ವೀರಾಜಪೇಟೆ, ಮೇ 17: ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಕ್ಕ-ಪಕ್ಕದ ಗ್ರಾಮಗಳಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು ಕೃಷಿ ಭೂಮಿಗೆ ಲಗ್ಗೆಯಿಟ್ಟು ಫಸಲು, ತೋಟಗಳನ್ನು ಧ್ವಂಸಗೊಳಿಸುತ್ತಿರುವ ಬಗ್ಗೆ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

ತೋಟಕ್ಕೆ ನುಗ್ಗುವ ಕಾಡಾನೆಗಳು ಬಾಳೆ, ಕಾಫಿ, ಹಲಸು, ಮಾವು, ಕರಿಮೆಣಸು ಬಳ್ಳಿಗಳನ್ನು ಧ್ವಂಸಗೊಳಿಸಿದೆ. ಈ ಬಾರಿ ಮಳೆ ಅಭಾವದಿಂದ ಈ ಭಾಗದ ರೈತರು ಕಂಗೆಟಿದ್ದರೆ, ನಿರಂತರ ವಾಗಿ ಕಾಡಾನೆಗಳು ಕಾಫಿ ತೋಟಗಳಲ್ಲಿ ಸಂಚರಿಸುವ ಮೂಲಕ ಬೆಳೆ ಮಣ್ಣುಪಾಲಾಗುತ್ತಿವೆ.

ಈ ಹಿಂದೆ ದ್ವಿಚಕ್ರ ವಾಹನದಲ್ಲಿ ಸಂಚರಿಸುವ ಸಂದರ್ಭ ಹಾಗೂ ವಿಹಾರಕ್ಕೆ ತೆರಳುವ ಸಂದರ್ಭ ಇತರೆಡೆಗಳಲ್ಲಿ ವಾಹನದ ಮೇಲೆ ದಾಳಿ ಎಸಗಿರುವದು ಜನಮಾನಸದಲ್ಲಿ ಇನ್ನೂ ಹಚ್ಚಹಸಿರಾಗಿಯೇ ಉಳಿದಿದೆ.

ಕಾಡಾನೆ ಹಾವಳಿ ಕುರಿತು ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿದರೂ ಸೂಕ್ತ ಸ್ಪಂದನ ದೊರೆತ್ತಿಲ್ಲ. ಬೆಳೆ ನಷ್ಟ ಕುರಿತು ಅರಣ್ಯ ಇಲಾಖೆಗೆ ಅರ್ಜಿ ಸಲ್ಲಿಸಿದರೂ ಯಾವದೇ ಪರಿಹಾರ ನೀಡಿಲ್ಲ, ಅಲ್ಲದೇ ಶಾಶ್ವತವಾಗಿ ಆನೆಗಳನ್ನು ಕಾಡಿಗೆ ಅಟ್ಟುವ ಕೆಲಸ ಮಾಡಿಲ್ಲ. ಕಾಡಾನೆಗಳ ಹಿಂಡು ಕಾಫಿ ತೋಟದಲ್ಲಿ ಬಿಡು ಬಿಟ್ಟು ಗ್ರಾಮದ ರಸ್ತೆಯಲ್ಲಿ ಭಯವಿಲ್ಲದೆ ಮುಕ್ತವಾಗಿ ಓಡಾಡುತ್ತವೆ. ಇದರಿಂದ ತೋಟದ ಕಾರ್ಮಿಕರು ಕೆಲಸಕ್ಕೆ ಬರಲು ಹೆದರುತ್ತಾರೆ.. ಕಾಫಿ ತೋಟ ಕಾಡಾನೆಗಳ ಪುಂಡಾಟಕ್ಕೆ ಬಲಿಯಾಗಿ ಬರಿದಾಗುತ್ತಿದೆ,

ಆನೆ ಓಡಿಸಲು 4-5 ಪಟಾಕಿ, ಐದಾರು ತೋಟ ಹಾಗೂ ಒಂದು ಬಂದೂಕು ಹಿಡಿದು ಮೂರು ನಾಲ್ಕು ಜನ ಬರುತ್ತಾರೆ. ಇವರಿಂದ 4 ಗ್ರಾಮದಲ್ಲಿರುವ ಆನೆಯನ್ನು ಓಡಿಸಲು ಸಾಧ್ಯವೇ ಎಂದು ಗ್ರಾಮಸ್ತರು ಪ್ರಶ್ನಿಸುತ್ತಾರೆ. ಕೂಡಲೇ ಕಾರ್ಯಾಚರಣೆ ಕೈಗೊಂಡು ಕಾಡಾನೆಗಳನ್ನು ಅರಣ್ಯಕ್ಕೆ ಸೇರಿಸುವ ಕೆಲಸ ಮಾಡಲಿ ಎಂದು ಪತ್ರಿಕೆ ಮುಖಾಂತರ ಆಗ್ರಹಿದ್ದಾರೆ.

