ಮಡಿಕೇರಿ, ಮೇ 15: ಮೈಸೂರಿನಿಂದ ಹುಣಸೂರು, ಪಿರಿಯಾಪಟ್ಟಣ ಮಾರ್ಗವಾಗಿ ಕೊಡಗಿನ ಗಡಿ ಕುಶಾಲನಗರ ತನಕ ಸಂಪರ್ಕಗೊಳ್ಳಲಿರುವ ರೈಲ್ವೇ ಮಾರ್ಗದ ಯೋಜನೆಗೆ ಈಗಾಗಲೇ ಹಸಿರು ನಿಶಾನೆ ದೊರೆತಿದೆ. ಈ ದಿಸೆಯಲ್ಲಿ ಮಡಿಕೇರಿಯ ಸ್ಟುವರ್ಟ್ ಹಿಲ್‍ನಲ್ಲಿ ಹಲವು ದಶಕಗಳ ಹಿಂದೆ ಇದ್ದಂತಹ ಕೇಂದ್ರ ದಕ್ಷಿಣ ರೈಲ್ವೇ ನಿಯಂತ್ರಣ ಕೊಠಡಿಗೆ ಹೊಂದಿಕೊಂಡಂತೆ ನೂತನ ಕಟ್ಟಡ ನಿರ್ಮಾಣಗೊಳ್ಳುತ್ತಿದೆ.ಅಂದಾಜು ರೂ. 1800 ಕೋಟಿ ಯೋಜನೆಯಡಿ ನಡೆಯಲಿರುವ ರೈಲ್ವೇ ಸಂಪರ್ಕ ಯೋಜನೆಯ ಅನುಷ್ಠಾನ ಸಂಬಂಧ ದೈನಂದಿನ ಕಾಮಗಾರಿ ಗಮನಿಸಲು ಮತ್ತು ಸಂಬಂಧಿಸಿದ ಅಧಿಕಾರಿಗಳು ತಂಗುವ ದಿಸೆಯಲ್ಲಿ ಸ್ಟುವರ್ಟ್ ಹಿಲ್‍ನಲ್ಲಿ ಕಟ್ಟಡ ನಿರ್ಮಿಸಲಾಗುತ್ತಿದೆ ಎಂದು ರೈಲ್ವೇ ಮಂಡಳಿಯ ತಾಂತ್ರಿಕ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಸ್ಟುವರ್ಟ್ ಹಿಲ್‍ನಲ್ಲಿ ಆರು ದಶಕಗಳ ಹಿಂದಿನ ರೈಲ್ವೇ ನಿಯಂತ್ರಣ ಕೇಂದ್ರದ ಹಳೆಯ ಕಟ್ಟಡಕ್ಕೆ ಹೊಂದಿಕೊಂಡಂತೆ, ಸುಮಾರು 12 ಕೊಠಡಿಗಳಿಂದ ಕೂಡಿದ ನೂತನ ಕಟ್ಟಡ ಕಾಮಗಾರಿ ನಡೆಯುತ್ತಿದೆ. ವರ್ಷದ ಹಿಂದೆಯೇ ರೈಲ್ವೇ ಮಂಡಳಿಯಿಂದ ಕಾಮಗಾರಿಗೆ ಚಾಲನೆ ಲಭಿಸಿದ್ದರೂ ಮಧ್ಯೆ ಕೆಲಸ ಸ್ಥಗಿತಗೊಂಡಿತ್ತು.

ಅಂದಾಜು ರೂ. 1.14 ಕೋಟಿ ವೆಚ್ಚದ ಈ ಕಾಮಗಾರಿ ನಿರ್ವಹಿಸುತ್ತಿದ್ದ ಇಲಾಖೆಯ ಗುತ್ತಿಗೆದಾರರೊಬ್ಬರು ಮೃತರಾಗಿರುವ ಕಾರಣದಿಂದಾಗಿ; ಅನಿವಾರ್ಯವೆಂಬಂತೆ ಕೆಲಸ ಸ್ಥಗಿತಗೊಳ್ಳುವಂತಾಗಿತ್ತು ಎಂದು ರೈಲ್ವೇ ಇಲಾಖೆಯ ಮೂಲಗಳು ಖಚಿತಪಡಿಸಿವೆ. ಹೀಗಾಗಿ ಹಿಂದಿನ ಗುತ್ತಿಗೆದಾರರು ಅಂದಾಜು ರೂ. 60 ಲಕ್ಷದ ಕಾಮಗಾರಿಯನ್ನು ಮೊದಲ ಹಂತದಲ್ಲಿ ಪೂರೈಸಿದ್ದರೆಂದು ಗೊತ್ತಾಗಿದೆ.

