ಸೋಮವಾರಪೇಟೆ, ಮೇ 15: ಸಮೀಪದ ಹಾನಗಲ್ಲು ಗ್ರಾ.ಪಂ. ವ್ಯಾಪ್ತಿಗೆ ಒಳಪಡುವ ಹೊಸಬೀಡು ಗ್ರಾಮದ ಕಾಲೋನಿಯ ರಸ್ತೆ ಕಾಮಗಾರಿ ಕಳಪೆಯಾಗಿದ್ದು, ಮರು ಕಾಂಕ್ರಿಟೀಕರಣ ಮಾಡದಿದ್ದಲ್ಲಿ ಪ್ರತಿಭಟನೆ ನಡೆಸುವದಾಗಿ ವೀರಭದ್ರೇಶ್ವರ ಯುವಕ ಸಂಘ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಎಚ್ಚರಿಸಿದ್ದು, ಈ ಬಗ್ಗೆ ಜಿಲ್ಲಾ ಪಂಚಾಯಿತಿಗೆ ಮನವಿ ಸಲ್ಲಿಸಿದ್ದಾರೆ.
ಹೊಸಬೀಡು ಗ್ರಾಮದಲ್ಲಿ ಅತೀ ಹೆಚ್ಚಿನ ಜನಸಂಖ್ಯೆ ಇದ್ದು, ಇಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ರಸ್ತೆ ಕೆಲ ತಿಂಗಳುಗಳಲ್ಲೇ ಗುಂಡಿ ಬಿದ್ದಿದೆ. ಕಳಪೆ ಕಾಮಗಾರಿಯಿಂದಾಗಿ ಇದೀಗ ಈ ರಸ್ತೆಯಲ್ಲಿ ಸಂಚರಿಸಲೂ ಸಹ ಸಾಧ್ಯವಾಗುತ್ತಿಲ್ಲ ಎಂದು ಸಂಘದ ಅಧ್ಯಕ್ಷ ರಮೇಶ್ ಆರೋಪಿಸಿದರು.
ಈ ಕಾಲೋನಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರೇ ಹೆಚ್ಚು ನೆಲೆಸಿದ್ದು, ಮಳೆಯಿಂದ ಹಾನಿಯಾದ ರಸ್ತೆಯನ್ನು ಪ್ರಾಕೃತಿಕ ವಿಕೋಪ ಅನುದಾನದಿಂದ ಇತ್ತೀಚೆಗೆ ಕಾಂಕ್ರಿಟ್ ರಸ್ತೆಯನ್ನಾಗಿ ಮೇಲ್ದರ್ಜೆ ಗೇರಿಸಲಾಗಿತ್ತು. ರಸ್ತೆ ನಿರ್ಮಾಣ ಮಾಡಿ ಕೆಲವೇ ದಿನಗಳಲ್ಲಿ ಕಿತ್ತು ಬರುತ್ತಿದ್ದು, ಅಲ್ಲಲ್ಲಿ ಬಿರುಕು ಬಿಟ್ಟಿದೆ ಎಂದು ಸಾರ್ವಜನಿಕರು ದೂರಿದರು. ಕಳಪೆ ರಸ್ತೆ ಕಾಮಗಾರಿ ನಿರ್ಮಾಣದ ಬಗ್ಗೆ ಹಲವು ಬಾರಿ ಇಂಜಿನಿಯರ್ ಬಳಿ ದೂರಿ ಕೊಂಡರೂ ಯಾವದೇ ಪ್ರಯೋಜನ ವಾಗಿಲ್ಲ. ಕೂಡಲೇ ರಸ್ತೆಯನ್ನು ಮರು ನಿರ್ಮಾಣ ಮಾಡಬೇಕೆಂದು ಗ್ರಾಮ ಪಂಚಾಯಿತಿ ಸದಸ್ಯರು ಆಗ್ರಹಿಸಿದರು. ಈ ಬಗ್ಗೆ ಹಾನಗಲ್ಲು ಗ್ರಾ.ಪಂ. ಸದಸ್ಯರಾದ ಹೆಚ್.ಆರ್. ಸುನಿತ, ಪ್ರಮುಖರಾದ ಪ್ರಶಾಂತ್, ರಾಜೇಶ್, ಸುರೇಶ್, ಸಂದೀಪ, ಲಿಂಗಾರಾಜು, ಸಂಘದ ಕಾರ್ಯದರ್ಶಿ ಹೆಚ್.ಎ. ವಸಂತ್ ಸೇರಿದಂತೆ ಗ್ರಾಮಸ್ಥರು, ಜಿ.ಪಂ. ಅಧಿಕಾರಿಗಳಿಗೆ ಮನವಿ ಸಲ್ಲಿಸಿ, ತಕ್ಷಣ ಕ್ರಮ ಕೈಗೊಳ್ಳದಿದ್ದಲ್ಲಿ ಪ್ರತಿಭಟನೆ ನಡೆಸುವದಾಗಿ ಎಚ್ಚರಿಕೆ ನೀಡಿದರು.