ಸಿದ್ದಾಪುರ, ಮೇ. 12: ಸಿದ್ದಾಪುರದ ಮರದ ವ್ಯಾಪಾರಿಯೊಬ್ಬರು ಮೈಸೂರು ಮೂಲಕ ಕೇರಳ ರಾಜ್ಯಕ್ಕೆ ಅಕ್ರಮವಾಗಿ ಬೀಟಿ ಮರ ನಾಟಾಗಳನ್ನು ಸಾಗಾಟ ಮಾಡುತ್ತಿದ್ದಾಗ, ಕೇರಳ ಪೊಲೀಸರು ಈರ್ವರನ್ನು ಬಂಧಿಸಿದ್ದಾರೆ. ಸಿದ್ದಾಪುರದ ಎಂ.ಜಿ ರಸ್ತೆಯಲ್ಲಿ ಫರ್ನಿಚರ್ ಅಂಗಡಿಯನ್ನು ಇಟ್ಟುಕೊಂಡಿರುವ ಯಾಹ್ಯ (42) ಹಾಗೂ ಆತನ ಸ್ನೇಹಿತ ಶೀಯಾದ್ ಬಂಧಿತರು.
ಈ ಈರ್ವರು ಮೈಸೂರಿನಿಂದ ಕೇರಳದ ವಯನಾಡಿನ ಬತ್ತೇರಿಗೆ ಯಾವದೇ ಪರವಾನಿಗೆಯನ್ನು ಪಡೆಯದೆ ಬೀಟಿ ಮರ ನಾಟಾಗಳನ್ನು ಸಾಗಾಟ ಮಾಡುತ್ತಿದ್ದ ಮಿನಿಲಾರಿಯನ್ನು ಪರಿಶೀಲಿಸಿದಾಗ, ಲಾರಿಯ ಒಳಗೆ ಈರುಳ್ಳಿಯ ಚೀಲಗಳನ್ನು ಮುಚ್ಚಿ ವ್ಯವಸ್ಥಿತವಾಗಿ ಅಕ್ರಮವಾಗಿ ನಾಟಗಳನ್ನು ಸಾಗಾಟ ಮಾಡುತ್ತಿರುವದು ಕಂಡು ಬಂದಿದೆ. ಬೀಟಿ ಮರಗಳ ಮೌಲ್ಯ ಅಂದಾಜು ರೂ. 4.50 ಲಕ್ಷ ಎಂದು ಅಂದಾಜಿಸಲಾಗಿದೆ. ಇಲಾಖೆಯ ಮುಖ್ಯಾಧಿಕಾರಿ ಬತ್ತೇರಿಯ ಮಂಜು ಹಾಗೂ ಸಿಬ್ಬಂದಿ ನೇತೃತ್ವದಲ್ಲಿ ಈರ್ವರನ್ನು ಬಂಧಿಸಿ ಮರದ ನಾಟಾಗಳನ್ನು ಮತ್ತು ವಾಹನವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.