ಅರಣ್ಯದಲ್ಲಿ ಮೇವಿನ ಕೊರತೆಯಿಂದಾಗಿ ಹೊರದಾಟುವ ಆನೆಗಳು ಕೆದಮುಳ್ಳೂರು, ಪಾಲಂಗಾಲ ಹಾಗೂ ಅಕ್ಕಪಕ್ಕದ ಗ್ರಾಮಗಳಲ್ಲಿ ಲೂಟಿ ಮಾಡುವದು ನಿತ್ಯದ ಹಾವಳಿಯಾಗಿದೆ. ಕಷ್ಟಪಟ್ಟು ಬೆಳೆದ ಬೆಳೆ, ಮರಗಳು, ತೆಂಗು, ಮಾವು, ಕಾಫಿ, ಬಾಳೆ ಸೇರಿದಂತೆ ಎಲ್ಲವನ್ನೂ ಹಾಳುಮಾಡುವ ಪ್ರವೃತ್ತಿಯನ್ನು ನಿತ್ಯ ಕಾಯಕವನ್ನಾಗಿಸಿಕೊಂಡಿವೆ.

ಪ್ರತಿನಿತ್ಯ ಸಂಜೆಯಾಯಿತೆಂದರೆ ಹೊರಬರುವ ಹಿಂಡು ಆನೆಗಳು ತೋಟಗಳಿಗೆ ದಾಂಗುಡಿ ಇಡುತ್ತವೆ. ತೋಟಗಳಿಗೆ ಬರುತ್ತಿದ್ದಂತೆ ಸಿಕ್ಕ ಬೆಳೆಗಳನ್ನು ತಿಂದು, ತುಳಿದು ನಾಶಪಡಿಸುತ್ತವೆ.

ಜಿಲ್ಲೆಯ ಬಹುತೇಕ ಪ್ರದೇಶಗಳಲ್ಲಿ ಕಾಡಾನೆಗಳು ನಿತ್ಯ ಹಾವಳಿ ನಡೆಸುತ್ತಿದ್ದು ಇದರಿಂದ ರೈತರು ತಮ್ಮ ಬೆಳೆಗಳನ್ನು, ಕಾರ್ಮಿಕರು ತಮ್ಮ ಜೀವವನ್ನು ಕಳೆದುಕೊಂಡಿದ್ದಾರೆ. ರಾತ್ರಿ-ಹಗಲು ಜನರು ಭಯದಿಂದಲೇ ಸಂಚರಿಸುತ್ತಿದ್ದಾರೆ. ಇಂದು ಕೊಡಗಿನ ರೈತರನ್ನು ಕಾಡುತ್ತಿರುವ ಮೊದಲ ಸಮಸ್ಯೆ ಕಾಡಾನೆಯ ನಿರಂತರ ಧಾಳಿ. ಈ ಹಾವಳಿಗಳಿಗೆ ಸರಕಾರಗಳ ದೋರಣೆಗಳೇ ಕಾರಣ.

ಸರಕಾರದ ಒಡೆತನದಲ್ಲಿರುವ ಕಾಡಿನಲ್ಲಿ ಆನೆಗಳನ್ನೊಳಗೊಂಡ ಪ್ರಾಣಿಗಳಿಗೆ ಅಗತ್ಯವಾದ ನೈಸರ್ಗಿಕ ಮರಗಳನ್ನು ಬೆಳೆಯುವದಕ್ಕೆ ಬದಲಾಗಿ ಕಾಡನ್ನು ಲಾಭ ತರುವ ಪ್ರದೇಶವಾಗಿ ಪರಿಗಣಿಸಿ ತೇಗದ ಮರಗಳನ್ನೇ ಸರಕಾರ ನೆಟ್ಟಿತು, ಕೆರೆಗಳ ಹೂಳೆತ್ತಲಿಲ್ಲ. ಕಾಡಿನ ಅಭಿವೃದ್ಧಿಗೆಂದು ರೂಪುಗೊಂಡ ಯೋೀಜನೆಗಳು ಪುಸ್ತಕದಲ್ಲೇ ಉಳಿದವು ಅಥವಾ ಸಮರ್ಪಕವಾಗಿ ಅನುಷ್ಠಾನಕ್ಕೆ ಬರಲಿಲ್ಲ. ತನ್ನ ದೋರಣೆಗಳನ್ನು ಬದಲಾಯಿಸಿ ಜನರ, ಕೃಷಿಯ ರಕ್ಷಣೆ ನಡೆಸುವದರ ಬದಲು ಸತ್ತನಂತರ ಹೆಚ್ಚು ಪರಿಹಾರ ಕೊಡುವದರಲ್ಲೆ ತನ್ನ ಸಾಧನೆ ಅಡಗಿದೆ ಎಂದು ಸರಕಾರ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದೆ. ನಿರಂತರ ಆನೆ ಧಾಳಿಯಿಂದ ಕ್ರೋಧ ಗೊಂಡಿರುವ ನಾಡಿನ ಜನತೆಯ ಕಣ್ಣಿಗೆ ಮಣ್ಣೆರೆಚಲು ಸರಕಾರ ಆನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆಯ ನಾಟಕ ಆಡಿಸಿ ಆ ಬಗ್ಗೆ ಪ್ರಚಾರ ಮಾಡುತ್ತಿದೆ.

