ಸಿದ್ದಾಪುರ, ಮೇ 16: ನೆಲ್ಯಹುದಿಕೇರಿಯ ರ್ಯಾಂಬೋ ಯುವ ಸಂಘದ ವತಿಯಿಂದ ನೆಲ್ಯಹುದಿಕೇರಿ 3 ನೇ ವಾರ್ಡ್‍ನ ಆಟಗಾರರಿಗೆ ನಡೆಸಲಾದ ರ್ಯಾಂಬೋ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಜಾಗ್ವರ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ರೋಚಕ ಫೈನಲ್ ಪಂದ್ಯಾಟದಲ್ಲಿ ಲಯನ್ಸ್ ತಂಡವನ್ನು ಮಣಿಸಿ, ಪ್ರಶಸ್ತಿಗೆ ಮುತ್ತಿಟ್ಟಿದೆ. ಪಂದ್ಯಾವಳಿಯಲ್ಲಿ ಒಟ್ಟು 7 ತಂಡಗಳು ಭಾಗವಹಿಸಿದ್ದು, ಮೂರು ದಿನಗಳ ಕಾಲ ನಡೆಯಿತು.

ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಸಿಟಿ ಬಾಯ್ಸ್ ಯುವಕ ಸಂಘದ ಅಧ್ಯಕ್ಷ ಎ.ಎಸ್ ಮುಸ್ತಫ, ಗ್ರಾಮೀಣ ಭಾಗದಲ್ಲಿ ಲೀಗ್ ಮಾದರಿಯ ಕ್ರೀಡಾಕೂಟ ಹಮ್ಮಿಕೊಂಡಿರುವದು ಶ್ಲಾಘನೀಯ. ಸಿದ್ದಾಪುರ ಹಾಗೂ ನೆಲ್ಯಹುದಿಕೇರಿ ವ್ಯಾಪ್ತಿಯಲ್ಲಿ ಸಾರ್ವಜನಿಕ ಮೈದಾನದ ಕೊರತೆ ಇದ್ದು, ಹೋರಾಟದ ಮೂಲಕ ಮುಂದಿನ ದಿನಗಳಲ್ಲಿ ಮೈದಾನವನ್ನು ಪಡೆಯಬೇಕು ಎಂದರು.

ಕೆ.ಸಿ.ಎಲ್ ಅಧ್ಯಕ್ಷ ರೆಜಿತ್ ಕುಮಾರ್ ಮಾತನಾಡಿ, ವಾರ್ಡ್ ಮಟ್ಟದಲ್ಲಿ ಸುಮಾರು 70 ಕ್ರೀಡಾಪಟುಗಳಿಗೆ ಈ ಪಂದ್ಯಾವಳಿ ವೇದಿಕೆ ಒದಗಿಸಿದೆ. ಗ್ರಾಮೀಣ ಭಾಗದ ಪ್ರತಿಭೆಗಳನ್ನು ಗುರುತಿಸುತ್ತಿರುವದು ಶ್ಲಾಘನೀಯ ಎಂದರು.

ಕಾರ್ಯಕ್ರಮದಲ್ಲಿ ಪಕ್ಷಿಪ್ರಿಯ ಗಣೇಶ್, ಉದ್ಯಮಿ ವಂಡ್ರಾಣಿಕ್ಕಲ್ ಸುರ, ವರ್ಗೀಸ್, ರ್ಯಾಂಬೋ ಯುವ ಸಂಘದ ಅಧ್ಯಕ್ಷ ಸಾಬು ವರ್ಗೀಸ್, ಮೈದಾನ ದಾನಿಗಳಾದ ಜನಾರ್ದನ ಪೂಜಾರಿ ಸೇರಿದಂತೆ ಇನ್ನಿತರರು ಇದ್ದರು.

ವಿಜೇತ ತಂಡಕ್ಕೆ ಟ್ರೋಫಿ ಹಾಗೂ ನಗದು ಬಹುಮಾನ ವಿತರಿಸಲಾಯಿತು.