ಗೋಣಿಕೊಪ್ಪ ವರದಿ, ಮೇ 14: ಜಿಲ್ಲೆಯಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಪ್ರೊ. ನಂಜುಂಡಸ್ವಾಮಿ ಸ್ಥಾಪಿತ ರೈತ ಸಂಘದ ಉದ್ಘಾಟನಾ ಕಾರ್ಯಕ್ರಮ ತಾ. 15 ರಂದು (ಇಂದು) ಗೋಣಿಕೊಪ್ಪ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಭಾಂಗಣದಲ್ಲಿ ರೈತ ಸಂಘ ರಾಜ್ಯಾಧ್ಯಕ್ಷ ಜಿ.ಎ. ಲಕ್ಷ್ಮಿನಾರಾಯಣ ಗೌಡ ಹಾಗೂ ಸ್ಥಾಪಕ ನಂಜುಂಡಸ್ವಾಮಿ ಅವರ ಪುತ್ರ ಪಚ್ಚೆ ನಂಜುಂಡ ಸ್ವಾಮಿ ಅವರ ಸಮ್ಮುಖದಲ್ಲಿ ನಡೆಯಲಿದೆ ಎಂದು ರೈತ ಸಂಘ ಜಿಲ್ಲಾಧ್ಯಕ್ಷ ಚಿಮ್ಮಂಗಡ ಗಣೇಶ್ ತಿಳಿಸಿದ್ದಾರೆ.
ರೈತರು ಅನುಭವಿಸುತ್ತಿರುವ ಸಮಸ್ಯೆಗಳಿಗೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ರೈತ ಪರವಾಗಿ ಸಂಘವನ್ನು ಅಸ್ತಿತ್ವಕ್ಕೆ ತರಲಾಗಿದೆ. ಇದರಂತೆ ಜಿಲ್ಲೆಯಲ್ಲಿ ನೂರಾರು ರೈತರು ಸಂಘಕ್ಕೆ ಸೇರ್ಪಡೆಗೊಳ್ಳುತ್ತಿದ್ದಾರೆ. ಇವರನ್ನು ಶಾಲು ಹೊದಿಸಿ ಸೇರಿಸಿಕೊಂಡು ಸಂಘದ ಬಲವರ್ಧನೆಗೆ ಉದ್ಘಾಟನೆ ಮೂಲಕ ಚಾಲನೆ ನೀಡಲಾಗುವದು ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಅಂದು ಬೆಳಿಗ್ಗೆ 10 ಗಂಟೆಗೆ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ಜಿಲ್ಲೆಯ ರೈತ ಸಂಘಕ್ಕೆ ನೋಂದಾಯಿಸಿಕೊಂಡ ಸದಸ್ಯರ ಸೇರ್ಪಡೆ, ತಾಲೂಕು ಪದಾಧಿಕಾರಿಗಳ ಸೇರ್ಪಡೆ, ರೈತರ ಸಮಸ್ಯೆಗಳ ಕೂಲಂಕಶ ಚರ್ಚೆ ಕಾರ್ಯಕ್ರಮ ನಡೆಯಲಿದೆ. ರಾಜ್ಯದ 30 ಜಿಲ್ಲೆಗಳಿಂದ ರೈತ ಸಂಘದ ಪ್ರಮುಖರು ಪಾಲ್ಗೊಳ್ಳಲಿದ್ದಾರೆ ಎಂದರು. ಗೋಷ್ಠಿಯಲ್ಲಿ ರೈತ ಸಂಘದ ಪ್ರಮುಖರುಗಳಾದ ಆದೇಂಗಡ ಅಶೋಕ್, ಕುಂಞಂಗಡ ಸಿದ್ದು, ಗುಡಿಯಂಗಡ ಮುತ್ತು ಪೂವಪ್ಪ, ಬಾದುಮಂಡ ಮಹೇಶ್, ಉಪಸ್ಥಿತರಿದ್ದರು.