ಮಡಿಕೇರಿ, ಮೇ 16: ಸರ್ವೋಚ್ಚ ನ್ಯಾಯಾಲಯದ ಸೂಚನೆಯ ಅನ್ವಯ ರಾಜ್ಯದಲ್ಲಿ ಜಾರಿಗೆ ಬಂದಿರುವ ಮರಳು ನೀತಿಯನ್ನು ಕಳೆದ ಐದು ವರ್ಷಗಳ ಅವಧಿಯಲ್ಲಿ ಅಧಿಕಾರಕ್ಕೆ ಬಂದ ಸರ್ಕಾರಗಳು ಸಮರ್ಪಕವಾಗಿ ಅನುಷ್ಠಾನಗೊಳಿಸದೆ ಅಕ್ರಮ ಮರಳು ದಂಧೆಗೆ ಪ್ರೋತ್ಸಾಹ ನೀಡುವ ಮೂಲಕ ಜನರನ್ನು ವಂಚನೆಗೊಳಪಡಿಸಿವೆ ಎಂದು ಸಿಪಿಐಎಂ ಆರೋಪಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ಜಿಲ್ಲಾ ಕಾರ್ಯದರ್ಶಿ ಡಾ.ಇ.ರಾ. ದುರ್ಗಾಪ್ರಸಾದ್ ಅವರು, ಹಿಂದಿನ ಸರ್ಕಾರಗಳು ಅನುಸರಿಸಿದ ಧೋರಣೆಯನ್ನೆ ಈಗಿನ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಮುಂದುವರೆಸಿಕೊಂಡು ಹೋಗುತ್ತಿದೆಯೆಂದು ಟೀಕಿಸಿದರು.
ಅಕ್ರಮ ಮರಳುಗಾರಿಕೆಯನ್ನು ನಿಯಂತ್ರಿಸಲು ಸಮಾನ ನೀತಿಯೊಂದನ್ನು ರೂಪಿಸಬೇಕೆಂದು ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯಕ್ಕೆ ನ್ಯಾಯಾಲಯ ನೀಡಿದ ನಿರ್ದೇಶನದ ಹಿನ್ನೆಲೆಯಲ್ಲಿ ಉಪ ಖನಿಜಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಕರಡು ನಿಯಮವನ್ನು ರೂಪಿಸಿದೆ. ಅದನ್ನೆ ಆಧಾರವಾಗಿಟ್ಟುಕೊಂಡು ಕರ್ನಾಟಕ ರಾಜ್ಯ ಸರ್ಕಾರ ಉಪ ಖನಿಜ ನಿಯಮಗಳಿಗೆ ತಿದ್ದುಪಡಿ ತಂದು ಅದಕ್ಕೆ 2013ರ ನವೆಂಬರ್ 22 ರಂದು ಸಚಿವ ಸಂಪುಟ ಅನುಮೋದನೆಯನ್ನೂ ನೀಡಿದೆ. ಅದರ ಅನ್ವಯ ಮರಳು ಗಣಿಗಾರಿಕೆಗೆ ಪರವಾನಗಿ ನೀಡುವದು ಮತ್ತು ಅಕ್ರಮ ತಡೆಯುವ ಜವಾಬ್ದಾರಿಯನ್ನು ಜಿಲ್ಲಾಧಿಕಾರಿಗಳ ನೇತೃತ್ವದ ಸಮಿತಿಗೆ ನೀಡಲಾಗಿದೆ. ಆದರೆ, ಈ ಸಮಿತಿಗಳು ತಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸುವಲ್ಲಿ ವಿಫಲವಾಗಿವೆ ಎಂದು ಆರೋಪಿಸಿದರು.
ಸಮಿತಿಯಲ್ಲಿ ಕಂದಾಯ, ಗÀಣಿ ಮತ್ತು ಭೂ ವಿಜ್ಞಾನ, ಲೋಕೋಪಯೋಗಿ, ಪೊಲೀಸ್, ಅರಣ್ಯ ಮತ್ತು ಪರಿಸರ ಇಲಾಖೆಯ ಅಧಿಕಾರಿಗಳಿದ್ದು, ಈ ಎಲ್ಲಾ ಇಲಾಖಾ ಅಧಿಕಾರಿಗಳಿಗು ಅಕ್ರಮ ಮರಳುಗಾರಿಕೆಯ ವಿರುದ್ಧ ದೂರು ದಾಖಲಿಸುವ ಅಧಿಕಾರ ನೀಡಲಾಗಿದೆ. ಉಪ ವಿಭಾಗಾಧಿಕಾರಿ ನೇತೃತ್ವದ ತಾಲ್ಲೂಕು ಸಮಿತಿಗಳು ಮರಳು ಬ್ಲಾಕ್ಗಳನ್ನು ಗುರುತಿಸಿ ಅವುಗಳನ್ನು ಟೆಂಡರ್ ಮೂಲಕ ವಿತರಿಸಬೇಕಿದ್ದು, ಯಂತ್ರಗಳನ್ನು ಬಳಸದೆ ಮನುಷ್ಯರೆ ತೆಗೆದ ಮರಳನ್ನು ಲೋಕೋಪಯೋಗಿ ಇಲಾಖೆ ನಿಗದಿ ಪಡಿಸಿದ ಯಾರ್ಡ್ಗಳಿಗೆ ತಂದು ಹಾಕಬೇಕಾಗಿದೆ. ಬಳಿಕ ಅದನ್ನು ಲೋಕೋಪಯೋಗಿ ಇಲಾಖೆಯು ಸಾರ್ವಜನಿಕರಿಗೆ ಮಾರಾಟ ಮಾಡಬೇಕಾಗಿದೆ. ಆದರೆ, ಈ ಯಾವದೇ ಪ್ರಕ್ರಿಯೆಗಳನ್ನು ಜಿಲ್ಲಾಡಳಿತ ಸಮರ್ಪಕವಾಗಿ ನಡೆಸದೆ ಜನಸಾಮಾನ್ಯರಿಗೆ ಮರಳು ದೊರಕದಂತಾಗಿದ್ದು, ಕಟ್ಟಡ ಕಾರ್ಮಿಕರಿಗೆ ಕೆಲಸವಿಲ್ಲದಂತಾಗಿದೆ ಎಂದು ದುರ್ಗಾಪ್ರಸಾದ್ ದೂರಿದರು.
