ಮಡಿಕೇರಿ, ಮೇ 12: ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯದಲ್ಲಿ ವೀರಾಜಪೇಟೆ ಸೌತ್ ಟೈಗರ್ಸ್ ಗೆಲವಿನೊಂದಿಗೆ ವಿನ್ನರ್ಸ್ ಪ್ರಶಸ್ತಿ ಗಳಿಸಿತು.

ಮೀಡಿಯಾ ತಂಡ ರನ್ನರ್ ಅಪ್ ಪಡೆದರೆ, ಪ್ರಿಂಟ್ ಪಂಟರ್ಸ್ ತೃತೀಯ ಬಹುಮಾನಕ್ಕೆ ತೃಪ್ತಿಪಟ್ಟುಕೊಂಡಿತು.

ಮಡಿಕೇರಿ ಮೀಡಿಯಾ ಹಾಗೂ ವೀರಾಜಪೇಟೆ ಸೌತ್ ಟೈಗರ್ಸ್ ನಡುವೆ ನಡೆದ ಅಂತಿಮ ಪಂದ್ಯದಲ್ಲಿ ಟೈಗರ್ಸ್ ತಂಡ ಟಾಸ್ ಗೆದ್ದು, ಬ್ಯಾಟಿಂಗ್ ಆಯ್ದುಕೊಂಡು ನಿಗದಿತ 6 ಓವರ್‍ನಲ್ಲಿ 105 ರನ್ ಕಲೆ ಹಾಕಿತು. ನಂತರ ಬ್ಯಾಟಿಂಗ್ ಮಾಡಿದ ಮಡಿಕೇರಿ ಮೀಡಿಯಾ 62 ರನ್ ಗಳಿಸಿ ಸೋಲೊಪ್ಪಿಕೊಂಡಿತು.

ಕಾರ್ಯಕ್ರಮದಲ್ಲಿ ಫೀ.ಮಾ.ಕೆ.ಎಂ. ಕಾರ್ಯಪ್ಪ ಕಾಲೇಜು ಪ್ರಾಂಶುಪಾಲ ಡಾ. ಟಿ.ಡಿ ತಿಮ್ಮಯ್ಯ ಮಾತನಾಡುತ್ತಾ, ಕ್ರೀಡೆ ಮಾನವನ ಬದುಕಿನ ಅವಿಭಾಜ್ಯ ಅಂಗ. ಕ್ರೀಡೆಯಲ್ಲಿ ತೊಡಗಿಸಿಕೊಂಡಾಗ ದೈಹಿಕ ಹಾಗೂ ಮಾನಸಿಕ ಶಕ್ತಿ ಉತ್ತಮವಾಗಿರುತ್ತದೆ ಎಂದು ಹೇಳಿದರು.

ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಯಾಲದಾಳು ಮನೋಜ್ ಬೋಪಯ್ಯ ಮಾತನಾಡಿ, ಕ್ರೀಡೆಯಲ್ಲಿ ಎಲ್ಲರೊಂದಿಗೆ ಬೆಸೆಯುವ ಕೆಲಸ ಆಗುತ್ತದೆ ಎಂದರು.

ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಮಾತನಾಡಿ, ಕ್ರೀಡಾ ಸ್ಫೂರ್ತಿ ಇರುವವರಿಗೆ ವಿಶಾಲವಾದ ಸಹೃದಯ ಇರುತ್ತದೆ ಎಂದು ಹೇಳಿದರು.

ರಾಜ್ಯ ಕನ್ನಡ ಕಲಾ ಬೆಳಕು ಸಂಸ್ಥೆಯ ರಾಜ್ಯಾಧ್ಯಕ್ಷ ರಾಜು ಮಾತನಾಡಿ ಕ್ರೀಡೆಯ ಮೂಲಕ ಪತ್ರಕರ್ತರು ಒಂದೆಡೆ ಸೇರುವದು ಖುಷಿಯ ವಿಚಾರ ಎಂದು ಹೇಳಿದರು.

ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ, ಸಂಘಟನೆಯ ಮೂಲಕ ಒಗ್ಗಟ್ಟು ಪ್ರದರ್ಶನ ಸಾಧ್ಯ ಎಂದರು.

ಅಧ್ಯಕ್ಷತೆ ವಹಿಸಿ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತಾ ರೈ ಮಾತನಾಡಿ ಪತ್ರಕರ್ತರು ಕ್ರೀಡೆಯ ಮೂಲಕ ಒಗ್ಗಟ್ಟನ್ನು ಮುಂದುವರೆಸಬೇಕು ಎಂದರು.

ಕಾರ್ಯಕ್ರಮದಲ್ಲಿ ಉದ್ಯಮಿ ಶರಿನ್, ಸ್ಪೋಟ್ರ್ಸ್ ವಲ್ಡ್‍ನ ಅನ್ಸಾಫ್, ಸೋಮವಾರಪೇಟೆ ತಾಲೂಕು ಸಂಘದ ಅಧ್ಯಕ್ಷ ಹರೀಶ್, ವೀರಾಜಪೇಟೆ ತಾಲೂಕು ಸಂಘದ ಅಧ್ಯಕ್ಷ ಚಂಗಪ್ಪ, ಕ್ರಿಯೇಟಿವ್‍ನ ಖಲೀಲ್, ಬೆಳಕು ಸಂಸ್ಥೆಯ ಉಪಾಧ್ಯಕ್ಷ ನಾಗೇಶ್, ಕ್ರೀಡಾ ಸಮಿತಿ ಸಂಚಾಲಕ ಮಂಜು ಸುವರ್ಣ ಮತ್ತಿತರರು ಹಾಜರಿದ್ದರು.