ವೀರಾಜಪೇಟೆ, ಮೇ 16 : ನಿವೇಶನ ರಹಿತರ ಮೊದಲ ಪಟ್ಟಿಯಲ್ಲಿಯೇ ಬಾರಿಕಾಡಿನಲ್ಲಿರುವ ನಿರಾಶ್ರಿತರು ಹಾಗೂ ಸ್ಥಳೀಯರಿಗೆ ಆದ್ಯತೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಹೇಳಿದರು.

ತಾಲೂಕಿನ ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾರಿಕಾಡು ಪ್ಯೆಸಾರಿಗೆ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಅವರೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ನಿರಾಶ್ರಿತರು ಹಾಗೂ ಸ್ಥಳೀಯರೊಂದಿಗೆ ಮಾತುಕತೆ ನಡೆಸಿ ನಿವೇಶನ ಹಂಚಿಕೆಯ ಮೊದಲ ಪಟ್ಟಿಯಲ್ಲಿ 59 ನಿರಾಶ್ರಿತರು ಹಾಗೂ ಸ್ಥಳೀಯ 70 ನಿವೇಶನ ರಹಿತರಿಗೆ ನಿವೇಶನ ಹಂಚುವ ಕಾರ್ಯ ಮೇ 27 ರ ಬಳಿಕ ನಡೆಸಲಾಗುವದು ಎಂದು ಭರವಸೆ ನೀಡಿದರು. ಕೆದಮುಳ್ಳೂರು ಗ್ರಾಮ ಪಂಚಾಯಿತಿ ನೀಡಿದ ದೂರಿನ ಅನ್ವಯ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದರು.

ತಾಲೂಕು ಪಂಚಾಯಿತಿ ಸದಸ್ಯ ಪ್ರಶಾಂತ್ ಉತ್ತಪ್ಪ ಮಾತನಾಡಿ ಇಲ್ಲೇ ನೆಲೆಸಿರುವ ನಿರಾಶ್ರಿತ ಗಿರಿಜನರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಅಪರಿಚಿತರು ಇಲ್ಲಿಗೆ ಬಂದು ರಾತ್ರಿ ಸಭೆ ನಡೆಸುತ್ತಾರೆ. ಇದರಿಂದ ಸ್ಥಳಿಯರಿಗೆ ತೊಂದರೆ ಆಗುವ ಸಾಧ್ಯತೆ ಇದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರಕಾರಿ ಭೂಮಿಯಿದ್ದರೂ, ಸ್ಥಳೀಯ ಗಿರಿಜನರಿಗೆ, ಪರಿಶಿಷ್ಟ ವರ್ಗದವರಿಗೆ ನಿವೇಶನ ಅಥವಾ ಆಶ್ರಯ ಮನೆ ಇಲ್ಲ. ಅಂದು ದಿಡ್ಡಳ್ಳಿ ನಿರಾಶ್ರಿತರಿಗೆ ಕಾದಿರಿಸಿದ ನಿವೇಶನವನ್ನು ಸ್ಥಳೀಯರಿಗೆ ನೀಡಿ. ಈಗಾಗಲೇ ಪಂಚಾಯಿತಿಯಿಂದ ಪಟ್ಟಿಯನ್ನು ಜಿಲ್ಲಾಧಿಕಾರಿಗಳ ಕಚೇರಿಗೆ ಕಳುಹಿಸಲಾಗಿದೆ ಎಂದು ಹೇಳಿದರು.

ತಾಲೂಕು ಪಂಚಾಯಿತಿ ಸದಸ್ಯರ ಮಾತನ್ನು ಆಲಿಸಿದ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಸ್ಥಳಿಯ ಹಾಗೂ ನಿರಾಶ್ರಿತರನ್ನು ಪರಿಗಣನೆ ಮಾಡಿ ನಿವೇಶನ ವಿತರಣೆಗೆ ಕ್ರಮದ ಭರವಸೆ ನೀಡಿದರು. ಅಲ್ಲದೆ ಅಧಿಕಾರಿಗಳ ಪಟ್ಟಿಯಲ್ಲಿರುವ 59 ಕುಟುಂಬ ಹೊರತು ಪಡಿಸಿ ಉಳಿದವರನ್ನು ತಕ್ಷಣ ಹೊರಗೆ ಕಳುಹಿಸಿ ಎಂದು ಜಿಲ್ಲಾ ಐಟಿಡಿಪಿ ಅಧಿಕಾರಿ ಶಿವಕುಮಾರ್‍ಗೆ ಸೂಚನೆ ನೀಡಿದರು, ಇಲ್ಲವಾದರೆ ಇಲ್ಲಿ ಯಾರಿಗೂ ನಿವೇಶನ ಇಲ್ಲವಾಗುತ್ತದೆ ಎಂದು ಎಚ್ಚರಿಸಿದರು,

