ಮಡಿಕೇರಿ, ಮೇ 14: ಪ್ರಸ್ತುತ ಮಕ್ಕಳಿಗೆ ಬೇಸಿಗೆಯ ರಜಾ... ಈ ರಜಾ ದಿನಗಳಲ್ಲಿ ಮಕ್ಕಳನ್ನು ಒಂದು ರೀತಿಯಲ್ಲಿ ಜವಾಬ್ದಾರಿಯುತವಾಗಿ ನಿಯಂತ್ರಿಸುವದು, ಪೋಷಕರಿಗೆ ಹರಸಾಹಸವೇ ಸರಿ... ಹೇಳಿದ ಮಾತು ಕೇಳದಿರುವದು, ತುಂಟಾಟಿಕೆಯಂತಹ ಮಕ್ಕಳಾಟದಿಂದ ಹಲವು ಅನಾಹುತಗಳನ್ನೂ ಮಕ್ಕಳು ಸೃಷ್ಟಿಸಿ ಬಿಡುತ್ತಾರೆ. ಇಂತಹ ಎಳೆಯ ಮನಸ್ಸಿನ, ಮುಗ್ಧ ಮಕ್ಕಳನ್ನು ಉತ್ತಮ ರೀತಿಯ ತಲ್ಲೀನತೆಗೊಳಪಡಿಸಿ ಅವರ ಮನಸ್ಸಿಗೆ ಮುದ ನೀಡುವದರೊಂದಿಗೆ ಮುಂದಿನ ಭವಿಷ್ಯದತ್ತಲೂ ಗಂಭೀರ ಚಿಂತನೆ ಮಾಡುವಂತೆ ಪ್ರೇರೇಪಿಸುವ ಪ್ರಯತ್ನವೊಂದು ಮಡಿಕೇರಿ ಸನಿಹದ ಕಡಗದಾಳುವಿನಲ್ಲಿ ಹನ್ನೆರಡು ದಿನಗಳ ವಿಶೇಷ ಬೇಸಿಗೆ ಶಿಬಿರದ ಮೂಲಕ ಯಶ್ವಸಿಯಾಗಿ ಜರುಗಿತು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತಾಲೂಕು ಬಾಲಭವನ ಸಮಿತಿ, ಶಿಶು ಅಭಿವೃದ್ಧಿ ಯೋಜನೆ ಮಡಿಕೇರಿ ಇವರ ವತಿಯಿಂದ ಕಡಗದಾಳು ಪ್ರೌಢಶಾಲೆಯಲ್ಲಿ ಏರ್ಪಡಿಸಲಾಗಿದ್ದ ಬೇಸಿಗೆ ಶಿಬಿರದಲ್ಲಿ ತಾಲೂಕಿನ 116 ಮಕ್ಕಳು ಭಾಗಿಗಳಾಗಿದ್ದರು.

ಹಾಡು, ನೃತ್ಯ, ಯೋಗ, ಕರಾಟೆ, ಕಲೆ, ಕಸದಿಂದ ರಸ, ಚಿತ್ರಕಲೆ, ಮಿಮಿಕ್ರಿ, ಸಾಂಸ್ಕøತಿಕ ಪ್ರದರ್ಶನ, ಪ್ರವಾಸ ಇತ್ಯಾದಿ ಕಾರ್ಯಕ್ರಮಗಳ ಮೂಲಕ ಮೇಳೈಸಿದ ಈ ‘ಚಿಣ್ಣರ ಚಿಲಿಪಿಲಿ’ ಶಿಬಿರಾರ್ಥಿಗಳಿಗೆ ಮಾತ್ರವಲ್ಲ ಅವರ ಪೋಷಕರಿಗೂ, ಸಂಪತ್ಮೂಲ ವ್ಯಕ್ತಿಗಳಿಗೂ, ಆಯೋಜಕರಿಗೂ ಮುದ ನೀಡಿತು.

