ಮಡಿಕೇರಿ, ಮೇ 15: ಒಕ್ಕಲಿಗರ ಯುವವೇದಿಕೆ ವತಿಯಿಂದ 3ನೇ ವರ್ಷದ ಕ್ರಿಕೆಟ್ ಪಂದ್ಯಾವಳಿ ಗೋಣಿಕೊಪ್ಪ ಸಮೀಪದ ಹಾತೂರು ಫೀ.ಮಾ. ಕೆ.ಎಂ. ಕಾರ್ಯಪ್ಪ ಮೈದಾನದಲ್ಲಿ ನಡೆಯಿತು.

ಸೋಮವಾರಪೇಟೆಯ ನ್ಯಾಶ್ ತಂಡ ಚಾಂಪಿಯನ್ ಪಟ್ಟಕ್ಕೇರಿದರೆ ವೀರಾಜಪೇಟೆಯ ಕೋಟೆಕೊಪ್ಪ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಮೊದಲು ಸೋಮವಾರಪೇಟೆಯ ನ್ಯಾಶ್ ಕ್ರಿಕೆಟ್ ತಂಡವು ಮಡಿಕೇರಿಯ ರಾಯಲ್ ಬ್ರದರ್ಸ್ ವಿರುದ್ಧ ಜಯಗಳಿಸಿದರೆ, ವೀರಾಜಪೇಟೆಯ ಕೋಟೆಕೊಪ್ಪ ತಂಡವು ತಾಕೇರಿ ಸ್ಪೋಟ್ಸ್ ಕ್ಲಬ್ ವಿರುದ್ಧ ಜಯಗಳಿಸಿ ಫೈನಲ್ ಪ್ರವೇಶಿಸಿತು.

ನ್ಯಾಶ್ ಕ್ರಿಕೆಟ್ ತಂಡ ಹಾಗೂ ಕೋಟೆಕೊಪ್ಪ ತಂಡಗಳ ನಡುವೆ ನಡೆದ ಫೈನಲ್ ಪಂದ್ಯದಲ್ಲಿ ಕೋಟೆಕೊಪ್ಪ ತಂಡ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿತು. ನ್ಯಾಶ್ ಕ್ರಿಕೆಟರ್ ತಂಡವು 5 ಓವರ್‍ಗಳಲ್ಲಿ 69 ರನ್‍ಗಳನ್ನು ಕಲೆ ಹಾಕಿತು. ನಂತರ ಬ್ಯಾಟಿಂಗ್ ಮಾಡಿದ ವೀರಾಜಪೇಟೆಯ ಕೋಟೆಕೊಪ್ಪ ತಂಡ 5 ಓವರ್‍ಗಳಲ್ಲಿ 25 ರನ್‍ಗಳಿಸಿ ಸೋಲೊಪ್ಪಿಕೊಂಡಿತು.

ವೈಯಕ್ತಿಕ ಪ್ರಶಸ್ತಿಗಳು: ಬೆಸ್ಟ್ ಬೌಲರ್- ಅಭಿ ಹಾತೂರು, ಬೆಸ್ಟ್ ಕ್ಯಾಚ್ - ಪಿಂಕು ಕೋಟೆಕೊಪ್ಪ, ಬೆಸ್ಟ್ ಬ್ಯಾಟ್ಸ್ ಮೆನ್- ಪ್ರಮೋದ್ ಕೋತೂರು, ಮ್ಯಾನ್ ಆಫ್ ದಿ ಮ್ಯಾಚ್ - ಪ್ರಶಾಂತ್ ಗೌಡ, ಮ್ಯಾನ್ ಆಫ್ ದಿ ಸೀರೀಸ್- ಚೇತನ್ ಸೋಮವಾರಪೇಟೆ.

ಪಂದ್ಯಾವಳಿಯಲ್ಲಿ 15 ವರ್ಷ ಒಳಪಟ್ಟ ಮಕ್ಕಳಿಗೆ ಕ್ರಿಕೆಟ್ ಪಂದ್ಯಾವಳಿ ಹಾಗೂ ಮಹಿಳೆಯರಿಗೆ ಹಗ್ಗಜಗ್ಗಾಟ ಏರ್ಪಡಿಸಲಾಗಿತ್ತು. ಮಕ್ಕಳ ಕ್ರಿಕೆಟ್ ಪಂದ್ಯದಲ್ಲಿ ಕೋಟೆಕೊಪ್ಪ ಪ್ರಥಮ ಹಾಗೂ ಕೋತೂರು ದ್ವಿತೀಯ, ಮಹಿಳಾ ಹಗ್ಗ ಜಗ್ಗಾಟದಲ್ಲಿ ಕೈಕೇರಿ ಪ್ರಥಮ ಹಾಗೂ ಹಾತೂರು ದ್ವಿತೀಯ ಸ್ಥಾನ ಪಡೆದುಕೊಂಡಿತು.

ಈ ಸಂದರ್ಭ ದಾನಿಗಳಾದ ಡಿ.ಜೆ. ದಿನೇಶ್ ಹಾಗೂ ವಸಂತ್, ಯುವ ವೇದಿಕೆಯ ಅಧ್ಯಕ್ಷ ಪಿ.ಎನ್. ಮಹೇಶ್, ಉಪಾಧ್ಯಕ್ಷ ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಲೋಹಿತ್ ಗೌಡ, ಪೂಜಾ ಗೌಡ, ದೀಪು ದಿನೇಶ್, ಭರತ್, ನರೇಂದ್ರ ಮತ್ತಿತರರು ಹಾಜರಿದ್ದರು.