ಮಡಿಕೇರಿ, ಮೇ 13: ಮರಂದೋಡ ಗ್ರಾಮದ ಕೆರೆತಟ್ಟು ಪೈಸಾರಿಯಲ್ಲಿರುವ ಸುಮಾರು 36 ಕುಟುಂಬಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಸ್ಥಳೀಯ ಪ್ರಭಾವಿಗಳು ಅಡ್ಡಿಪಡಿಸುತ್ತಿದ್ದಾರೆ ಎಂದು ಆರೋಪಿಸಿರುವ ಪ್ರಜಾಪರಿವರ್ತನಾ ವೇದಿಕೆ, ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕುವದಾಗಿ ಎಚ್ಚರಿಕೆ ನೀಡಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಜಿಲ್ಲಾಧ್ಯಕ್ಷ ಹೆಚ್.ಎಸ್. ಮುತ್ತಪ್ಪ, ಕೆರೆತಟ್ಟು ಕಾಲೋನಿಯಲ್ಲಿ ನೂರಾರು ವರ್ಷಗಳಿಂದ ಪರಿಶಿಷ್ಟ ಜಾತಿ-ಪಂಗಡ ಹಾಗೂ ಇತರ ಹಿಂದುಳಿದ ವರ್ಗದ 36 ಕುಟುಂಬಗಳು ವಾಸಿಸುತ್ತಿದ್ದು, ಮೂಲಭೂತ ಸೌಲಭ್ಯಗಳು ತಲಪಿಲ್ಲ ಎಂದು ಆರೋಪಿಸಿದರು.
ಇಲ್ಲಿನ ಕುಟುಂಬಗಳ ಮನೆಗಳಿಗೆ ವಿದ್ಯುತ್ ಸಂಪರ್ಕ ಲಭ್ಯವಾಗಿಲ್ಲ. ಸರಿಯಾದ ರಸ್ತೆ, ಕುಡಿಯುವ ನೀರು, ಅಂಗನವಾಡಿ, ಸಮುದಾಯ ಭವನ ಮುಂತಾದ ವ್ಯವಸ್ಥೆಗಳಾಗಿಲ್ಲ. ಸೆಸ್ಕ್ ಸಹಾಯಕ ಕಾರ್ಯಪಾಲಕ ಅಭಿಯಂತರರನ್ನು ಸಂಪರ್ಕಿಸಿದಾಗ ಸೂಕ್ತ ಸ್ಪಂದನ ನೀಡುತ್ತಿಲ್ಲ. ಅವರನ್ನು ಜಿಲ್ಲೆಯಿಂದ ವರ್ಗಾವಣೆ ಮಾಡಬೇಕೆಂದು ಆಗ್ರಹಿಸಿದರು.
ಕಾಲೋನಿಗೆ ತೆರಳುವ ರಸ್ತೆಯ 2 ಕಿ.ಮೀ. ಮಾತ್ರ ಡಾಮರು ಮತ್ತು ಕಾಂಕ್ರಿಟ್ ರಸ್ತೆ ನಿರ್ಮಿಸಿದ್ದು, ಅದು ಕೂಡ ಕಿತ್ತುಹೋಗಿದೆ. ಉಳಿದ ಸುಮಾರು 4 ಕಿ.ಮೀ. ಮಣ್ಣಿನ ರಸ್ತೆ ಕೂಡ ಗುಂಡಿ ಬಿದ್ದಿದ್ದು, ಸಾರ್ವಜನಿ ಕರು ನಡೆದಾಡಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಡಾನೆಗಳ ಹಾವಳಿ ಇರುವ ಪ್ರದೇಶವಾಗಿದ್ದು, ಯಾವದೇ ಬಾಡಿಗೆ ವಾಹನಗಳು ಸಂಚರಿಸದ ಹಿನ್ನೆಲೆ ಶಾಲಾ ಮಕ್ಕಳು ಸುಮಾರು ಐದಾರು ಕಿ.ಮೀ. ಕಾಲ್ನಡಿಗೆಯಲ್ಲಿ ಸಾಗಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದರು. ಈ ಸಂಬಂಧ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದ್ದು, ಮುಂದಿನ ಎರಡು ವಾರಗಳ ಒಳಗೆ ಸೂಕ್ತ ಸ್ಪಂದನ ದೊರಕದಿದ್ದಲ್ಲಿ ಗ್ರಾಮಸ್ಥರೊಡಗೂಡಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಗುವದು ಎಂದು ಎಚ್ಚರಿಕೆ ನೀಡಿದರು. ಸಾರ್ವಜನಿಕರಿಗೆ ಕಡಿಮೆ ಬೆಲೆಯಲ್ಲಿ ಔಷಧಿ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ವಿವಿಧೆಡೆ ಜನೌಷಧಿ ಕೇಂದ್ರಗಳನ್ನು ತೆರೆದಿದ್ದರು, ಮಡಿಕೇರಿಯಲ್ಲಿ ಜನೌಷಧಿ ಕೇಂದ್ರವಿಲ್ಲದೆ ಬಡವರು ತೊಂದರೆ ಅನುಭವಿಸುವಂತಾಗಿದೆ ಎಂದು ಆರೋಪಿಸಿದ ಅವರು, ಈ ಹಿನ್ನೆಲೆ ಜಿಲ್ಲಾ ಕೇಂದ್ರದಲ್ಲಿ ತಕ್ಷಣ ಜನೌಷಧಿ ಕೇಂದ್ರವನ್ನು ಆರಂಭಿಸಬೇಕೆಂದು ಆಗ್ರಹಿಸಿದರು.
ಗೋಷ್ಠಿಯಲ್ಲಿ ಕಾಲೋನಿ ನಿವಾಸಿಗಳಾದ ಸೀತಮ್ಮ, ರಮೇಶ್, ರತ್ನ ಕುಮಾರ್, ಚಿನ್ನಮ್ಮ ಹಾಗೂ ವೇದಿಕೆಯ ಮುಖಂಡ ಪವನ್ ಕುಮಾರ್ ಉಪಸ್ಥಿತರಿದ್ದರು.