ಚೆಟ್ಟಳ್ಳಿ, ಮೇ 16: ಕುಶಾಲನಗರದ ಪ್ರವಾಸಿ ಕೇಂದ್ರ ನಿಸರ್ಗಧಾಮಕ್ಕೆ ಪ್ರವಾಸಿಗರ ದಂಡು ಆಗಮಿಸುತ್ತಿದ್ದಾರೆ. ಪ್ರವಾಸಿ ತಾಣದ ಮುಂಭಾಗ ಝೀಬ್ರಾ ಲೈನ್ ಹಾಗೂ ಬ್ಯಾರಿಕೇಡನ್ನು ಅಳವಡಿಸಿ ಸಂಭವಿಸಲಿರುವ ಅನಾಹುತಗಳನ್ನು ತಡೆಗಟ್ಟಬೇಕು ಎಂದು ಪ್ರವಾಸಿಗರು ಹಾಗೂ ಸ್ಥಳೀಯರು ಆಗ್ರಹಿಸಿದ್ದಾರೆ.

ಬೇಸಿಗೆ ರಜೆಯನ್ನು ಕಳೆಯಲು ಪ್ರವಾಸಿಗರು ಕೊಡಗಿನತ್ತ ಪಯಣಿಸುತ್ತಿದ್ದಾರೆ. ಪ್ರವಾಸಿಗರ ಸಂಖ್ಯೆ ಹೆಚ್ಚಾಗುವದರೊಂದಿಗೆ ವಾಹನ ದಟ್ಟಣೆ ಕೂಡಾ ಅಧಿಕವಾಗುತ್ತಿದೆ.

ನಿಸರ್ಗಧಾಮದ ಬಳಿಯಿರುವ ರಸ್ತೆಯಲ್ಲಿ ಝೀಬ್ರಾ ಲೈನ್ ಹಾಗೂ ಬ್ಯಾರಿಕೇಡ್ ಇಲ್ಲದ ಕಾರಣ ಪ್ರವಾಸಿಗರಿಗೆ ರಸ್ತೆಯನ್ನು ದಾಟಲು ಸಮಸ್ಯೆ ಎದುರಾಗಿದೆ. ರಾಜ್ಯ ಹೆದ್ದಾರಿಯಲ್ಲಿ ಒಂದೇ ಸಮನೆ ಬೃಹತ್ ವಾಹನಗಳು ಸಂಚರಿಸುತ್ತಿದ್ದು, ರಸ್ತೆಯನ್ನು ದಾಟಲು ತೊಂದರೆಯಾಗುತ್ತಿದೆ. ರಸ್ತೆಯ ಎರಡೂ ಭಾಗದಿಂದ ವಾಹನಗಳು ಬರುತ್ತಿರುವ ಕಾರಣ ಪ್ರವಾಸಿಗರಿಗೆ ತೊಂದರೆಯಾಗುತ್ತಿದೆ.

ನಿಸರ್ಗಧಾಮದ ಬಳಿ ಆಟೋ ನಿಲ್ದಾಣದ ಕೊರತೆಯಿದೆ. ಪ್ರವಾಸಿಗರಾಗಲೀ, ಸ್ಥಳೀಯರೇ ಆಗಲೀ ಆಟೋ ಚಾಲಕರು ಬಾಡಿಗೆಗೆ ಕರೆದೊಯ್ಯುವ ವೇಳೆ ಅನಾಹುತಗಳು ಸಂಭವಿಸುವ ಸಾಧ್ಯತೆ ಗಳು ಹೆಚ್ಚಿವೆ. ಇಲ್ಲಿ ಯಾವ ಹೋಮ್ ಗಾರ್ಡ್‍ಗಳು ಕೂಡಾ ಕಾರ್ಯ ನಿರ್ವಹಿಸು ತ್ತಿಲ್ಲ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಪ್ರವಾಸಿ ತಾಣದ ಬಳಿ ಪ್ರವಾಸಿಗರು ವಾಹನಗಳ ನಡುವೆ ಸಿಲುಕಿ ರಸ್ತೆದಾಟಲು ಪರದಾಡುತ್ತಿರುವ ದೃಶ್ಯಗಳು ಗೋಚರಿಸಿವೆ. ಪಟ್ಟಣದಲ್ಲಾಗಲೀ, ಪಟ್ಟಣದಿಂದ ಆಚೆಯಾಗಲೀ ಅನಾವಶ್ಯಕ ಸ್ಥಳಗಳಲ್ಲಿ ಬ್ಯಾರಿಕೇಡ್‍ಗಳನ್ನು ಹಾಕಿರುವದನ್ನು ನೋಡಬಹುದು. ಇಂತಹ ಬ್ಯಾರಿಕೇಡ್‍ಗಳನ್ನು ಅವಶ್ಯಕತೆಯಿರುವ ಸ್ಥಳಗಳಿಗೆ ಹಾಕಿದ್ದಲ್ಲಿ ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ಅನುಕೂಲವಾಗಲಿದೆ.

ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರವಾಸಿ ತಾಣದ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ಪ್ರವಾಸಿಗರ ಸುರಕ್ಷತೆಗೆ ಕ್ರಮ ಕೈಗೊಳ್ಳಬೇಕಿದೆ.