(ವಿಶೇಷ ವರದಿ,ಹೆಚ್.ಕೆ.ಜಗದೀಶ್)

ಗೋಣಿಕೊಪ್ಪಲು, ಮೇ 14: ಕಾರ್ಮಿಕರಿಗೆ ಕಾಮಧೇನಾಗಿ, ಮಾಲೀಕನಿಗೆ ಪ್ರೀತಿಯ ಮಗಳಾಗಿ, ತನ್ನನ್ನು ಉಪಚರಿಸುವ ವ್ಯಕ್ತಿಗೆ ವಿಧೇಯಳಾಗಿ ಬದುಕಿ ಎಲ್ಲರಿಗೂ ಹಾಲುಣಿಸುತ್ತಿದ್ದ ಸೌಮ್ಯ ಸ್ವಭಾವದ ಕರ್ಪಿಯ ಮೂಕರೋದÀನೆ ನೋಡಿದವರು ಮಮ್ಮಲ ಮರುಗದೆ ಇರಲು ಸಾಧ್ಯವೇ ಇಲ್ಲ. ತಿತಿಮತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರಪಾಲ ಸಮೀಪದ ನರವತ್ತು ಎಸ್ಟೇಟ್‍ನಲ್ಲಿ ಮೂಕ ರೋದÀನೆಯಲ್ಲಿ ದಿನ ಕಳೆಯುತ್ತಿರುವ ಕಾಮಧೇನು ಕರ್ಪಿಯ ನೋವಿನ ಕಥೆ ಇದು.

ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಕರ್ಪಿ ತೋಟದ ಎಲ್ಲಾ ಕಾರ್ಮಿಕರ ಅಚ್ಚು ಮೆಚ್ಚಿನ ಪ್ರೀತಿ ಗಳಿಸಿದವಳು.ಇಲ್ಲಿಯ ತನಕ ಯಾರಿಗೂ ಕೇಡು ಬಗೆದವಳಲ್ಲ,ಯಾರಿಗೂ ನೋವು ಪಡಿಸಿದವಳಲ್ಲ.ಕಾಮಧೇನಾಗಿ ಎಲ್ಲರನ್ನು ಕಾಪಾಡಿದವಳು ಇದೀಗ ತನಗೆ ಬಂದಿರುವ ನೋವನ್ನು ನುಂಗಿಕೊಂಡು ಮಲಗಿದರೆ ಎಳಲಾರದೆ, ಎದ್ದರೆ ಮಲಗಲಾಗದ ಪರಿಸ್ಥಿತಿಯಲ್ಲಿ ದಿನ ಕಳೆಯುತ್ತಿದ್ದಾಳೆ.

ಈಕೆಯೇ ತನ್ನ ಬದುಕು ಎಂದು ನಂಬಿಕೊಂಡು 12 ವರ್ಷಗಳ ಕಾಲ ಇದರೊಂದಿಗೆ ಜೀವನ ಸಾಗಿಸಿ, ಇದರಿಂದ ಬಂದಂತಹ ಹಾಲನ್ನು ಇಡೀ ತೋಟದ ಕಾರ್ಮಿಕರಿಗೆ ನೀಡಿ ಹೆಚ್ಚಾಗಿದ್ದನ್ನು ಹೊಟೇಲ್‍ಗಳಿಗೆ ಹಾಕಿ ಇದರಲ್ಲಿ ಬಂದ ಹಣದಿಂದ ಮನೆ ಮಾಡಿಕೊಂಡು ಬದುಕು ಕಟ್ಟಿಕೊಂಡಿರುವ ವೆಂಕಟೇಶ ಊಟವಿಲ್ಲದೆ ದಿನ ಕಳೆಯುತ್ತಿದ್ದಾನೆ. ತನ್ನ ಪ್ರೀತಿಯ ಕರ್ಪಿಯೊಂದಿಗೆ ಮಾತನಾಡುತ್ತಲೇ ದಿನ ದೂಡುತ್ತಿದ್ದಾನೆ. ನನ್ನ ಬದುಕಿಗೆ ಇನ್ಯಾರು ಆಸರೆ ಎಂದು ನರಳುತ್ತಿದ್ದಾನೆ. ಎಲ್ಲರ ಬಾಯಲ್ಲು ಒಂದೇ ಮಾತು ಈ ಮೂಕ ಪ್ರಾಣಿಗೆ ಇಂತಹ ನೋವು ಸಿಗಬಾರದು ಎಂಬದೇ ಆಗಿದೆ.

ಮಾಲೀಕರು ತಿಳಿಸಿದ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದಲ್ಲಿ ಇಂತಹ ಪರಿಸ್ಥಿತಿ ಈ ಕಾಮಧೇನುಗೆ ಬರುತ್ತಿರಲಿಲ್ಲವೇನೋ.? ಅರಣ್ಯ ಇಲಾಖೆಯ ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ಇಂದು ಮೂಕ ಪ್ರಾಣಿ ಕಣ್ಣೀರು ಸುರಿಸುತ್ತಿದೆ.