ಸರ್ಕಾರದ ಈ ನೀತಿ ಸಮರ್ಪಕವಾಗಿ ಅನುಷ್ಠಾನವಾದ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ಅಧೀನದಲ್ಲಿ ಮರಳು ನಿಕ್ಷೇಪಗಳನ್ನು ಗುರುತಿಸಿ ಮರಳು ವಿತರಣೆಗೆ ಕ್ರಮ ಕೈಗೊಳ್ಳುವ ಬಗ್ಗೆಯೂ 2015ರಲ್ಲಿ ಅಂದಿನ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲಾಡಳಿತಕ್ಕೆ ನಿರ್ದೇಶನವನ್ನು ನೀಡಿದ್ದರು. ಆದರೆ, ಈ ವ್ಯವಸ್ಥೆಯೂ ಕ್ರಮಬದ್ಧವಾಗಿ ಕಾರ್ಯನಿರ್ವಹಿಸದೆ ಜನಸಾಮಾನ್ಯರು ಮರಳಿಗಾಗಿ ಪರದಾಡುವಂತಾಗಿದೆಯೆಂದು ಕಳವಳ ವ್ಯಕ್ತಪಡಿಸಿದರು.
ಮರಳು ವಿತರಣೆಯ ಒಟ್ಟು ವ್ಯವಸ್ಥೆ ವಿಫಲವಾಗಿರುವದನ್ನು ರಾಜ್ಯ ಸರ್ಕಾರವೆ ಒಪ್ಪಿಕೊಂಡಿತಲ್ಲದೆ, ಮಲೇಷಿಯಾದಿಂದ ಮರಳನ್ನು ಆಮದು ಮಾಡಿಕೊಳ್ಳುವ ಪ್ರಕ್ರಿಯೆಗೂ ಮುಂದಾಗಿತ್ತು. ಆದರೆ, ಅಲ್ಲೂ ಭ್ರಷ್ಟಾಚಾರದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಇದೀಗ ಜನಸಾಮಾನ್ಯರಿಗೆ ಆ ಮರಳು ಕೂಡ ಲಭ್ಯವಾಗುತ್ತಿಲ್ಲ. ಮರಳು ಸರ್ಕಾರದ ಪ್ರಭಾವಿ ಸ್ಥಾನಗಳಲ್ಲಿರುವವರೇ ಶಾಮೀಲಾಗಿರುವ ಬಗ್ಗೆಯೂ ಆರೋಪಗಳು ಕೇಳಿ ಬರುತ್ತಿದೆ ಎಂದು ಆರೋಪಿಸಿದರು.
ಈ ಗಂಭೀರ ಸಮಸ್ಯೆಯತ್ತ ಜಿಲ್ಲಾಧಿಕಾರಿಯವರು ಗಮನ ಹರಿಸಿ ಸರ್ಕಾರದ ನೀತಿಯನ್ನು ಕಟ್ಟು ನಿಟ್ಟಾಗಿ ಅನುಷ್ಠಾನಕ್ಕೆ ತರುವದರೊಂದಿಗೆ ಜನಸಾಮಾನ್ಯರಿಗೆ ಕಡಿಮೆ ದರದಲ್ಲಿ ಮರಳು ಸಿಗುವಂತಹ ವ್ಯವಸ್ಥೆ ಮಾಡಿಕೊಡಬೇಕು ಎಂದು ಒತ್ತಾಯಿಸಿದ ದುರ್ಗಾಪ್ರಸಾದ್, ತಪ್ಪಿದಲ್ಲಿ ಪಕ್ಷದ ವತಿಯಿಂದ ಜನರನ್ನು ಸಂಘಟಿಸಿ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ನೀಡಿದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಪ್ರಮುಖರಾದ ಎ.ಸಿ.ಸಾಬು ಹಾಗೂ ಹೆಚ್.ಬಿ. ರಮೇಶ್ ಉಪಸ್ಥಿತರಿದ್ದರು.