ಗೋಣಿಕೊಪ್ಪಲು, ಮೇ 15: ಕೊಡಗು ಜಿಲ್ಲಾ ಸಾರ್ವಜನಿಕ ಹಿತರಕ್ಷಣಾ ಸಮಿತಿ ಅಸ್ತಿತ್ವಕ್ಕೆ ಬಂದು 20 ವರ್ಷಗಳಾಗಿದ್ದು, ಕೊಡಗಿನ ಕೃಷಿಕರು, ರೈತರು, ಸಾರ್ವಜನಿಕರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಇನ್ನು ಮುಂದೆಯೂ ಜನಪರ ಹೋರಾಟವನ್ನು ಹಮ್ಮಿಕೊಳ್ಳಲಾಗುವದು ಎಂದು ಅಧ್ಯಕ್ಷ ಅಜ್ಜಮಾಡ ಕಟ್ಟಿ ಮಂದಯ್ಯ ಘೋಷಣೆ ಮಾಡಿದರು.

ಶ್ರೀಮಂಗಲ ಕಂದಾಯ ಇಲಾಖಾಧಿಕಾರಿಗಳ ದರ್ಪದ ವಿರುದ್ಧ 20 ವರ್ಷಗಳ ಹಿಂದೆ ಆರಂಭಗೊಂಡ ಹೋರಾಟ ಮುಂದೆ ಕೊಡಗು ಸಾರ್ವಜನಿಕ ಹಿತರಕ್ಷಣಾ ಸಮಿತಿ ಅಸ್ತಿತ್ವಕ್ಕೆ ನಾಂದಿಯಾಯಿತು ಎಂದು ಗೋಣಿಕೊಪ್ಪಲಿನ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಜರುಗಿದ 20ನೇ ವಾರ್ಷಿಕ ಮಹಾ ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿ ಅಭಿಪ್ರಾಯಪಟ್ಟರು.

ಕೊಡಗು ರೈತರ ಸಾಲ ಮನ್ನಾ, ವಿವಿಧ ಇಲಾಖೆಗಳಿಂದ ಆಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿಯಾಗಿ ಹೋರಾಟ ಮಾಡಲಾಗಿದ್ದು, ಇನ್ನು ಮುಂದೆ ಭತ್ತ ಬೆಳೆಯುವ ರೈತರಿಗೆ ಸೂಕ್ತ ಕಾಲದಲ್ಲಿ ಬೆಂಬಲ ಬೆಲೆ ದೊರೆಯುವ ನಿಟ್ಟಿನಲ್ಲಿ, ಜಲಪ್ರಳಯ ಹಾಗೂ ಅತಿವೃಷ್ಟಿ ಸಂದರ್ಭ ನೀಡಲಾದ ಪರಿಹಾರ ಮೊತ್ತದ ತಾರತಮ್ಯ ಧೋರಣೆಯ ಬಗ್ಗೆಯೂ ಮುಂದೆ ಸಾರ್ವಜನಿಕ ಪ್ರತಿಭಟನೆ ಹಮ್ಮಿಕೊಂಡು ಸರ್ಕಾರದ ಗಮನ ಸೆಳೆಯಲಾಗುವದು. ಕಾಡಾನೆ, ಹುಲಿ ಹಾಗೂ ಕಾಡುಹಂದಿ ಉಪಟಳದಿಂದಾಗಿ ಕೊಡಗಿನ ಜನತೆ ತೀವ್ರ ಆತಂಕ ಎದುರಿಸುತ್ತಿದ್ದು, ಪರಿಹಾರ ವಿಳಂಬ ಹಾಗೂ ಆನೆ-ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿಯೂ ಕೊಡಗಿನ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಅರಣ್ಯ ಇಲಾಖೆ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗುವದು ಎಂದು ಹೇಳಿದರು.

ಇದೇ ಪ್ರಥಮ ಬಾರಿಗೆ ಕೊಡಗು ಜಿಲ್ಲಾ ಸಾರ್ವಜನಿಕ ಹಿತರಕ್ಷಣಾ ಕಾರ್ಯಕಾರಿ ಸಮಿತಿಗೆ ಮಹಿಳಾ ಸದಸ್ಯರನ್ನೂ ಆಯ್ಕೆ ಮಾಡಲಾಗಿದೆ ಎಂದು ಪ್ರಕಟಿಸಿದರು. ಮಹಾಸಭೆಯಲ್ಲಿ ಕಾರ್ಯಕಾರಿ ಸಮಿತಿಗೆ ಗುಮ್ಮಟ್ಟೀರ ಅಕ್ಕಮ್ಮ, ಸುಳ್ಳೇರ ಸ್ವಾತಿ ಅಜ್ಜಮಾಡ ಸ್ಮಿತಾ ಅವರನ್ನು ಆಯ್ಕೆ ಮಾಡಲಾಯಿತು. ಇದೇ ಸಂದರ್ಭ ಸಮಿತಿಯ ಕಾರ್ಯಚಟುವಟಿಕೆಯನ್ನು ಮತ್ತಷ್ಟು ಚುರುಕುಗೊಳಿಸಲು ಇತ್ತೀಚೆಗೆ ಹುಲಿ ದಾಳಿಯಿಂದ ಸಾವನ್ನಪ್ಪಿದ ಜಾನುವಾರು ಕಳೇಬರವನ್ನು ಪೆÇನ್ನಂಪೇಟೆ ವಲಯಾರಣ್ಯಾಧಿಕಾರಿ ಕಚೇರಿ ಮುಂಭಾಗ ತಂದು ಹೋರಾಟ ರೂಪಿಸಿದ್ದ ಮಲ್ಲಂಗಡ ರಂಜ ಉತ್ತಪ್ಪ, ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ನಿವೃತ್ತ ಪ್ರಾಂಶುಪಾಲ ಬಾಚೀರ ಕಾರ್ಯಪ್ಪ, ಹೋರಾಟಗಾರ ಸಿ.ಎನ್. ವಿಶ್ವನಾಥ್, ಕಾಳಿಮಾಡ ಬೆಳ್ಯಪ್ಪ ಹಾಗೂ ಅಜ್ಜಮಾಡ ರಚನ್ ಅವರುಗಳನ್ನು ಸಮಿತಿಗೆ ನೂತನವಾಗಿ ಆಯ್ಕೆ ಮಾಡಲಾಯಿತು.

ತಾಲೂಕು ಅಧ್ಯಕ್ಷರ ಸಭಾತ್ಯಾಗ!

ಸಭೆ ಆರಂಭವಾಗುತ್ತಿದ್ದಂತೆಯೇ ಆಗಮಿಸಿದ ವೀರಾಜಪೇಟೆ ತಾಲೂಕು ಸಾರ್ವಜನಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಕೇಚಂಡ ಕುಶಾಲಪ್ಪ ಮತ್ತು ಜಿಲ್ಲಾಧ್ಯಕ್ಷ ಕಟ್ಟಿ ಮಂದಯ್ಯ ಅವರ ನಡುವೆ ಹೋರಾಟ ವಿಚಾರವಾಗಿ ಮಾತಿನ ಚಕಮಕಿ ನಡೆದು ಕೇಚಂಡ ಕುಶಾಲಪ್ಪ ಅವರು ತಮ್ಮ ಕಾರ್ಯದರ್ಶಿಯೊಂದಿಗೆ ಹೊರ ನಡೆದ ಘಟನೆ ನಡೆಯಿತು.

ಈ ಹಂತದಲ್ಲಿ ಸಮಿತಿ ಸದಸ್ಯರ ನಡುವೆ ಪರ-ವಿರೋಧ ಚರ್ಚೆ ನಡೆಯಿತು. ಕೊನೆಗೆ ಕೇಚಂಡ ಕುಶಾಲಪ್ಪ (ಶಿವಪ್ಪ) ಅವರು ಹಲವು ಉತ್ತಮ ಹೋರಾಟದಲ್ಲಿ ಭಾಗಿಯಾಗಿದ್ದು ಅವರನ್ನು ಕೈಬಿಡದೆ, ಸಂಧಾನ ಮಾತುಕತೆ ನಡೆಸಿ ಮತ್ತೆ ತಾಲೂಕು ಘಟಕವನ್ನು ಚುರುಕುಗೊಳಿಸುವ. ಈ ನಿಟ್ಟಿನಲ್ಲಿ ತಾನು ಮಧ್ಯಸ್ಥಿಕೆ ವಹಿಸುವದಾಗಿ ಶ್ರೀಮಂಗಲದ ಹೋರಾಟಗಾರ ಮಾಣೀರ ವಿಜಯ್ ನಂಜಪ್ಪ ಸಭೆಯಲ್ಲಿ ಅಭಿಪ್ರಾಯಪಟ್ಟರು. ನಿವೃತ್ತ ಶಿಕ್ಷಕ ಮಾಣೀರ ಅಚ್ಚಯ್ಯ ಮಾತನಾಡಿ, ಕೊಡಗು ಸಾರ್ವಜನಿಕ ಹಿತರಕ್ಷಣಾ ಸಮಿತಿ ಸಾಕು, ತಾಲೂಕು ಸಮಿತಿಗಳು ಬೇಡ. ಇದು ಅನಗತ್ಯ ವೈಷಮ್ಯಕ್ಕೆ ಕಾರಣವಾಗುತ್ತದೆ ಎಂದು ನುಡಿದರು.