ಕಾಮಧೇನಾಗಿದ್ದ ಕರ್ಪಿ ಹಸು ಸೋಮವಾರ ಎಂದಿನಂತೆ ತೋಟದಲ್ಲಿ ತನ್ನ ಕಾರ್ಮಿಕ ವೆಂಕಟೇಶ್‍ನೊಂದಿಗೆ ಮೇಯುತ್ತಿತ್ತು.ಮಧ್ಯಾಹ್ನ ಸುಮಾರು ಎರಡು ಗಂಟೆಗೆ ತೋಟದ ಅನತಿ ದೂರದಲ್ಲಿ ಜಿಂಕೆಯೊಂದು ಓಡಿಬಂದಿತ್ತು. ನೋಡ ನೋಡುತ್ತಿದ್ದಂತೆ ಅದರ ಹಿಂದೆ ಹುಲಿರಾಯ ಜಿಂಕೆಯನ್ನು ಅಟ್ಟಿಸಿಕೊಂಡು ಬರುತ್ತಿದ್ದ ಈ ಸಂದರ್ಭ ಜಿಂಕೆ ತೋಟದಲ್ಲಿ ಮಾಯವಾಗುತ್ತಿದ್ದಂತೆ ಅಲ್ಲೆ ಮೇಯುತ್ತಿದ್ದ ಕರ್ಪಿ ಹಸುವಿನ ಮೇಲೆ ಹುಲಿ ಎರಗಿ ಬಿದ್ದಿದೆ. ಕಾರ್ಮಿಕ ಬೊಬ್ಬೆ ಹೊಡೆದರೂ ಹುಲಿರಾಯ ತನ್ನ ಕೆಲಸ ಮುಗಿಸಿಯೇ ಬಿಡುವ ಸ್ಥಿತಿಯಲ್ಲಿದ್ದ ಕೂಡಲೇ ಭಯಗೊಂಡ ವೆಂಕಟೇಶ್ ತನ್ನ ಮಾಲೀಕರ ಬಳಿ ತೆರಳಿ ನಡೆದ ಘಟನೆಯನ್ನು ನಡುಗುತ್ತಲೇ ವಿವರಿಸಿದ ಮಾಲೀಕರು ಕಾರ್ಮಿಕರು ಸ್ಥಳಕ್ಕೆ ಆಗಮಿಸಿ ಬೊಬ್ಬೆ ಹಾಕಿದ ನಂತರ ಹುಲಿರಾಯ ಮೆಲ್ಲನೆ ತನ್ನ ಹೆಜ್ಜೆ ಹಾಕುತ್ತ ಮಾಯವಾದ. ಅಷ್ಟೊತ್ತಿಗಾಗಲೇ ಕರ್ಪಿ ಹಸು ಜೀವನ್ಮರಣ ಸ್ಥಿತಿಯಲ್ಲಿ ನರಳಲಾರಂಭಿಸಿತು.ಆದರೂ ಹಸುವನ್ನು ಉಳಿಸಿಕೊಳ್ಳಲು ಎಲ್ಲರೂ ಸೇರಿ ಮನೆಯತ್ತ ಕರ್ಪಿಯನ್ನು ಕರೆದೊಯ್ದರು.

ನಂತರ ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಮಾಲೀಕ ರವಿ ದೂರವಾಣಿ ಮೂಲಕ ಸಂಪರ್ಕಿಸುವ ಪ್ರಯತ್ನ ನಡೆಸಿದರೂ ಯಾವದೇ ಕರೆಯನ್ನು ಸ್ವೀಕರಿಸದೇ ಸಿಬ್ಬಂದಿಗಳು ಸುಮ್ಮನಾಗಿದ್ದರು. ಕೂಡಲೇ ತಮ್ಮ ವಾಹನವೇರಿ ಮಾಲೀಕರು ಮತ್ತಿಗೋಡು ಅರಣ್ಯ ಕಚೇರಿಗೆ ತೆರಳಿ ಅಲ್ಲಿದ್ದ ಸಿಬ್ಬಂದಿಗಳಿಗೆ ಕಾಟಚಾರಕ್ಕೆ ಇಟ್ಟ ಬೋನು

