ಮಡಿಕೇರಿ, ಮೇ 14: ಕಳೆದ ಮುಂಗಾರು ಮಳೆಯಿಂದ ಸಂಭವಿಸಿದ ಪ್ರಾಕೃತಿಕ ವಿಕೋಪದಲ್ಲಿ ಸೋಮವಾರಪೇಟೆ ತಾಲೂಕಿನ ಶಾಂತಳ್ಳಿ ಹೋಬಳಿ ಹಾಗೂ ಇತರೆಡೆಗಳಲ್ಲಿ ಗ್ರಾಮೀಣ ರೈತರು ತೀವ್ರ ನಷ್ಟ ಅನುಭವಿಸುವಂತಾಗಿದೆ. ಈ ರೈತರಿಗೆ ಸೂಕ್ತ ಪರಿಹಾರ ಕಲ್ಪಿಸಿಲ್ಲವೆಂದು ಮಾಜಿ ವಿಧಾನ ಪರಿಷತ್ ಸದಸ್ಯ ಎಸ್.ಜಿ. ಮೇದಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ ಲಿಖಿತ ಮನವಿ ಸಲ್ಲಿಸಿದ ಅವರು, ತಾ. 23ರ ಬಳಿಕ ಹೋರಾಟದ ಸುಳಿವು ನೀಡಿದ್ದಾರೆ.
ಸೋಮವಾರಪೇಟೆ ತಾಲೂಕು ಕಾಫಿ ಬೆಳೆಗಾರರ ಸಂಘ, ತಾಲೂಕು ಬೆಳೆಗಾರರ ಹೋರಾಟ ಸಮಿತಿ, ರೈತ ಸಂಘಟನೆಗಳ ಮುಖಂಡರೊಂದಿಗೆ ಇಂದು ಜಿಲ್ಲಾಧಿಕಾರಿ ಬಳಿ ನಿಯೋಗದಲ್ಲಿ ಭೇಟಿ ನೀಡಿದ ಅವರು, ಗ್ರಾಮೀಣ ಬೆಳೆಗಾರರು ಮತ್ತು ಇತರ ರೈತರಿಗೆ ಇದುವರೆಗೆ ಪರಿಹಾರ ಲಭಿಸಿಲ್ಲವೆಂದು ಗಮನ ಸೆಳೆದರು.
ಈ ವೇಳೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು, ಸಂತ್ರಸ್ತ ಬೆಳೆಗಾರರ ಸಹಿತ ಅರ್ಹ ಫಲಾನುಭವಿಗಳ ಖಾತೆಯಲ್ಲಿ ನೇರವಾಗಿ ಹಣ ಜಮಾವಣೆಗೊಳ್ಳುತ್ತಿದ್ದು, ಯಾವದೇ ರೀತಿ ತಾರತಮ್ಯವನ್ನು ಜಿಲ್ಲಾಡಳಿತ ಮಾಡುತ್ತಿಲ್ಲವೆಂದು ಸಮಜಾಯಿಷಿಕೆ ನೀಡಿದರು. ಒಂದು ವೇಳೆ ನಷ್ಟಕ್ಕೆ ಗುರಿಯಾಗಿರುವವರ ಹೆಸರುಗಳು ಬಿಟ್ಟು ಹೋಗಿದ್ದಲ್ಲಿ ಅಂತಹವರಿಗೆ ಅರ್ಜಿ ಸಲ್ಲಿಸಲು ಮರು ಅವಕಾಶದೊಂದಿಗೆ ಪರಿಶೀಲಿಸಿ ಸೂಕ್ತ ಪರಿಹಾರ ಕಲ್ಪಿಸುವದಾಗಿ ಭರವಸೆಯಿತ್ತರು.
ಈ ವೇಳೆ ಮತ್ತೆ ಗಮನ ಸೆಳೆದ ಬೆಳೆಗಾರ ಪ್ರಮುಖರು, ಶಾಂತಳ್ಳಿ ಹೋಬಳಿ, ಸೂರ್ಲಬ್ಬಿ ಸುತ್ತಮುತ್ತಲಿನ ಗ್ರಾಮಗಳು, ಭಾಗಮಂಡಲ ಸೇರಿದಂತೆ ಬಿರುನಾಣಿಯಂತಹ ಗ್ರಾಮೀಣ ಭಾಗಗಳಲ್ಲಿ ಅಪಾರ ಬೆಳೆ ಹಾನಿ ಸಂಭವಿಸಿದೆ ಎಂದು ಬೊಟ್ಟು ಮಾಡಿದರು. ಇಂತಹ ಪ್ರದೇಶಗಳಲ್ಲಿ ಫಸಲು ಕಳೆದುಕೊಂಡವರಿಗೆ ಎಕರೆಗಟ್ಟಲೆ ಜಮೀನಿಗೆ ಕೇವಲ ರೂ. 1 ಸಾವಿರ ನಷ್ಟ ಪರಿಹಾರ ನೀಡಲಾಗಿದೆ ಎಂದು ಉದಾಹರಿಸಿದರು. ಈ ಬಗ್ಗೆ ಅಗತ್ಯ ಕ್ರಮ ವಹಿಸಲಾಗುವದು ಎಂದು ಜಿಲ್ಲಾಧಿಕಾರಿ ಆಶ್ವಾಸನೆ ನೀಡಿದರು. ನಿಯೋಗದಲ್ಲಿ ಪ್ರಮುಖರಾದ ಎಂ.ಸಿ. ಮುದ್ದಪ್ಪ, ಕೆ.ಬಿ. ಬಸಪ್ಪ, ಕೆ.ಎಂ. ದಿನೇಶ್, ಬಿ.ಎಸ್. ಸುರೇಶ್, ರಾಜಶೇಖರ್, ಸೋಮಯ್ಯ ಸೇರಿದಂತೆ ಇತರರು ಪಾಲ್ಗೊಂಡಿದ್ದರು.