ವಿಯಟ್ನಾಂ ಕಳಪೆ ಕಾಳುಮೆಣಸು

ಬಾಳೆಲೆಯ ಹೋರಾಟಗಾರ ಮಾಚಂಗಡ ಉಮೇಶ್ ಮಾತನಾಡಿ, ಇದೀಗ ಎಪಿಎಂಸಿ ಕಾಳುಮೆಣಸು ವರ್ತಕರಲ್ಲಿ ಕೆಲವರು ಮಾರಾಟ ಮಾಡುತ್ತಿದ್ದ ವಿಯಟ್ನಾಂ ಕಾಳುಮೆಣಸು ಕಳಪೆ ಗುಣಮಟ್ಟದ್ದು ಎಂದು ಪ್ರಯೋಗಾಲಯ ವರದಿ ಬಂದಿದೆ. ಈ ನಿಟ್ಟಿನಲ್ಲಿ ಎಪಿಎಂಸಿಯ ಸಂಬಂಧಿಸಿದ ಪ್ರಮುಖರು ಹಾಗೂ ವಿಯಟ್ನಾಂ ಕಾಳುಮೆಣಸು ಆಮದು ಮಾಡಿಕೊಂಡು ಕೊಡಗು ಕಾಳುಮೆಣಸಿನೊಂದಿಗೆ ಮಿಶ್ರಣ ಮಾಡಿ ಮಾರಾಟ ಮಾಡುತ್ತಿರುವವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಹೋರಾಟ ಮಾಡಬೇಕಾಗಿದೆ ಎಂದು ಸಭೆಯಲ್ಲಿ ಒತ್ತಾಯಿಸಿದರು.

ಜಿಲ್ಲೆಯಲ್ಲಿ ಆರ್.ಟಿ.ಸಿ. ಗೊಂದಲ ಹಾಗೂ ಶೀಘ್ರ ವಿಲೇವಾರಿ, ಪೆಟ್ರೋಲ್ ಪಂಪ್‍ನಲ್ಲಿ ಡೀಸೆಲ್, ಪೆಟ್ರೋಲ್ ಸರಬರಾಜಿನಲ್ಲಿ ಅವ್ಯವಹಾರ, ಕೆಲವು ಖಾಸಗಿ ಬಸ್ ಸಿಬ್ಬಂದಿಗಳಿಂದ ಹಿರಿಯ ನಾಗರಿಕರಿಗೆ ಮಾನಸಿಕ ಕಿರುಕುಳ, ಭತ್ತಕ್ಕೆ ಸೂಕ್ತ ಬೆಂಬಲ ಬೆಲೆ ಇತ್ಯಾದಿ ಕುರಿತು ಹೋರಾಟ ರೂಪಿಸುವಂತೆ ಬೆಳೆಗಾರ ಸಿ.ಎನ್. ವಿಶ್ವನಾಥ್ ಸಭೆಯಲ್ಲಿ ಒತ್ತಾಯಿಸಿದರು.

ವೀರಾಜಪೇಟೆ ತಹಶೀಲ್ದಾರ್ ಗೋವಿಂದರಾಜು ಅವರು ಮಿತಿಮೀರಿ ಲಂಚ ವಸೂಲಾತಿಯಲ್ಲಿ ತೊಡಗಿದ್ದು, ಈ ಬಗ್ಗೆಯೂ ಹೋರಾಟ ಅನಿವಾರ್ಯ ಎಂದು ಕಾಳಿಮಾಡ ತಮ್ಮು ಮುತ್ತಣ್ಣ ನುಡಿದರು. ಸಭೆಯಲ್ಲಿ ಕಟ್ಟಿ ಮಂದಯ್ಯ ಅವರು ಕೊಡುಗೆಯಾಗಿ ನೀಡಿದ ರೂ. 1 ಲಕ್ಷ ಠೇವಣಿ ಹಣ ಹಾಗೂ ಅದರ ಬಡ್ಡಿಯನ್ನು ಮತ್ತೆ 5 ವರ್ಷಗಳ ಕಾಲ ಅಧ್ಯಕ್ಷರು ಹಾಗೂ ಖಜಾಂಚಿ ಹೆಸರಿನಲ್ಲಿ ಠೇವಣಿ ಇಡುವ ಕುರಿತು ಗಮನ ಸೆಳೆಯಲಾಯಿತು. ಸಭೆಯಲ್ಲಿ ನಿರ್ದೇಶಕ ಪೆÇೀಡಮಾಡ ಉತ್ತಪ್ಪ, ಸಮಿತಿ ಉಪಾಧ್ಯಕ್ಷ ನಾಟೋಳಂಡ ಚರ್ಮಣ, ದಾದೂ ಪೂವಯ್ಯ, ಬಿ.ಎಸ್. ಕಾರ್ಯಪ್ಪ, ಮಾಣೀರ ಮುತ್ತಪ್ಪ ಮುಂತಾದವರು ಮಾತನಾಡಿದರು. ಹಿತರಕ್ಷಣಾ ಸಮಿತಿಯ ಬೈಲಾ ತಿದ್ದುಪಡಿ ಶೀಘ್ರ ಮಾಡುವಂತೆ ಒತ್ತಾಯ ಕೇಳಿಬಂತು.

ಸಭೆಯಲ್ಲಿ ಖಜಾಂಚಿ ಅಜ್ಜಿಕುಟ್ಟೀರ ಸುಬ್ರಮಣಿ, ಪ್ರಧಾನ ಕಾರ್ಯದರ್ಶಿ ಅರಮಣಮಾಡ ಸತೀಶ್ ದೇವಯ್ಯ, ಕಾರ್ಯದರ್ಶಿ ಕೊಟ್ಟಂಗಡ ಮಧು ಮಂಜುನಾಥ್ ಉಪಸ್ಥಿತರಿದ್ದರು.