ಸೋಮವಾರಪೇಟೆ ಮೇ 15 : ರಾಷ್ಟ್ರ ರಕ್ಷಣೆಗೆ ಕೊಡಗು ಜಿಲ್ಲೆ ಮಹತ್ತರವಾದ ಕೊಡುಗೆ ನೀಡಿದೆ ಸೈನಿಕರಿಗೆ ಗೌರವ ಸಿಗಬೇಕೆಂದು ಕೊಡ್ಲಿಪೇಟೆ ಕಿರಿಕೊಡ್ಲಿ ಮಠಾಧೀಶರಾದ ಶ್ರೀ ಸದಾಶಿವ ಸ್ವಾಮೀಜಿ ತಿಳಿಸಿದರು.
ಅವರು ಇಲ್ಲಿಗೆ ಸಮೀಪದ ಬ್ಯಾಡಗೊಟ್ಟ ಗ್ರಾಮದಲ್ಲಿರುವ ದಿಡ್ಡಳ್ಳಿ ನಿರಾಶ್ರಿತರ ಪುನರ್ ವಸತಿ ಕೇಂದ್ರದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು. ಕದಳಿ ಮಹಿಳಾ ವೇದಿಕೆ ಕೊಡಗು ಜಿಲ್ಲೆ, ರೋಟರಿ ಸೋಮವಾರಪೇಟೆ ಹಿಲ್ಸ್ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ, ಬಸವ ಜಯಂತಿ ಹಾಗೂ ಕಾಯಕ ದಿನಾಚರಣೆಯ ಸಮಾರೋಪ ಸಮಾರಂಭದಲ್ಲಿ ಶೌರ್ಯ ಚಕ್ರ ಪುರಸ್ಕ್ರತ ವೀರಯೋಧ ಮಹೇಶ್ ಅವರನ್ನು ಸನ್ಮಾನಿಸಿ ಮಾತನಾಡಿದರು.
ಕೊಡಗು ಜಿಲ್ಲೆ ಪುಟ್ಟ ಜಿಲ್ಲೆಯಾದರೂ ಸಹ ಅಖಂಡ ಭಾರತದ ರಕ್ಷಣೆ ಗಾಗಿ ಸಹಸ್ರಾರು ಮಂದಿ ವೀರ ಯೋದರನ್ನು ನೀಡುವ ಮೂಲಕ ರಕ್ಷಣಾ ಕ್ಷೇತ್ರದಲ್ಲಿ ತನ್ನ ಚಾಪನ್ನು ಮೂಡಿಸಿದೆ. ಫೀಲ್ಡ್ ಮಾರ್ಷಲ್ ಕಾರ್ಯಪ್ಪ, ಜನರಲ್ ತಿಮ್ಮಯ್ಯನವರÀಂತಹ ಮಹಾನ್ ವ್ಯಕ್ತಿಗಳು ಈ ಜಿಲ್ಲೆಯಲ್ಲಿ ಜನಿಸಿದವರು ಅವರು ಮಾಡಿದ ರಾಷ್ಟ್ರಸೇವೆ ಇಂದಿನ ಯುವಕರಿಗೆ ಆದರ್ಶವಾಗಬೇಕು, ಸ್ಪೂರ್ತಿ ಯಾಗಬೇಕೆಂದು ಆಶಿಸಿದರು. ಜಿಲ್ಲೆಯ ಕಿರಿಯ ಯುವಕ 27 ವರ್ಷದ ಮಹೇಶ್ ಉಗ್ರರನ್ನು ಸದೆ ಬಡಿಯುವ ಮೂಲಕ ಭಾರತಾಂಬೆಯ ರಕ್ಷಣಾ ಕಾರ್ಯದಲ್ಲಿ ಶೌರ್ಯ ಚಕ್ರ ಪ್ರಶಸ್ತಿಗೆ ಭಾಜನಾಗಿರುವದು ಜಿಲ್ಲೆಗೆ ಹೆಮ್ಮೆ ತರುವಂತಹ ಸಂಗತಿಯಾಗಿದೆ.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಸ್.ಮಹೇಶ್ ಮಾತನಾಡಿ ಈ ರಾಷ್ಟ್ರದ ಆಧಾರ ಸ್ಥಂಭಗಳಲ್ಲಿ ಸೈನಿಕರು ಒಬ್ಬರೆಂಬದು ಗಮನಾರ್ಹ ಹಾಗೂ ಹೆಮ್ಮೆ , ಭವ್ಯ ಭಾರತದ ಭವಿಷ್ಯ ಸೈನಿಕರ ಮೇಲಿದೆ ಪರರಾಷ್ಟ್ರಗಳ ಕುತಂತ್ರ ಹೆಚ್ಚುತ್ತಿದ್ದು ಭಯೋತ್ಪಾದನೆ ಎಂಬದು ರಾಷ್ಟ್ರದ ಅಡಿಪಾಯಕ್ಕೆ ಅಪಾಯಕಾರಿಯಾಗಿದೆ. ಈ ದೇಶದ ಸೈನಿಕರು ತಮ್ಮ ಜೀವನದ ಹಂಗುತೊರೆದು ನಮ್ಮೆಲ್ಲರನ್ನು ರಕ್ಷಣೆ ಮಾಡುತ್ತಿರುವದು ಅವರ ಋಣ ನಮ್ಮೆಲ್ಲರ ಮೇಲಿದೆ ಎಂದರು.
ಸಮಾರೋಪ ಸಮಾರಂಭದ ವೇದಿಕೆಯಲ್ಲಿ ಮುದ್ದಿನ ಕಟ್ಟೆ ಮಠಾಧೀಶರಾದ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಅರಣ್ಯ ಇಲಾಖೆಯ ಹುದುಗೂರು ಉಪವಲಯ ಅರಣ್ಯಾಧಿಕಾರಿ ಸತೀಶ್ಕುಮಾರ್, ಶರಣ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷ ಮಹದೇವಪ್ಪ, ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಲೇಖನಾ ಧರ್ಮೇಂದ್ರ, ಅಕ್ಕನ ಬಳಗದ ಅಧ್ಯಕ್ಷೆ ಕಮಲಮ್ಮ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಖಜಾಂಜಿ ಡಿ.ಬಿ. ಸೋಮಪ್ಪ, ಕಾರ್ಯದರ್ಶಿ ವಿರುಪಾಕ್ಷಪ್ಪ, ನಿರ್ದೇಶಕರುಗಳಾದ ಶಾಂಭಶಿವ ಮೂರ್ತಿ, ಉದಯಕುಮಾರ್, ಶಿವಲಿಂಗ, ಸೌಭಾಗ್ಯ, ಬಸವರಾಜ್, ಗಣೇಶ್, ಚಂದ್ರಕಲಾ ಮುತಾಂದವರು ಉಪಸ್ಥಿತರಿದ್ದರು. ಈ ಸಂದರ್ಭ ಅರಣ್ಯ ಇಲಾಖೆ ಸಹಯೋಗ ದೊಂದಿಗೆ ಶ್ರೀಗಂಧದ ಗಿಡಗಳನ್ನು ವಿತರಿಸುವ ಮೂಲಕ ಪರಿಸರದ ಜಾಗೃತಿ, ಅರಿವು ಮೂಡಿಸಲಾಯಿತು.