ಮಡಿಕೇರಿ, ಮೇ 12: 2019ರ ಜನವರಿ 30 ರಂದು ನಡೆದ ರಾಜ್ಯ ಮಟ್ಟದ ಲಾ ಎನ್‍ಪೋರ್ಸ್‍ಮೆಂಟ್ ಆಫೀಸರ್ ಟ್ರೈನಿಂಗ್ ಕಾರ್ಯಾಗಾರದಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನ ನಿರ್ದೇಶಕರು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕನಿಷ್ಟ ಒಂದು “ಕೋಟ್ಪಾ ಕಾಯ್ದೆಯ ಉನ್ನತ ಅನುಷ್ಠಾನ ತಾಲೂಕು” ಆಗಿ 31 ಮೇ 2019 ರೊಳಗೆ ಘೋಷಿಸಲು ಆದೇಶಿಸಿದ್ದಾರೆ. ಅದರಂತೆ, ಕೊಡಗು ಜಿಲ್ಲೆಯಲ್ಲಿ ಸೋಮವಾರಪೇಟೆ ತಾಲೂಕನ್ನು ಆಯ್ಕೆ ಮಾಡಿಕೊಂಡಿದ್ದು, ಈ ತಾಲೂಕಿನಲ್ಲಿ ಕೋಟ್ಪಾ-2003ರ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ತಹಶೀಲ್ದಾರ್ ಗೋವಿಂದರಾಜು ಹಾಗೂ ಸೋಮವಾರಪೇಟೆ ತಾಲೂಕು ತನಿಖಾ ತಂಡದ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ತಾಲೂಕು ಮಟ್ಟದ ತಂಬಾಕು ನಿಯಂತ್ರಣ ಸಮನ್ವಯ ಸಮಿತಿ ಸಭೆ ನಡೆಯಿತು.
ಸಭೆಯಲ್ಲಿ ಸೋಮವಾರಪೇಟೆ ತಾಲೂಕು ಆರೋಗ್ಯಾಧಿಕಾರಿ ಡಾ. ಶ್ರೀನಿವಾಸ್ ಜಿಲ್ಲಾ ತಂಬಾಕು ನಿಯಂತ್ರಣ ಕಾರ್ಯಕ್ರಮ, ತಂಬಾಕು ಉತ್ಪನ್ನಗಳ ಸೇವನೆಯಿಂದಾಗುವ ದುಷ್ಪರಿಣಾಮಗಳು ಮತ್ತು ಕೋಟ್ಪಾ 2003 ಕಾಯ್ದೆ, ಸೆಕ್ಷನ್ 4 (ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವದು ನಿಷೇಧಿಸಲಾಗಿದೆ) ಸೆಕ್ಷನ್ 5 (ತಂಬಾಕು ಉತ್ಪನ್ನಗಳ ನೇರ ಹಾಗೂ ಪರೋಕ್ಷ ಜಾಹೀರಾತು, ಉತ್ತೇಜನ, ಪ್ರಾಯೋಜಕತೆ ನಿಷೇಧ) ಸೆಕ್ಷನ್ 6 (6ಎ ತಂಬಾಕು ಉತ್ಪನ್ನಗಳು ಅಪ್ರಾಪ್ತ ವಯಸ್ಕರಿಗೆ (18 ವರ್ಷದೊಳಗಿನ ಮಕ್ಕಳು) ಸಿಗದಂತೆ ನಿಯಂತ್ರಣ ಮಾಡುವದು ಮತ್ತು ಸೆಕ್ಷನ್ 6ಬಿ ಶಿಕ್ಷಣ ಸಂಸ್ಥೆಗಳಿಂದ 100 ಗಜಗಳ ಅಂತರದಲ್ಲಿ ಯಾವದೇ ತಂಬಾಕು ಉತ್ಪನ್ನಗಳನ್ನು ಮಾರಾಟವನ್ನು ನಿಷೇಧಿಸಿದೆ) ಮತ್ತು ಸೆಕ್ಷನ್ 7 (ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ ಮೇಲೆ ಶೇ. 85 ರಷ್ಟು ನಿರ್ದಿಷ್ಟ ಆರೋಗ್ಯ ಎಚ್ಚರಿಕೆಗಳ ಸಂದೇಶಗಳಿಲ್ಲದೆ ಮಾರಾಟ ಮಾಡುವದು ಶಿಕ್ಷಾರ್ಹ ಅಪರಾಧ) ಈ ಸೆಕ್ಷನ್‍ಗಳ ಕುರಿತು ಮತ್ತು ತಾಲೂಕಿನ ಎಲ್ಲಾ ಗ್ರಾಮಗಳು, ಪ್ರಮುಖ ರಸ್ತೆಗಳಲ್ಲಿ ತನಿಖಾ ದಾಳಿಯನ್ನು ಹಮ್ಮಿಕೊಂಡು ಕಾಯ್ದೆ ಮತ್ತು ದುಷ್ಪರಿಣಾಮದ ಕುರಿತು ಜನರಲ್ಲಿ ಅರಿವು ಮೂಡಿಸುವದು ಮತ್ತು ಕೋಟ್ಪಾ ಕಾಯ್ದೆಯ ಉನ್ನತ ಅನುಷ್ಠಾನ ತಾಲೂಕನ್ನಾಗಿ ಘೋಷಣೆ ಮಾಡಲು ಬೇಕಾದ ಅಗತ್ಯ ಕ್ರಮಗಳನ್ನು ಕೈಗೊಳ್ಳುವದು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಹಾಜರಾಗಿದ್ದ ಎಲ್ಲಾ ಸದಸ್ಯರು ಕೋಟ್ಪಾ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಚರ್ಚಿಸಿದರು. ಸಭೆಯ ನಂತರ ತನಿಖಾ ತಂಡದ ಎಲ್ಲಾ ಸದಸ್ಯರು ಸೋಮವಾರಪೇಟೆ ಬಸ್ ನಿಲ್ದಾಣ ಹಾಗೂ ಪ್ರಮುಖ ಬೀದಿಗಳಲ್ಲಿ ಕೋಟ್ಪಾ ದಾಳಿಯನ್ನು ಹಮ್ಮಿಕೊಳ್ಳಲಾಯಿತು. ಈ ಸಭೆ ಮತ್ತು ದಾಳಿಯಲ್ಲಿ ಮುಖ್ಯಾಧಿಕಾರಿಗಳು ಪಟ್ಟಣ ಪಂಚಾಯಿತಿ, ಪೊಲೀಸ್ ವೃತ್ತ ನಿರೀಕ್ಷಕರು, ಕಾರ್ಮಿಕ ನಿರೀಕ್ಷಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಿಬ್ಬಂದಿಗಳು ಹಾಜರಿದ್ದರು.