ಅರಣ್ಯ ಇಲಾಖೆಯ ಸಿಬ್ಬಂದಿಗಳು ರಾತ್ರಿಯ ವೇಳೆಯಲ್ಲಿ ನೆಪ ಮಾತ್ರಕ್ಕೆ ಬೋನನ್ನು ಇಟ್ಟು ತೆರಳಿದ್ದಾರೆ. ಇಡೀ ತೋಟದಲ್ಲಿ ಹುಲಿರಾಯನ ಹೆಜ್ಜೆ ಗುರುತುಗಳು ಕಂಡಿದ್ದರೂ, ಇದನ್ನು ಸೆರೆ ಹಿಡಿಯುವ ಪ್ರಯತ್ನಕ್ಕೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಮನಸ್ಸು ಮಾಡುತ್ತಿಲ್ಲ; ಕೇವಲ ಸಬೂಬುಗಳನ್ನೇ ಹೇಳುತ್ತ ದಿನ ಕಳೆಯುತ್ತಿದ್ದಾರೆ. ಬೋನಿನಲ್ಲಿ ಮಾವಿನ ಸೊಪ್ಪನ್ನು ಇಟ್ಟು ಹುಲಿರಾಯ ಬರುತ್ತಾನೆ ಎಂದು ನಂಬಿಸಿದ್ದಾರೆ. ಇಲ್ಲಿನ ಅರಣ್ಯ ಸಿಬ್ಬಂದಿಗಳು ಇವರ ನಿರ್ಲಕ್ಷ್ಯಕ್ಕೆ ಮಾವಿನ ಸೊಪ್ಪನ್ನು ಇಟ್ಟಿರುವದೇ ದೊಡ್ಡ ಸಾಕ್ಷಿ.

ತನ್ನ ಬದುಕಿನಲ್ಲಿ ಇಂತಹ ಹಸುವನ್ನು ನಾನು ನೋಡಿರಲಿಲ್ಲ. ಎಷ್ಟೇ ಹಾಲು ಕರೆದರೂ ಹಾಲೂ ಬರುತ್ತಲೇ ಇತ್ತು ಮಾಲೀಕರು ಕರುವಿಗಾಗಿ ಹಾಲು ಬಿಡು ಎನ್ನುತ್ತಿದ್ದರು.ಒಂದು ಕೆಚ್ಚಲನ್ನು ಕರುವಿಗಾಗಿ ಮೀಸಲಿಟ್ಟಿದ್ದೆ ಆದರೂ ಪ್ರತಿ ದಿನ 30 ಲೀ. ಹಾಲು ನೀಡಿ ಕಾಮಧೇನಾಗಿದ್ದ ನನ್ನ ಕರ್ಪಿ ಇಂದು ಸುರಿಸುತ್ತಿರುವ ಕಣ್ಣೀರನ್ನು ನೋಡಲು ನನಗೆ ಸಾಧ್ಯವಾಗುತ್ತಿಲ್ಲ. ಊಟ ಬಿಟ್ಟು ದಿನಗಳು ಕಳೆದಿವೆ ಆದರೂ ನನಗೆ ಏನೂ ಆಗುತ್ತಿಲ್ಲ. ಮುಂದೆ ಹಾಲು ಕೊಡದಿದ್ದರೂ ಚಿಂತೆ ಇಲ್ಲ. ಕರು ಹಾಕದಿದ್ದರೂ ಬೇಸರವಿಲ್ಲ. ನಡೆದಾಡಿಕೊಂಡು ನನ್ನ ಮುಂದೆ ಇದ್ದರೆ ಅಷ್ಟೇ ಸಾಕು.

- ವೆಂಕಟೇಶ್, ಕಾರ್ಮಿಕ

ತನ್ನ ಹಸುವನ್ನು ಉಳಿಸಿಕೊಡಿ ಇದರಿಂದ ನನಗೇನು ಬೇಡ ಎಷ್ಟು ಖರ್ಚು ಮಾಡಲು ನಾನು ತಯಾರಿದ್ದೇನೆ. ಕೇವಲ ನೆಪ ಮಾತ್ರಕಷ್ಟೆ ಅರಣ್ಯ ಸಿಬ್ಬಂದಿಗಳು ಕೆಲಸ ನಿರ್ವಹಿಸುತ್ತಿರುವದು ಬೇಸರ ತಂದಿದೆ. ತಿಂಗಳ ಮುಂದೆಯೇ ಹುಲಿ ಸಂಚಾರದ ಬಗ್ಗೆ ಮಾಹಿತಿ ನೀಡಿದ್ದೇನೆ. ಅಗತ್ಯ ಕ್ರಮ ಕೈಗೊಳ್ಳಲು ಮನವಿ ಮಾಡಿದ್ದೇನೆ. ಆದರೆ ಯಾವದು ಪ್ರಯೋಜನಕ್ಕೆ ಬರಲಿಲ್ಲ. ಪಶುವೈದ್ಯಾಧಿಕಾರಿಗಳ ಭರವಸೆಯಂತೆ ದಿನಂಪ್ರತಿ ಔಷಧಿಗಳನ್ನು ನೀಡುತ್ತಿದ್ದೇವೆ. ಆದರೆ ಇದರ ನೋವು ನೋಡಲು ಸಾಧ್ಯವಾಗುತ್ತಿಲ್ಲ. - ರವಿ, ವ್ಯವಸ್ಥಾಪಕರು