ವೀರಾಜಪೇಟೆ, ಮೇ 12: ಕುಟುಂಬಗಳ ನಡುವೆ ವರ್ಷಂಪ್ರತಿ ಕ್ರೀಡೆಗಳನ್ನು ಆಯೋಜಿಸುವದರಿಂದ ಒಗ್ಗಟ್ಟಿನ ಸಾಧನೆಯೊಂದಿಗೆ ಸಮುದಾಯದ ಆಗು ಹೋಗುಗಳನ್ನು ಮುಕ್ತವಾಗಿ ಚರ್ಚಿಸಿ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗಲಿದೆ. ಮಕ್ಕಳಿಗೆ ಕ್ರೀಡೆಯೊಂದಿಗೆ ಶಿಕ್ಷಣಕ್ಕೂ ಆದ್ಯತೆ ನೀಡಿದರೆ ಏಳಿಗೆ ಸಾಧ್ಯ ಎಂದು ಕಣ್ಣಂಗಾಲ ಒಕ್ಕಲಿಗರ ಸಂಘದ ಅಧ್ಯಕ್ಷ ವಿ.ಕೆ.ದೇವಲಿಂಗಯ್ಯ ಹೇಳಿದರು.
ಒಂಟಿಯಂಗಡಿಯ ಶಾಲಾ ಮೈದಾನದಲ್ಲಿ ಇಂದು ಹಮ್ಮಿಕೊಂಡಿದ್ದ ಯುಗಾದಿ ಹಬ್ಬದ ಪ್ರಯುಕ್ತ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ದೇವಲಿಂಗಯ್ಯ ಅವರು ಇಂದಿನ ಸ್ಪರ್ಧಾ ಯುಗದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲಿಯೂ ಶಿಕ್ಷಣ ಪ್ರಾಧಾನ್ಯತೆಯನ್ನು ಪಡೆದಿದೆ. ಇದರಿಂದ ಸಮಾಜದ ಪ್ರಗತಿಯನ್ನು ಕಾಣಬಹುದು ಎಂದರು. ಕ್ರೀಡಾಕೂಟ ವನ್ನು ಊರಿನಿಂದ ಮದುವೆಯಾದ ಹೆಣ್ಣು ಮಕ್ಕಳಿಗೆ ಏರ್ಪಡಿಸಿದ್ದ ವಿಷದ ಚೆಂಡು ಪಂದ್ಯವನ್ನು ಸಂಘದ ಉಪಾಧ್ಯಕ್ಷೆ ವಿ.ಜಿ.ಪ್ರಭಾ ಉದ್ಘಾಟಿಸಿದರು.
ವೇದಿಕೆಯಲ್ಲಿ ವಿ.ಎಸ್.ತಿಮ್ಮಯ್ಯ, ವಿ.ಎಂ. ಅಶೋಕ್, ಕೆ.ಎಸ್.ದಿನೇಶ್, ವಿ.ಜೆ. ನಾಗೇಶ್, ವಿ.ಜಿ. ತಮ್ಮಯ್ಯ ಗೌರವ ಕಾರ್ಯದರ್ಶಿ ವಿ.ಆರ್. ವರುಣ್ ಉಪಸ್ಥಿತರಿದ್ದರು.
ಒಕ್ಕಲಿಗರ ಸಂಘದ ಕ್ರೀಡೋತ್ಸವದ ಅಂಗವಾಗಿ ಮಹಿಳೆಯರು, ಪುರುಷರಿಗೆ ಹಗ್ಗ ಜಗ್ಗಾಟ, ಸಂಗೀತ ಕುರ್ಚಿ ಸ್ಪರ್ಧೆ, ವಿಷದ ಚೆಂಡು, 100 ಮೀಟರ್ ಓಟದ ಸ್ಪರ್ಧೆ ಗೋಣಿಚೀಲ ಜಿಗಿತ, ಬಾಲಕ ಬಾಲಕಿಯರಿಗೆ ಓಟದ ಸ್ಪರ್ಧೆ, ಚಿಕ್ಕ ಮಕ್ಕಳಿಗೆ ಕಾಳು ಹೆಕ್ಕುವ ಸ್ಪರ್ಧೆ ಯನ್ನು ಏರ್ಪಡಿಸಲಾಗಿತ್ತು. ಸಂಘದ ನಿರ್ದೇಶಕ ಕೆ.ಪಿ.ನಾಗರಾಜು ಸ್ವಾಗತಿಸಿ, ವಿ.ಗೋಪಾಲಕೃಷ್ಣ ನಿರೂಪಿಸಿದರು.