ಕುಶಾಲನಗರ, ಮೇ 12: ಅಸಮಾನತೆಯ ವಿರುದ್ಧ ಹೋರಾಟ ನಡೆಸಿ ಸಮಾನತೆಯ ಬದುಕಿಗೆ ಒತ್ತು ಕೊಟ್ಟಂತಹ ಬಸವಣ್ಣ ಪ್ರತಿಯೊಬ್ಬರ ಮನದಲ್ಲಿ ಹಾಸುಹೊಕ್ಕಾಗಿದ್ದಾರೆ ಎಂದು ಹೆಬ್ಬಾಲೆ ಪ್ರೌಢಶಾಲಾ ಶಿಕ್ಷಕ ಮೆ.ನಾ. ವೆಂಕಟನಾಯಕ್ ಹೇಳಿದರು.

ಕುಶಾಲನಗರದ ಗುಂಡೂರಾವ್ ಬಡಾವಣೆಯಲ್ಲಿ ಜಿಲ್ಲಾ ವಚನ ಸಾಹಿತ್ಯ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಉಪನ್ಯಾಸಕ ಹಾಗೂ ಮಾಜಿ ಪ.ಪಂ. ಸದಸ್ಯ ಎಂ. ನಂಜುಂಡಸ್ವಾಮಿ ಮಾತನಾಡಿ, 12ನೇ ಶತಮಾನದಲ್ಲಿ ಅನುಭವ ಮಂಟಪವನ್ನು ತೆರೆಯುವ ಮೂಲಕ ಅಂದಿನ ಸಮಾಜದ ಎಲ್ಲಾ ಸ್ಥರಗಳಲ್ಲಿನ ವಚನಕಾರರನ್ನು ಒಂದೆಡೆ ಸೇರಿಸಿ ಜನಸಾಮಾನ್ಯರ ಬದುಕಿಗೆ ಹೊಸ ಬೆಳಕನ್ನು ಕಂಡು ಹಿಡಿದ ಬಸವೇಶ್ವರರ ವಚನಗಳು ಎಂದೆಂದಿಗೂ ಪ್ರಸ್ತುತ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಕೆ.ಆರ್. ಮಂಜುಳಾ ಮಾತನಾಡಿ, ವಚನ ಕ್ರಾಂತಿಯನ್ನು ಹನ್ನೆರಡನೇ ಶತಮಾನದಲ್ಲಿ ನಡೆಸಿ ಜನಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ಅಕ್ಷರದ ಅರಿವು ಮೂಡಿಸಿದ ಬಸವೇಶ್ವರರ ತತ್ವಾದರ್ಶಗಳನ್ನು ಪ್ರತಿಯೊಬ್ಬರು ಪಾಲಿಸಬೇಕು ಎಂದರು. ವಚನ ಸಾಹಿತ್ಯ ವೇದಿಕೆಯ ಜಿಲ್ಲಾಧ್ಯಕ್ಷ ಕೆ.ಎಸ್. ಮೂರ್ತಿ ಪ್ರಾಸ್ತಾವಿಕ ನುಡಿಗಳಾಡಿದರು. ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರಾದ ರೂಪ ಉಮಾಶಂಕರ್, ಜಯಲಕ್ಷ್ಮಿ ನಂಜುಂಡಸ್ವಾಮಿ, ಉಮಾಶಂಕರ್, ಟಿ.ಜಿ. ಪ್ರೇಮಕುಮಾರ್, ಕೆ.ಎಸ್. ನಾಗೇಶ್, ಹೆಬ್ಬಾಲೆ ಗಿರೀಶ್, ಆರೋಗ್ಯ ಇಲಾಖೆಯ ಬಿ. ನಟರಾಜು, ಕಮಲ, ಮಂಜು ಮೊದಲಾದವರಿದ್ದರು.

ಕಾವೇರಿ ನದಿ ಸಂರಕ್ಷಣಾ ಆಂದೋಲನದ ರಾಜ್ಯ ಸಂಚಾಲಕ ಎಂ.ಎನ್. ಚಂದ್ರಮೋಹನ್ ಹೊಂಗೆ ಗಿಡಗಳನ್ನು ವಿತರಿಸಿದರು. ಹತ್ತನೇ ತರಗತಿಯಲ್ಲಿ ಉತ್ತಮ ಸಾಧನೆ ತೋರಿರುವ ಇಬ್ಬರು ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಲಾಯಿತು.