ಮಡಿಕೇರಿ, ಮೇ 14: ನಗರದ ಹಳೆಯ ಖಾಸಗಿ ಬಸ್ ನಿಲ್ದಾಣದಲ್ಲಿ ಕಳೆದ ವರ್ಷ ಮಳೆಗಾಲದ ತೀವ್ರತೆಗೆ ಬರೆ ಕುಸಿದಿರುವ ಪ್ರದೇಶದಲ್ಲಿ ಕೇವಲ ತಡೆಗೋಡೆಯ ಬದಲಿಗೆ; ಸೂಕ್ತ ವಿನ್ಯಾಸದೊಂದಿಗೆ ಪ್ರವಾಸಿಗರನ್ನು ಆಕರ್ಷಿಸುವ ರೀತಿ ‘ಸ್ಕ್ವೇರ್’ ನಿರ್ಮಿಸಲು ಅಗತ್ಯ ಕ್ರಮಕೈಗೊಳ್ಳು ವಂತೆ ನಗರಸಭೆಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ನಿರ್ದೇಶನ ನೀಡಿದ್ದಾರೆ.ಇಂದು ಈ ಸಂಬಂಧ ಪ್ರವಾಸೋದ್ಯಮ ಇಲಾಖೆಯ ವಾಸ್ತು ಶಿಲ್ಪಿ ರಾಘವೇಂದ್ರ ಹಾಗೂ ಸಹಾಯಕ ಇಂಜಿನಿಯರ್ ನಂಜಪ್ಪ ಅವರುಗಳು ಖುದ್ದಾಗಿ ಖಾಸಗಿ ನಿಲ್ದಾಣ ಪ್ರದೇಶದ ಜಾಗ ಪರಿಶೀಲನೆ ನಡೆಸಿದರು. ಈ ಸಂದರ್ಭ ಚೇಂಬರ್ ಆಫ್ ಕಾಮರ್ಸ್ ಮಾಜಿ ಅಧ್ಯಕ್ಷ ಜಿ. ಚಿದ್ವಿಲಾಸ್ ಅವರು, ಈಗಾಗಲೇ ಮಡಿಕೇರಿ ‘ಸ್ಕ್ವೇರ್’ ನಿರ್ಮಾಣ ಸಂಬಂಧ ನುರಿತ ತಂತ್ರಜ್ಞರಿಂದ ಯೋಜನೆಯೊಂದನ್ನು ಸಿದ್ಧಪಡಿಸಿ ನಗರಸಭೆ ಹಾಗೂ ಜಿಲ್ಲಾಡಳಿತಕ್ಕೆ ಸಲ್ಲಿಸುವದರೊಂದಿಗೆ ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಅವರ ಗಮನ ಸೆಳೆದಿರುವದಾಗಿ ನೆನಪಿಸಿದರು.

(ಮೊದಲ ಪುಟದಿಂದ) ಇದಕ್ಕೆ ಪೂರಕವಾಗಿ ಪ್ರತಿಕ್ರಿಯಿಸಿದ ಅಧಿಕಾರಿ ರಾಘವೇಂದ್ರ, ಪ್ರವಾಸಿ ತಾಣವನ್ನಾಗಿ ರೂಪಿಸುವಲ್ಲಿ ಸ್ಥಳೀಯರ ಅಭಿಪ್ರಾಯ ಗಮನಾರ್ಹ ಎಂದರಲ್ಲದೆ ಈ ಬಗ್ಗೆ ಜಿಲ್ಲಾಧಿಕಾರಿ ಅವರೊಂದಿಗೆ ಚರ್ಚಿಸಿ ಪೂರಕ ಯೋಜನೆ ಸಿದ್ಧಪಡಿಸಿ ಕೊಡಲಾಗುವದು ಎಂದು ಆಶ್ವಾಸನೆ ನೀಡಿದರು.

ಜಿಲ್ಲಾಧಿಕಾರಿ ಸ್ಪಂದನ : ನಗರಸಭಾ ಆಯುಕ್ತ ರಮೇಶ್ ಸಮ್ಮುಖದಲ್ಲಿ ಸ್ಥಳ ಪರಿಶೀಲಿಸಿದ ಅಧಿಕಾರಿಗಳು, ಬಳಿಕ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರ ಬಳಿ ತೆರಳಿ ಚರ್ಚೆ ನಡೆಸಿದರು. ಈ ವೇಳೆ ಜಿಲ್ಲಾ ಉಸ್ತುವಾರಿ ಹೊಂದಿರುವ ರಾಜ್ಯ ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್ ಅವರ ನಿರ್ದೇಶನ ಕುರಿತು ಉಲ್ಲೇಖಿಸಿದ ಜಿಲ್ಲಾಧಿಕಾರಿಗಳು, ಸಂಬಂಧಿಸಿದ ಸ್ಥಳವನ್ನು ಪ್ರವಾಸಿ ಆಕರ್ಷಣೀಯ ತಾಣವಾಗಿ ರೂಪಿಸಲು ಕ್ರಮ ವಹಿಸುವಂತೆ ಹಸಿರು ನಿಶಾನೆ ತೋರಿದರು.

ಅಲ್ಲದೆ ಪ್ರವಾಸೋದ್ಯಮ ಇಲಾಖೆಯಿಂದ ಅಗತ್ಯ ಹಣ ಬಿಡುಗಡೆಯ ಭರವಸೆ ನೀಡಿದರಲ್ಲದೆ, ವಾಸ್ತು ಶಿಲ್ಪಿ ಇನ್ನೆರಡು ದಿನಗಳಲ್ಲಿ ಸಂಬಂಧಿಸಿದ ಕ್ರಿಯಾಯೋಜನೆ ಸಿದ್ಧಪಡಿಸಿ ನಗರಸಭೆಗೆ ಒದಗಿಸಲು ಸಲಹೆಯಿತ್ತರು. ಜಿಲ್ಲಾ ಕೇಂದ್ರ ದಲ್ಲಿರುವ ನಗರದ ಹಳೆಯ ಬಸ್ ನಿಲ್ದಾಣದಲ್ಲಿ ಆಕರ್ಷಕ ಪ್ರವಾಸಿ ತಾಣವನ್ನಾಗಿ ಈ ‘ಸ್ಕ್ವೇರ್’ ರೂಪಿಸುವತ್ತ ಗಮನ ಹರಿಸ ಲಾಗುವದು ಎಂದು ನಗರಸಭಾ ಆಯುಕ್ತ ರಮೇಶ್, ಇಂದಿನ ಬೆಳವಣಿಗೆ ಬಗ್ಗೆ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದರು.