿ ಮಾತನಾಡಿದ ಲೆಫ್ಟಿನೆಂಟ್ ಜನರಲ್ ಎವಿಎಸ್‍ಎಂ ರಾಜೀವ್ ಛೋಪ್ರ ಅವರು ಭಾರತೀಯ ಸೇನೆಯಲ್ಲಿ ಕೊಡಗಿನ ಸೇನಾನಿಗಳು ಪ್ರಮುಖ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಭಾರತೀಯ ಸೇನೆಯಲ್ಲಿ ಕೊಡಗಿನ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ, ಜನರಲ್ ಕೆ.ಎಸ್.ತಿಮ್ಮಯ್ಯ ಅವರ ಸೇವೆ ಅವಿಸ್ಮರಣೀಯವಾಗಿದೆ. ಅವರ ದೇಶ ಸೇವೆಯು ಸೇನೆಗೆ ಸೇರುವವರಿಗೆ ಮಾದರಿ ಎಂದು ಹೇಳಿದರು. ಕೊಡಗಿನಲ್ಲಿ ಅತಿವೃಷ್ಟಿ ಸಂಭವಿಸಿದ ಸಂದರ್ಭದಲ್ಲಿ ಎನ್‍ಸಿಸಿ ಕೆಡೆಟ್‍ಗಳು ಸಾರ್ವಜನಿಕರ ಸೇವೆಗೆ ಅಗತ್ಯವಾಗಿ ಶ್ರಮಿಸಿದ್ದು, ಇವರ ಸೇವೆ ಪ್ರಶಂಸನೀಯವಾಗಿದೆ. ನೂತನ ಕಟ್ಟಡವು ಎನ್‍ಸಿಸಿ ಕೆಡೆಟ್‍ಗಳಿಗೆ ಹೆಚ್ಚಿನ ಅನುಕೂಲವಾಗಲಿದ್ದು, ಉತ್ತಮ ತರಬೇತಿ ನೀಡಲು ಸಹಕಾರಿಯಾಗಿದೆ. ಕಟ್ಟಡವನ್ನು ಉತ್ತಮ ರೀತಿಯಲ್ಲಿ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ರಾಜೀವ್ ಛೋಪ್ರ ಕರೆ ನೀಡಿದರು.
ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಎನ್‍ಸಿಸಿ ಅಧಿಕಾರಿ ಮೇಜರ್ ಡಾ.ಬಿ.ರಾಘವ್ ಅವರು ಮಾತನಾಡಿ
(ಮೊದಲ ಪುಟದಿಂದ) 1954ರಿಂದ ಮಡಿಕೇರಿಯಲ್ಲಿನ ಎನ್‍ಸಿಸಿ ಹಳೇ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಕಳೆದ ವರ್ಷ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಾನಿಗೊಂಡಿದ್ದು, ಕರ್ನಾಟಕ, ಗೋವಾ ಡೈರೆಕ್ಟರೇಟ್‍ನ ಡೆಪ್ಯೂಟಿ ಡೈರೆಕ್ಟರ್ ಜನರಲ್ ಹಾಗೂ ಮಡಿಕೇರಿಯ ಕಮಾಂಡಿಂಗ್ ಆಫೀಸರ್ ಇವರ ಸಹಕಾರದಿಂದ ಕಟ್ಟಡ ರೂಪುಗೊಂಡಿದ್ದು ಸಂತಸ ತಂದಿದೆ ಎಂದರು. ಕಾರ್ಯಕ್ರಮದಲ್ಲಿ ನಗರದ 19 ನೇ ಕರ್ನಾಟಕ ಬೆಟಾಲಿಯನ್‍ನ ಕಮಾಂಡಿಂಗ್ ಆಫೀಸರ್ ಕರ್ನಲ್ ವಿ.ಎಂ.ನಾಯಕ್, ಮಂಗಳೂರಿನ ಗ್ರೂಪ್ ಕಮಾಂಡರ್ ಕರ್ನಲ್ ಅನಿಲ್ ನಾಟಿಯಾಲ್, ಬ್ರಿಗೇಡಿಯರ್ ಪೂರ್ವಿನಾಥ್ ವಿಎಸ್‍ಎಂ, ಎನ್‍ಸಿಸಿ ಅಧಿಕಾರಿ ನ್ಯಾನ್ಸಿ ಶೀಲಾ ಎನ್‍ಸಿಸಿ ಕೆಡೆಟ್‍ಗಳು ಹಾಗೂ ಇತರರು ಇದ್ದರು.