ಕುಶಾಲನಗರ, ಮೇ 12: ಕುಶಾಲನಗರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸರಕಾರದಿಂದ ಬಿಡುಗಡೆಗೊಂಡ ಹಣ ಸಮರ್ಪಕವಾಗಿ ಬಳಕೆಯಾಗದೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಪೋಲಾಗುತ್ತಿದೆ ಎಂದು ನಗರ ಕಾಂಗ್ರೆಸ್ ಪ್ರಮುಖರು ಆರೋಪ ವ್ಯಕ್ತಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ‘ಕುಡಾ’ ಮಾಜಿ ಅಧ್ಯಕ್ಷ ಬಿ.ಜಿ. ಮಂಜುನಾಥ್, ದಿನೇಶ್ ಗುಂಡೂರಾವ್ ಮಂತ್ರಿಗಳಾಗಿದ್ದ ಸಂದರ್ಭ ಪಟ್ಟಣಕ್ಕೆ ಹಲವು ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಯಿತು. ಅಂತೆಯೇ ಪಟ್ಟಣ ಪಂಚಾಯಿತಿ ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೆ ವಿಶೇಷ ಆಸಕ್ತಿ ವಹಿಸಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅನುದಾನದಲ್ಲಿ ನೂತನ ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೆ ಯೋಜನೆ ರೂಪಿಸಲಾಯಿತು. ಆದರೆ ಕೆಲವು ಕಾನೂನು ತೊಡಕುಗಳು ಕಂಡುಬಂದ ಹಿನ್ನೆಲೆ ವಿಶೇಷ ಅನುದಾನ ಕೈತಪ್ಪಿ ಹೋಗಿದೆ ಎಂದರು.

ಗುಂಡುರಾವ್ ಬಡಾವಣೆಯಲ್ಲಿ ನೆನೆಗುದಿಗೆ ಬಿದ್ದಿದ್ದ ನಿವೇಶನಗಳ ಹರಾಜು ನಡೆಸಿ ರೂ. 7.5 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಬಡಾವಣೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಸಂಪೂರ್ಣ ಅವೈಜ್ಞಾನಿಕ ಮತ್ತು ಕಳಪೆ ಕಾಮಗಾರಿ ನಡೆಸಲಾಗುತ್ತಿದೆ. ಬಡಾವಣೆಯಲ್ಲಿ ಯುಜಿಡಿ ಯೋಜನೆಗೆ ಆದ್ಯತೆ ನೀಡದೆ ರಸ್ತೆ ನಿರ್ಮಾಣ ಕಾರ್ಯ ಕೈಗೊಳ್ಳಲಾಗಿದೆ. ಯುಜಿಡಿ ನೆಪದಲ್ಲಿ ಮತ್ತೆ ರಸ್ತೆ ಅಗೆದು ಕಾಮಗಾರಿ ಕೈಗೊಳ್ಳುವ ಮೂಲಕ ಹಣ ಪೋಲು ಮಾಡುವ ಸಾಧ್ಯತೆಗಳಿವೆ ಎಂದು ಟೀಕಿಸಿದರು.

ತಾವರೆಕೆರೆ ಮತ್ತು ಸೋಮದೇವನ ಕೆರೆಗಳ ಅಭಿವೃದ್ಧಿಗೆ ರೂ. 1.25 ಕೋಟಿ ಅನುದಾನ ಬಿಡುಗಡೆಗೊಂಡು ವರ್ಷಗಳು ಕಳೆದಿವೆ. ಆದರೆ ಕುಡಾ ಅಭಿಯಂತರರ ಬೇಜವಾಬ್ದಾರಿ ಮತ್ತು ನಿರ್ಲಕ್ಷ್ಯದಿಂದ ಇದುವರೆಗೆ ಕೆರೆಗಳ ಅಭಿವೃದ್ಧಿ ನಡೆದಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಪ.ಪಂ. ಸದಸ್ಯ ಪ್ರಮೋದ್ ಮುತ್ತಪ್ಪ ಮಾತನಾಡಿ, ಕಳಪೆ ಕಾಮಗಾರಿಗಳ ಬಗ್ಗೆ ಪಂಚಾಯಿತಿ ಅಭಿಯಂತರ ಗಮನಕ್ಕೆ ತಂದರೂ ಯಾವದೇ ಕ್ರಮ ಕೈಗೊಂಡಿಲ್ಲ. ಖಾಸಗಿಯವರು ಮಣ್ಣು ಸಾಗಿಸುತ್ತಿರುವ ಬಗ್ಗೆ ಪ್ರಶ್ನಿಸಿದರೂ ಸಮರ್ಪಕ ಉತ್ತರ ನೀಡಿಲ್ಲ. ಕೂಡಲೇ ಈ ಅಧಿಕಾರಿಯನ್ನು ವರ್ಗಾವಣೆ ಗೊಳಿಸಬೇಕಿದೆ ಎಂದು ಆಗ್ರಹಿಸಿದರು.

ಗೋಷ್ಠಿಯಲ್ಲಿ ಕಾಂಗ್ರೆಸ್ ನಗರಾಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್, ಪಂಚಾಯಿತಿ ಸದಸ್ಯರುಗಳಾದ ಶೇಖ್ ಖಲೀಮುಲ್ಲಾ, ಸುಂದರೇಶ್ ಇದ್ದರು.