ಆದರೆ ಬೋಳಾದ ಕಾಡಿಗೆ ಇವುಗಳನ್ನು ಅಟ್ಟುವದರಿಂದ ಏನೂ ಪ್ರಯೋಜನವಿಲ್ಲ ಎಂದು ಅನುಭವ ತೋರಿಸಿಕೊಟ್ಟಿದೆ. ಆನೆಯಿಂದ ಕೊಲ್ಲಲ್ಪಟ್ಟವರಿಗೆ ಪರಿಹಾರ ಕೊಡುವದು ಮುಖ್ಯವಲ್ಲ. ಅಗತ್ಯವಿರುವದು ಅವರ ಜೀವ ಮತ್ತು ರೈತರ, ಕೃಷಿಕರ ಬೆಳೆಗಳ ರಕ್ಷಣೆ.

ಸಂಜೆ ಆಗುತ್ತಿದ್ದಂತೆ ಪದೇ ಪದೇ ಗ್ರಾಮಗಳತ್ತ ಬರುತಿದ್ದು, ರೈತರು ಬೆಳೆದ ಬೆಳೆಗಳನ್ನು ನಾಶ ಮಾಡುತ್ತಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಯಾವದೇ ಶಾಶ್ವತ ಕ್ರಮಕೈಗೊಳ್ಳುತಿಲ್ಲ. ಎನ್ನುವದು ಗ್ರಾಮಸ್ಥರ ನಿತ್ಯ ಗೋಳಾಗಿದೆ.

ನೆಪ ಮಾತ್ರಕ್ಕೆ ಭೇಟಿ : ಆನೆಗಳು ರಾತ್ರಿ ವೇಳೆ ಗ್ರಾಮಗಳತ್ತ ಬರದಂತೆ ತಡೆಯದ ಅರಣ್ಯ ಅಧಿಕಾರಿಗಳು, ದಾಳಿ ಮಾಡಿ ಬೆಳೆ ನಷ್ಟ ಮಾಡಿದ ಮೇಲೆ ಸ್ಥಳಕ್ಕೆ ಬಂದು ಭೇಟಿ ನೀಡುತ್ತಾರೆ. ಅರ್ಜಿ ನೀಡಿ ಪರಿಹಾರ ಕೊಡುತ್ತೇವೆ ಎಂಬ ಉತ್ತರ ನೀಡುತ್ತಾರೆ. ಆದರೆ ಅವುಗಳನ್ನು ಕಾಡಿಗಟ್ಟುವ ಕೆಲಸ ಮಾತ್ರ ಆಗುತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಒತ್ತಾಯ : ನೂರಾರು ಕೃಷಿಕರಿಗೆ ಕಳೆದ ವರ್ಷದ ಪರಿಹಾರ ನೀಡಿಲ್ಲ ಎಂಬ ಆರೋಪ ಕೇಳಿ ಬರುತಿದ್ದು, ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮವಹಿಸಿ ಬೆಳೆ ಕಳೆದುಕೊಂಡ ಕೃಷಿಕರಿಗೆ ಹೆಚ್ಚಿನ ಪರಿಹಾರ ದೊರಕಿಸಿಕೊಂಡಬೇಕು ಎಂದು ಕೃಷಿಕರು ಮತ್ತು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಕೂಡಲೇ ಸಂಬಂಧಿಸಿದ ಅರಣ್ಯ ಅಧಿಕಾರಿಗಳು ಗ್ರಾಮದಲ್ಲಿ ಬೀಡು ಬಿಟ್ಟು ದಾಂಧಲೆ ನಡೆಸುತ್ತಿರುವ ಕಾಡಾನೆಗಳನ್ನು ಕಾಡಿಗೆ ಅಟ್ಟುವಂತೆ ಆಗ್ರಹಿಸಿದ್ದಾರೆ. - ರಜಿತ ಕಾರ್ಯಪ್ಪ