ಬೆಟ್ಟ ಶ್ರೇಣಿಯಲ್ಲಿ ಈ ರೈಲ್ವೇ ಕಟ್ಟಡ ತಲೆಯೆತ್ತುತ್ತಿರುವ ಕಾರಣ, ಮಳೆಗಾಲದಲ್ಲಿ ಸುರಕ್ಷತಾ ದೃಷ್ಟಿಯಿಂದ ಸುಮಾರು 30 ಅಡಿಗಳಷ್ಟು ಆಳದಿಂದ ಕಾಂಕ್ರೀಟ್ ಪಿಲ್ಲರ್‍ಗಳನ್ನು ಅಡಿಪಾಯಕ್ಕೆ ರಕ್ಷಣೆಗಾಗಿ ನಿರ್ಮಿಸಿದ್ದು, ಆ ನಂತರದಲ್ಲಿ ತಳಹಂತದ ಕೆಲಸದ ನಡುವೆಯೇ ಮೇಲಿನ ಕಾರಣದಿಂದ ಕೆಲಸ ನಿಂತು ಹೋಗಿತ್ತು ಎಂದು ‘ಶಕ್ತಿ’ಗೆ ಮಾಹಿತಿ ಲಭಿಸಿದೆ.

ಇದೀಗ ಒಂದು ವಾರದಿಂದ ಇದೇ ಕಾಮಗಾರಿಗೆ ಮರು ಟೆಂಡರ್ ಪ್ರಕ್ರಿಯೆ ಮುಖಾಂತರ, ಉಳಿದಿರುವ ಸುಮಾರು 70 ಲಕ್ಷ ವೆಚ್ಚದಲ್ಲಿ ಕಟ್ಟಡ ಕಾಮಗಾರಿ ನಿರ್ವಹಿಸಲಾಗುತ್ತಿದೆ ಎಂದು ರೈಲ್ವೇ ಮೈಸೂರು ವಲಯದ ತಾಂತ್ರಿಕ ಅಧಿಕಾರಿ ಕೇಶವಮೂರ್ತಿ ‘ಶಕ್ತಿ’ ಸಂಪರ್ಕಿಸಿದಾಗ ವಿವರ ನೀಡಿದ್ದಾರೆ.

ಬಹುಶಃ ಮಡಿಕೇರಿಯ ಈ ಕಟ್ಟಡ ಕಾಮಗಾರಿಯ ಬೆನ್ನಲ್ಲೇ ಮುಂದಿನ ದಿನಗಳಲ್ಲಿ ಮೈಸೂರು - ಕುಶಾಲನಗರ ನಡುವಿನ ರೈಲ್ವೇ ಸಂಪರ್ಕ ಮಾರ್ಗದ ಕಾಮಗಾರಿಗೆ ವೇಗ ಲಭಿಸುವ ಇಂಗಿತ ವ್ಯಕ್ತಪಡಿಸಿದ್ದು, ಒಟ್ಟಾರೆ ಈ ಯೋಜನೆಯ ಅನುಷ್ಠಾನವನ್ನು ಕರ್ನಾಟಕದ ಹುಬ್ಬಳ್ಳಿ ರೈಲ್ವೇ ಕಚೇರಿಯ ಮೇಲಾಧಿಕಾರಿಗಳು ಗಮನಿಸಲಿದ್ದಾರೆ ಎಂದು ಖಚಿತಪಡಿಸಿದ್ದಾರೆ.

ಅಲ್ಲದೆ, ಮುಂದಿನ ದಿನಗಳಲ್ಲಿ ಕುಶಾಲನಗರ ತನಕ ರೈಲು ಸಂಪರ್ಕಗೊಳ್ಳುವ ಕಾಮಗಾರಿಗೆ, ಮಡಿಕೇರಿ ಕಟ್ಟಡ ನಿರ್ಮಾಣದಿಂದ ಹೊಸ ಆಯಾಮ ಲಭಿಸಿದ್ದು, ಸಂಬಂಧಿಸಿದ ಯೋಜನೆಗೆ ಪೂರಕ ಮಾಹಿತಿ ಇತ್ಯಾದಿ ಭವಿಷ್ಯದಲ್ಲಿ ಮಡಿಕೇರಿಯ ಈ ನೂತನ ಕೇಂದ್ರದಲ್ಲಿ ಲಭಿಸುವ ಸಾಧ್ಯತೆ ಇದೆ.