ಶಿಬಿರದ ಸಮಾರೋಪ ಸಮಾರಂಭ ಭಾನುವಾರದಂದು ಕಡಗದಾಳು ಪ್ರೌಢಶಾಲೆಯಲ್ಲಿ ಜರುಗಿತು. ಹೇ... ಶಾರದೇ... ಸ್ವಾಗತ ಗೀತೆಗೆ ನೃತ್ಯ ಪ್ರದರ್ಶನದೊಂದಿಗೆ ಕಾರ್ಯಕ್ರಮ ಆರಂಭಗೊಂಡು ಮಕ್ಕಳು, ತಾವು ಶಿಬಿರದಲ್ಲಿ ಕಲಿತ ವಿಚಾರಗಳನ್ನು ಪ್ರದರ್ಶಿಸಿ ಪ್ರತಿಭೆಯನ್ನು ಅನಾವರಣಗೊಳಿಸಿದರು. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವಕೀಲೆ ಮೀನಾಕುಮಾರಿ ಅವರು ಮಕ್ಕಳ ಪ್ರತಿಭೆ, ಸಂಪನ್ಮೂಲ ವ್ಯಕ್ತಿಗಳು, ಆಯೋಜಕರ ಪರಿಶ್ರಮದಲ್ಲಿ ಉತ್ತಮ ಯಶಸ್ಸನ್ನು ಈ ಶಿಬಿರ ಕಂಡಿದೆ ಎಂದರು. ಕಾನೂನು ಸೇವಾ ಪ್ರಾಧಿಕಾರದ ಜಯಪ್ಪ ಅವರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಅಧ್ಯಕ್ಷತೆ ವಹಿಸಿದ್ದ ಮುಖ್ಯ ಶಿಕ್ಷಕಿ ಗಂಗಮ್ಮ ಅವರು 116 ಮಕ್ಕಳಿಗೆ ಉತ್ತಮ ಮಾರ್ಗದರ್ಶನ ವಾಗಿದ್ದು, ಮಕ್ಕಳು ಇದರ ಸದುಪಯೋಗ ಪಡೆದುಕೊಳ್ಳುವಂತಾಗಬೇಕೆಂದರು.

ಪ್ರಭಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತ ಕೀರ್ತನ್ ಪ್ರಾಸ್ತಾವಿಕವಾಗಿ ಮಾತನಾಡಿ ಶಿಬಿರದ ಕುರಿತು ಪೂರ್ಣ ಮಾಹಿತಿ ನೀಡಿದರು. ಅಂಗನವಾಡಿ ಕಾರ್ಯಕರ್ತೆಯರು, ಪೋಷಕರು, ಸ್ಥಳೀಯರಾದ ಬಿ.ಡಿ. ನಾರಾಯಣ, ಜಾವಹಿಲ್ಸ್, ಶಿವಶಂಕರ್, ಪ್ರಿಯಪದ ಇಂದಿರಾ ಗಜರಾಜ್, ಕ್ಯಾಪಿಟಲ್ ವಿಲೇಜ್‍ನ ಮಾಲೀಕ ದೇವಯ್ಯ, ಗಂಗಾ ಅಮೃತ್, ಸ್ಥಳೀಯ ಯುವಕ ಸಂಘ, ಭಗವತಿ ದೇವಸ್ಥಾನ, ಗ್ರಾ.ಪಂ. ಉಪಾಧ್ಯಕ್ಷ ಮಾದೇಟಿರ ತಿಮ್ಮಯ್ಯ, ಕಡಗದಾಳು ಬೊಟ್ಲಪ್ಪ ಸಂಘ, ಸ್ತ್ರೀ ಶಕ್ತಿ ಸಂಘ, ಗ್ರಾಮಸ್ಥರ ಸಹಕಾರದಿಂದ ಶಿಬಿರ ಯಶಸ್ಸು ಕಂಡಿದೆ ಎಂದು ಅವರು ಸ್ಮರಿಸಿದರು. ಮಡಿಕೇರಿಯ ಅರುಣ್ ಸ್ಟೋರ್ಸ್ ಮಾಲೀಕರು 116 ಮಕ್ಕಳಿಗೆ ಪರ್ಸ್, ವಿಎಸ್‍ಎಸ್‍ಎನ್ ಬ್ಯಾಂಕ್ ವತಿಯಿಂದ ಕ್ರಯಾನ್ಸ್, ಬಲೂನ್ಸ್, ಪೆನ್, ಪೆನ್ಸಿಲ್ ಇತ್ಯಾದಿಗಳನ್ನು ಕೊಡುಗೆಯಾಗಿ ನೀಡಲಾಯಿತು. ಅಂಗನವಾಡಿ ಕಾರ್ಯಕರ್ತೆಯರಾದ ಅನಿಲ, ಪುಷ್ಪ, ಸುಶೀಲ, ಸಾಜಿದ, ನಳಿನಿ, ಸಹಾಯಕಿಯರಾದ ಹೇಮಲತ, ಬೇಬಿ, ಪೌಜೀಯ, ಮಂಗಳ, ಸೌಮ್ಯ, ಕಡಗದಾಳು ಪ್ರೌಢಶಾಲಾ ಶಿಕ್ಷಕರು ಸಹಕರಿಸಿದರು. ಮಹಿಳಾ ಮೇಲ್ವಿಚಾರಕಿ ಶೀಲಾ ನಿರೂಪಿಸಿದರು. - ಶಶಿ