ಮಡಿಕೇರಿ, ಮೇ 14: ಕೊಡಗು ಪ್ರೆಸ್ ಕ್ಲಬ್ ಸದಸ್ಯತ್ವ ನವೀಕರಣ ಹಾಗೂ ಹೊಸ ಸದಸ್ಯತ್ವಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಕ್ಲಬ್ ಕಚೇರಿಯಲ್ಲಿ ಅರ್ಜಿ ನಮೂನೆ ಪಡೆದು, ಭರ್ತಿ ಮಾಡಿ ಮೇ 28 ರೊಳಗೆ ಸಲ್ಲಿಸಬೇಕೆಂದು ಪ್ರಧಾನ ಕಾರ್ಯದರ್ಶಿ ಆರ್.ಸುಬ್ರಮಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಾಮಾನ್ಯ ಸದಸ್ಯತ್ವಕ್ಕೆ ತಾವು ಕಾರ್ಯನಿರ್ವಹಿಸುತ್ತಿರುವ ಮಾಧ್ಯಮ, ಪತ್ರಿಕೆ ಸಂಪಾದಕರು ಅಥವಾ ಜಿಲ್ಲಾ ವರದಿಗಾರರಿಂದ ದೃಢೀಕರಣ ಪತ್ರ ಸಲ್ಲಿಸಬೇಕು. ಸಾಮಾನ್ಯ ಸದಸ್ಯರಾಗು ವವರು ಕಡ್ಡಾಯವಾಗಿ ಕೊಡಗು ಜಿಲ್ಲಾ ಪತ್ರಕರ್ತರ ಸಂಘ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಾಗಿರಬೇಕು. ಕೊಡಗು ಜಿಲ್ಲಾ ಪತ್ರಕರ್ತರ ಸಂಘ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯತ್ವ ಪಡೆಯದಿದ್ದರೆ ಕ್ಲಬ್‍ನ ಆಜೀವ ಸದಸ್ಯತ್ವ ಮತ್ತು ಸಾಮಾನ್ಯ ಸದಸ್ಯತ್ವ ರದ್ದಾಗುತ್ತದೆ.

ಸಾಮಾನ್ಯ ಸದಸ್ಯತ್ವವನ್ನು ವೃತ್ತಿನಿರತ ಪತ್ರಕರ್ತರು, ಸಂಪಾದಕರು, ಉಪಸಂಪಾದಕರು, ಅಧಿಕೃತ ಛಾಯಾಚಿತ್ರಕಾರರು, ಮಾಧ್ಯಮ ಪ್ರತಿನಿಧಿಗಳು, ವ್ಯವಸ್ಥಾಪಕ ಸಂಪಾದಕರು ಹಾಗೂ ಪತ್ರಿಕಾ ಮಾಲೀಕತ್ವ ಹೊಂದಿರುವ ಸಂಪಾದಕರು ಅರ್ಹರಾಗಿರುತ್ತಾರೆ. ಪ್ರೆಸ್ ಕ್ಲಬ್‍ನ ಸಾಮಾನ್ಯ ಸದಸ್ಯರಾಗಿ ಸತತ 4 ಬಾರಿ ನವೀಕರಿಸಿದ ಸದಸ್ಯ, ಆಜೀವ ಸದಸ್ಯರಾಗುತ್ತಾರೆ. ಇದಕ್ಕೆ ಆಡಳಿತ ಮಂಡಳಿ ಅನುಮೋದನೆ ಅಗತ್ಯ.

ಸಹ ಸದಸ್ಯತ್ವವನ್ನು ವಾರ್ತಾ ಇಲಾಖೆಯ ಜಿಲ್ಲಾಧಿಕಾರಿ, ಸಹಾಯಕ ಅಧಿಕಾರಿಗಳು, ಪತ್ರಿಕಾ ಕಲಾವಿದರು, ಪತ್ರಿಕಾ ಕಚೇರಿ ವ್ಯವಸ್ಥಾಪಕರು, ಜಾಹೀರಾತು ವ್ಯವಸ್ಥಾಪಕರು, ಪ್ರಸರಣಾ ವ್ಯವಸ್ಥಾಪಕರು, ಮುದ್ರಕರು, ಪ್ರಕಾಶಕರು, ಕರಡು ತಿದ್ದುಪಡಿಗಾರರು, ಪತ್ರಕರ್ತರ ಸಂಘದ ಸಲಹೆಗಾರರು, ಅರೆ ಸರ್ಕಾರಿ, ಸರ್ಕಾರಿ, ನೌಕರರಾಗಿರುವ ಪತ್ರಕರ್ತರು, ಮೂಲತಃ ಕೊಡಗಿನವರಾಗಿದ್ದುಕೊಂಡು ಜಿಲ್ಲೆಯ ಹೊರಗೆ ಕೆಲಸ ಮಾಡುತ್ತಿರುವ ಕಾರ್ಯನಿರತ ಪತ್ರಕರ್ತರಿಗೆ ನೀಡಲಾಗುತ್ತದೆ.

ಆಜೀವ ಸದಸ್ಯತ್ವಕ್ಕೆ 2 ಸಾವಿರ ರೂ. ಪಾವತಿಸಬೇಕು. ಸಾಮಾನ್ಯ ಸದಸ್ಯತ್ವ ಹಾಗೂ ಸಹ ಸದಸ್ಯತ್ವಕ್ಕೆ 580 ರೂ. ಪಾವತಿಸಬೇಕು. ಆಜೀವ ಸದಸ್ಯತ್ವ ಕಾರ್ಡ್ ನವೀಕರಣಕ್ಕೆ 100 ರೂ. ಪಾವತಿಸಬೇಕು. ಸಾಮಾನ್ಯ ಹಾಗೂ ಸಹ ಸದಸ್ಯತ್ವ ನವೀಕರಣಕ್ಕೆ ಅರ್ಜಿ ಸಲ್ಲಿಸುವವರು 480 ರೂ. ಪಾವತಿಸಬೇಕು. ನವೀಕರಣಕ್ಕೆ ಅರ್ಜಿ ಸಲ್ಲಿಸುವ ಸದಸ್ಯ 1 ಭಾವಚಿತ್ರ ಹಾಗೂ ಹೊಸದಾಗಿ ಸದಸ್ಯತ್ವಕ್ಕೆ ಅರ್ಜಿ ಸಲ್ಲಿಸುವವರು 2 ಭಾವಚಿತ್ರ ಸಲ್ಲಿಸಬೇಕು. ಸಾಮಾನ್ಯ ಸದಸ್ಯತ್ವ ನವೀಕರಣ ಹಾಗೂ ಹೊಸ ಸದಸ್ಯತ್ವಕ್ಕೆ ಅರ್ಜಿ ಸಲ್ಲಿಸುವವರು ಕಡ್ಡಾಯ ವಾಗಿ 2019-20ನೇ ಸಾಲಿನ ಕೊಡಗು ಜಿಲ್ಲಾ ಪತ್ರಕರ್ತರ ಸಂಘ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಗುರುತಿನ ಚೀಟಿಯ ನಕಲು ಲಗತ್ತಿಸಬೇಕು.