ಗೋಣಿಕೊಪ್ಪಲು, ಮೇ 12: ದೊಡ್ಡ ಪ್ರಮಾಣದಲ್ಲಿ ಗಾಳಿ ಬೀಸಿದ ಹಿನ್ನೆಲೆಯಲ್ಲಿ ಒಣಗಿದ ಮರವೊಂದು ಬುಡ ಸಹಿತ ಕುಸಿದ ಪರಿಣಾಮ ಮರದಡಿಗೆ ಸಿಲುಕಿ ಗಾಯಗೊಂಡಿದ್ದ ಓರ್ವ ಮಹಿಳೆ ಸಾವನ್ನಪ್ಪಿದ್ದು, ಮತ್ತೊರ್ವ ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಿರುಗೂರು ಪಂಚಾಯತಿ ವ್ಯಾಪ್ತಿಯ ಹೊನ್ನಿಕೊಪ್ಪಲು ನಿವಾಸಿ ಮಂಜುಳಾ (36) ಎಂಬುವರು ಮೃತಪಟ್ಟ ದುರ್ದೈವಿ.
ಶನಿವಾರ ಸಂಜೆ ಕೂಲಿ ಕೆಲಸ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ಸಂದರ್ಭ ಕಾಫಿ ತೋಟದಲ್ಲಿದ್ದ ಒಣಗಿದ ಮರ ಗಾಳಿಗೆ ಉರುಳಿ ಬಿದ್ದಿದೆ. ಈ ಸಂದರ್ಭ ಮಂಜುಳಾ ಬೆನ್ನಿನ ಭಾಗಕ್ಕೆ ಗಂಭೀರ ಗಾಯವಾಗಿತ್ತು. ಸ್ಥಳಿಯರು ಕೂಡಲೇ ಆಕೆಯನ್ನು ಗೋಣಿಕೊಪ್ಪಲು ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿನ ವೈದ್ಯರು ಹೆಚ್ಚಿನ ಚಿಕಿತ್ಸೆ ಗಾಗಿ ಮೈಸೂರಿನ ಆಸ್ಪತ್ರೆಗೆ ರವಾನಿಸಿದ್ದರು.
ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಇಂದು ರಾತ್ರಿ ಮೃತಪಟ್ಟಿದ್ದಾರೆ. ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗಂಭೀರ ಗಾಯಗೊಂಡಿರುವ
ಮತ್ತೋರ್ವ ಮಹಿಳೆ ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.