ನಿರಾಶ್ರಿತರ ಮುಖಂಡ ಪಿ.ಎಸ್. ಮುತ್ತ ಮಾತನಾಡಿ, ನಮ್ಮನ್ನು ಹೊರಗಿನಿಂದ ಜನರು ಬಂದು ಕೆಲಸಕ್ಕೆ ಕರೆದು ಕೊಂಡು ಹೋಗಲು ಸ್ಥಳಿಯರು ಅಡ್ಡಿ ಮಾಡುತ್ತಿದ್ದಾರೆ. ನಮಗೆ ಇಲ್ಲಿನ ಸಂಬಳ ಸಾಲದು 350 ರಿಂದ 450 ರೂ ಸಂಬಳ ಬೇಕು ಎಂದಾಗ ಸ್ಥಳಿಯರಾದ ಕರಿನೆರವಂಡ ರಮೇಶ್ ಆ ಸಂಬಳ ದುಬಾರಿಯಾಗುತ್ತದೆ ಇಂದಿನ ಆರ್ಥಿಕ ಸ್ಥಿತಿಯಲ್ಲಿ ಆದಾಯ ಸಾಧ್ಯವಿಲ್ಲ ಎಂದಾಗ ಗ್ರಾಮಸ್ಥರು ಬೆಂಬಲ ವ್ಯಕ್ತಪಡಿಸಿದ

ಜಿಲ್ಲಾಧಿಕಾರಿ ಮಕ್ಕಳನ್ನು ಶಾಲೆಗೆ ತಪ್ಪದೆ ಕಳುಹಿಸುವಂತೆ, ನೀರು ಹಾಗೂ ಶೌಚಾಲಯ ಒದಗಿಸುವ ಭರವಸೆ ನೀಡಿದರು ಜೊತೆಗೆ ವೀರಾಜಪೇಟೆ ತಾಲೂಕಿನ ಎಲ್ಲಾ ಗ್ರಾ.ಪಂ. ವ್ಯಾಪ್ತಿಯಲ್ಲಿ ನಿವೇಶನ ಗುರುತಿಸಿ ನಿವೇಶನ ರಹಿತರ ಪಟ್ಟಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ತಾ.ಪಂ. ಸದಸ್ಯ ಪ್ರಶಾಂತ್ ಮತ್ತಿತರರು ಇಲ್ಲಿಯ ನಿರಾಶ್ರಿತರಿಗೆ ಬೇರೆ ಕಡೆಗಳಲ್ಲಿ ನಿವೇಶನ ಇದೆ ಎಂದು ಪರಿಶೀಲಿಸಿ ಎಂದಾಗ, ಆಗತ್ಯವಾಗಿ ಪರಿಶೀಲಿಸುವದಾಗಿ ಜಿಲ್ಲಾಧಿಕಾರಿ ಹೇಳಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸ್ಥಳಿಯ ಜನರ ಭಾವನೆಗೆ ದಕ್ಕೆ ತರದಂತೆ, ರಾತ್ರಿ ಚಟುವಟಿಕೆಗಳ ಬಗ್ಗೆ ಸೂಕ್ತ ಎಚ್ಚರಿಕೆ ವಹಿಸುವಂತೆ ಗಿರಿಜನ ಮುಖಂಡ ಮುತ್ತರಿಗೆ ಎಚ್ಚರಿಸಿದರು.

ಜಿಲ್ಲಾಧಿಕಾರಿ ಗ್ರಾ.ಪಂ ಕಚೇರಿಯಲ್ಲಿ ಗ್ರಾಮಸ್ಥರ ಅಹವಾಲು ಆಲಿಸಿದರು. ತಾ.ಪಂ. ಸದಸ್ಯ ಪ್ರಶಾಂತ್, ಗ್ರಾ.ಪಂ. ಸದಸ್ಯ ಪರಮೇಶ್ವರ್ ಹಾಗೂ ಗ್ರಾಮಸ್ಥರು ಮಾತನಾಡಿ, ನಿರಾಶ್ರಿತರಿಂದ ಸ್ಥಳಿಯ ಜನರಿಗೆ ತೊಂದರೆ ಆಗದಂತೆ ಜಾಗ್ರತೆ ವಹಿಸಬೇಕು. ರಾತ್ರಿ ಅನ್ಯರು ಬಾರಿಕಾಡಿಗೆ ಪ್ರವೇಶ ಮಾಡದಂತೆ ಕ್ರಮ ಕೈಗೊಳ್ಳಬೇಕು. ಮಾಳೇಟಿರ ಬೋಪಣ್ಣ ಇದು ಸೂಕ್ಷ್ಮ ಪ್ರದೇಶ, ನಕ್ಸಲ್ ಚಟುವಟಿಕೆ ಇತ್ಯಾದಿಗೆ ಅವಕಾಶ ನೀಡದೆ ಜಾಗ್ರತೆ ವಹಿಸಬೇಕು ಎಂದರು. ಜಿಲ್ಲಾಧಿಕಾರಿ ಈ ಬಗ್ಗೆ ಜಿಲ್ಲಾ ಪೊಲೀಸ್ ಅಧಿಕಾರಿಗೆ ಅರಿವಿದೆ ಆ ರೀತಿ ಆದರೆ ಅವರು ಕ್ರಮ ಕೈಗೊಳ್ಳುತ್ತಾರೆ ಎಂದು ಹೇಳಿದರು.