ಕೂಡಿಗೆ, ಮೇ 14 : ಪ್ರತಿಯೊಬ್ಬ ಮನುಷ್ಯನಿಗೂ ಆರೋಗ್ಯವೇ ಭಾಗ್ಯ, ಆದ್ದರಿಂದ ಆರೋಗ್ಯದ ಕಡೆಗೆ ಹೆಚ್ಚಿನ ಕಾಳಜಿ ವಹಿಸುವ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣ ಮಾಡಬೇಕು ಎಂದು ವೀರಾಜಪೇಟೆ ಅರಮೇರಿ ಕಳಂಚೇರಿ ಮಠದ ಶ್ರೀಶಾಂತಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ, ರೋಟರಿ ಸಂಸ್ಥೆ ಹಾಗೂ ಮೈಸೂರು ಜೆ.ಎಸ್.ಎಸ್. ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಬ್ಯಾಡಗೊಟ್ಟ ಪುನರ್ವಸತಿ ಕೇಂದ್ರದಲ್ಲಿ ಬಸವಣ್ಣ,ಬುದ್ಧ, ಮಹಾವೀರ, ಅಕ್ಕಮಹಾದೇವಿ, ವಾಲ್ಮೀಕಿ, ಅಂಬೇಡ್ಕರ್, ಶಂಕರಾ ಚಾರ್ಯ, ಶಿವಕುಮಾರ ಸ್ವಾಮಿ ಜಯಂತಿ ಹಾಗೂ ಕಾಯಕ ದಿನಾಚರಣೆ ಅಂಗವಾಗಿ ಏರ್ಪ ಡಿಸಿದ್ದ ದಿಡ್ಡಳ್ಳಿ ನಿರಾಶ್ರಿತರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟನಾ ಸಮಾರಂಭದ ದಿವ್ಯಸಾನ್ನಿಧ್ಯ ವಹಿಸಿ ಅವರು ಮಾತ ನಾಡಿದರು. 12ನೇ ಶತಮಾನದಲ್ಲಿ ಶರಣರು ಸಮಾಜದ ಸುಧಾರಣೆಗಾಗಿ ಹೋರಾಟ ನಡೆಸಿದರು. ವಚನಕ್ರಾಂತಿ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದರು. ಇಂತಹ ಮಹಾನ್ ಶರಣರ ಜಯಂತಿಯಂದು ಉಚಿತ ಆರೋಗ್ಯ ಶಿಬಿರ ಹಮ್ಮಿಕೊಂಡಿರುವದು ಸಾರ್ಥಕತೆ ಮೂಡಿಸಿದೆ. ಈ ಶಿಬಿರದ ಪ್ರಯೋಜನವನ್ನು ಪ್ರತಿಯೊಬ್ಬರೂ ಪಡೆಯುವ ಮೂಲಕ ಉತ್ತಮ ಆರೋಗ್ಯವನ್ನು ಹೊಂದಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಶಕ್ತಿ ಪತ್ರಿಕೆ ಪ್ರಧಾನ ಸಂಪಾದಕ ಜಿ. ರಾಜೇಂದ್ರ ಮಾತನಾಡಿ ಇಂದಿನ ಶಿಕ್ಷಣ ವೃತ್ತಿಪರ ಹಾಗೂ ಸಂಪಾದನೆಗೆ ಪೂರಕವಾಗಿದ್ದು, ವೈಯಕ್ತಿಕ ಬದುಕಿನಲ್ಲಿ ಮಾನವೀಯತೆ ಮರೆಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ಮಕ್ಕಳಿಗೆ ಬಾಲ್ಯದಿಂದಲೇ ಉತ್ತಮ ಸಂಸ್ಕಾರ, ಪ್ರೀತಿ, ವಾತ್ಸಲ್ಯ ಹಾಗೂ ಮಾನವೀಯ ಗುಣಗಳನ್ನು ಬೆಳೆಸುವದು ತುಂಬ ಅಗತ್ಯವಾಗಿದೆ ಎಂದು ಹೇಳಿದರು. ಕೆಲವು ರಾಜಕೀಯ ವ್ಯಕ್ತಿಗಳು ಚುನಾವಣೆ ಬಂದಾಗ ಮನೆ ಮನೆ ಅಲೆದು ಮತ ಬೇಡುತ್ತಾರೆ. ಗೆದ್ದ ನಂತರ ಜನಸಾಮಾನ್ಯರ ನೋವು, ಸಂಕಷ್ಟಗಳಿಗೆ ಸ್ಪಂದಿಸುವದಿಲ್ಲ. ಕೆಟ್ಟ ಪದಗಳಿಂದ ಪರಸ್ಪರ ನಿಂದಿಸುತ್ತಾ ಅಧಿಕಾರಕ್ಕಾಗಿ ಕೀಳುಮಟ್ಟದ ರಾಜಕೀಯ ಮಾಡುತ್ತಾರೆ. ಇವರಿಂದ ದೇಶದ ಪ್ರಗತಿ ಸಾಧ್ಯವೆ ಎಂದು ಪ್ರಶ್ನಿಸಿದ ಅವರು ಇಂತಹವರ ಕುರಿತು ಜಾಗೃತಿಯಿರಲಿ ಎಂದು ಸಲಹೆಯಿತ್ತರು. ಸಮಾಜದಲ್ಲಿ ಉನ್ನತ ಸ್ಥಾನಮಾನದಲ್ಲಿರುವ ಜನರು ತಮ್ಮ ಸಂಪಾದÀನೆಯ ಅಲ್ಪಪ್ರಮಾಣವನ್ನು ಸಾಮಾಜಿಕ ಸೇವಾ ಕಾರ್ಯದಲ್ಲಿ ತೊಡಗಿಸುವ ಮೂಲಕ ಸಮಾಜದ ಏಳಿಗೆಗೆ ಶ್ರಮಿಸಬೇಕು ಎಂದು ಸಲಹೆ ನೀಡಿದರು.
ಮಾದ್ರೆ ಮುದ್ದಿನಕಟ್ಟೆ ಮಠದ ಶ್ರೀ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಇಂದಿನ ಸಮಾಜದಲ್ಲಿ ವಾಸ್ತವಿಕವಾಗಿ ಪ್ರತಿಯೊಬ್ಬರು ನಿರಾಶ್ರಿತರೆ ಆದ್ದರಿಂದ ನಾವು ಎಲ್ಲವನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದೇವೆ ಎಂಬ ಮನೋಭಾವ ಹಾಗೂ ನೋವು ಬೇಡ ಎಂದು ದಿಡ್ಡಳ್ಳಿ ನಿರಾಶ್ರಿತರಿಗೆ ಹೇಳಿದರು.
ಆಧುನಿಕತೆ ಬೆಳೆದಂತೆ ಜನರಲ್ಲಿ ದಯೆ, ಕರುಣೆ ಕಳೆದು ಹೋಗುತ್ತಿದ್ದು, ಕ್ರೂರತೆ ಭಾವನೆ ಬರುತ್ತಿದೆ. ಉತ್ತಮ ಆಲೋಚನೆಗಳನ್ನು ಮಾಡುವ ಮೂಲಕ ಕ್ರೂರತೆಯನ್ನು ಕಡಿಮೆ ಮಾಡಿಕೊಂಡು ಸಮಾಜದ ಏಳಿಗೆಗೆ ಶ್ರಮಿಸಬೇಕು ಎಂದರು. ಕುಶಾಲನಗರ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಎಚ್.ವಿ.ಶಿವಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಮಹೇಶ್ ಅಧ್ಯಕ್ಷತೆ ವಹಿಸಿದ್ದರು.
ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ, ಕಲ್ಲುಮಠದ ಶ್ರೀಮಹಾಂತ ಸ್ವಾಮೀಜಿ , ಸೋಮವಾರಪೇಟೆ ರೋಟರಿ ಸಂಸ್ಥೆ ಅಧ್ಯಕ್ಷ ಪಿ.ಕೆ.ರವಿ, ತಾಲ್ಲೂಕು ವೀರಶೈವ ಸಮಾಜದ ಅಧ್ಯಕ್ಷ ಹಾಲಪ್ಪ, ಪ್ರಧಾನ ಕಾರ್ಯದರ್ಶಿ ಕಾಂತರಾಜ್, ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪಿ. ಮಹಾದೇವಪ್ಪ, ಮೈಸೂರು ಜೆಎಸ್‍ಎಸ್ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಪೂರ್ಣಿಮಾ, ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಲೇಖನಾ ಧರ್ಮಪ್ಪ, ಕುಶಾಲನಗರ ಪ.ಪಂ. ಸದಸ್ಯೆ ರೂಪ ಉಮಾಶಂಕರ್, ಹುದುಗೂರು ಉಪ ವಲಯ ಅರಣ್ಯಾಧಿಕಾರಿ ಸತೀಶ್ ಕುಮಾರ್ ಉಪಸ್ಥಿತರಿದ್ದರು.
ಅಕ್ಕನ ಬಳಗದ ಕಮಲಮ್ಮ ಮತ್ತು ತಂಡದವರು ಪ್ರಾರ್ಥಿಸಿದರು. ಶಿಕ್ಷಕಿ ಎಸ್.ಕೆ.ಸೌಭಾಗ್ಯ ನಿರೂಪಿಸಿ ದರು. ಬಸವರಾಜು ಸ್ವಾಗತಿಸಿದರು. ಶಿವಲಿಂಗ ವಂದಿಸಿದರು. ಇದೇ ಸಂದರ್ಭ ಶೌರ್ಯಚಕ್ರ ಪುರಸ್ಕೃತ ಎಚ್.ಎನ್.ಮಹೇಶ್, ದಿಡ್ಡಳ್ಳಿ ನಿರಾಶ್ರಿತ ಪರ ಹೋರಾಟಗಾರರಾದ ಮುತ್ತಮ್ಮ, ಮಲ್ಲಪ್ಪ, ಸ್ವಾಮಿಯಪ್ಪ, ಅಪ್ಪುಕುಟ್ಟಿ, ಪತ್ರಕರ್ತ ಜಿ. ರಾಜೇಂದ್ರ ಅವರನ್ನು ಸನ್ಮಾನಿಸಲಾಯಿತು. ನಂತರ ಪುನರ್ವಸತಿ ಕೇಂದ್ರದಲ್ಲಿ ಅತಿಥಿಗಳು ಗಿಡಗಳನ್ನು ನೆಟ್ಟು ನೀರು ಹಾಕಿದರು.
ಆರೋಗ್ಯ ಶಿಬಿರ : ಶಿಬಿರಲ್ಲಿ ಪುನರ್ವಸತಿ ಕೇಂದ್ರದ ನಿರಾಶ್ರಿತರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ನೂರಾರು ಜನರು ಆಗಮಿಸಿ ವೈದ್ಯಕೀಯ ತಪಾಸಣೆ ಸೌಲಭ್ಯವನ್ನು ಪಡೆದುಕೊಂಡರು. ಹೃದ್ರೋಗ, ಸ್ತ್ರೀರೋಗ, ಚರ್ಮರೋಗ, ಮಕ್ಕಳ ತಜ್ಞರು, ಇಸಿಜಿ ಮತ್ತು ಎಕೊ ಪರೀಕ್ಷೆ ಸೇರಿದಂತೆ ಸಾಮಾನ್ಯ ರೋಗಗಳ ಕುರಿತು ವೈದ್ಯರು ತಪಾಸಣೆ ನಡೆಸಿದರು.