ಗೋಣಿಕೊಪ್ಪ ವರದಿ, ಮೇ.13: ಹಾತೂರು ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಮೈದಾನದಲ್ಲಿ ವೀರಾಜಪೇಟೆ ಒಕ್ಕಲಿಗರ ಯುವ ವೇದಿಕೆ ವತಿಯಿಂದ ಆಯೋಜಿಸಿದ್ದ ಕ್ರಿಕೆಟ್ ಟೂರ್ನಿಯಲ್ಲಿ ಸೋಮವಾರಪೇಟೆ ನ್ಯಾಸ್ ಕ್ರಿಕೆಟರ್ಸ್ ಚಾಂಪಿಯನ್ ತಂಡವಾಗಿ ಹೊರಹೊಮ್ಮಿತು. ಕೋಟೆಕೊಪ್ಪ ಎ. ತಂಡ ರನ್ನರ್ ಅಪ್ ಸ್ಥಾನ ಅಲಂಕರಿಸಿತು.
ಫೈನಲ್ ಹಣಾಹಣಿಯಲ್ಲಿ ಸೋಮವಾರಪೇಟೆ ತಂಡ 51 ರನ್‍ಗಳ ಗೆಲವು ಸಾಧಿಸಿತು. ಸೋಮವಾರಪೇಟೆ ತಂಡವು 2 ವಿಕೆಟ್ ಗಳಿಗೆ 66 ರನ್ ಗಳಿಸಿತು. ಗುರಿ ಬೆನ್ನತ್ತಿದ ಕೋಟೆಕೊಪ್ಪ 17 ರನ್ ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡು ಸೋಲೊಪ್ಪಿಕೊಂಡಿತು.
ಒಂದನೇ ಸೆಮಿಫೈನಲ್‍ನಲ್ಲಿ ಕೋಟೆಕೊಪ್ಪ ಎ ತಂಡವು ತಾಕೇರಿ ವಿರುದ್ದ 8 ವಿಕೆಟ್ ಗೆಲವು ಪಡೆಯಿತು. ತಾಕೇರಿ 4 ವಿಕೆಟ್ ಗೆ 27 ರನ್ ಬಾರಿಸಿತು. ಕೋಟೆಕೊಪ್ಪ 2. ವಿಕೆಟ್ ಕಳೆದುಕೊಂಡು 28 ರನ್ ಗಳಿಸಿ ಗೆಲವಿನ ನಗೆ ಬೀರಿತು. 2 ನೇ ಸೆಮಿಫೈನಲ್‍ನಲ್ಲಿ ನ್ಯಾಸ್ ಕ್ರಿಕೆಟರ್ಸ್ ತಂಡವು ರಾಯಲ್ ಬ್ರದರ್ಸ್ ವಿರುದ್ಧ 50 ರನ್ ಗಳ ಗೆಲವು ಪಡೆಯಿತು. ನ್ಯಾಸ್ ಕ್ರಿಕೆಟರ್ಸ್ ಮೊದಲು ಬ್ಯಾಟ್ ಮಾಡಿ 2 ವಿಕೆಟ್ ಕಳೆದುಕೊಂಡು 69 ರನ್ ಗಳಿಸಿತು. ರಾಯಲ್ ಬ್ರದರ್ಸ್ ತಂಡವು 5 ವಿಕೆಟ್ ಕಳೆದುಕೊಂಡು ಕೇವಲ 19 ರನ್‍ಗಳಿಸಿ ಸೋಲೊಪ್ಪಿಕೊಂಡಿತು.
ನ್ಯಾಸ್ ಕ್ರಿಕೆಟರ್ಸ್ ತಂಡದ ಆಟಗಾರರುಗಳಾದ ಚೇತನ್ ಸರಣಿ ಶ್ರೇಷ್ಠ, ಪ್ರಶಾಂತ್ ಪಂದ್ಯ ಶ್ರೇಷ್ಠ, ಕೋತೂರು ತಂಡದ ಪ್ರಮೋದ್ ಬೆಸ್ಟ್ ಬ್ಯಾಟ್ಸ್ ಮನ್, ಹಾತೂರು ತಂಡದ ಅಭಿಷೇಕ್ ಬೆಸ್ಟ್ ಬೌಲರ್ ಪ್ರಶಸ್ತಿ ಪಡೆದರು. ಉತ್ತಮ ಕ್ಯಾಚ್ ಬಹುಮಾನವನ್ನು ಕೋಟೆಕೊಪ್ಪ ತಂಡದ ಪಿಂಕು ಪಡೆದರು.
ಕಿರಿಯರ ಕ್ರಿಕೆಟ್‍ನಲ್ಲಿ ಕೋಟೆಕೊಪ್ಪ ಪ್ರಥಮ ಸ್ಥಾನ ಪಡೆದುಕೊಂಡಿತು. ಕೋತೂರು ದ್ವಿತೀಯ ಸ್ಥಾನ ಅಲಂಕರಿಸಿತು. ಕೋಟೆಕೊಪ್ಪ 4 ವಿಕೆಟ್ ಗಳಿಗೆ 24 ರನ್ ಸಂಪಾದಿಸಿತು. ಕೋತೂರು 5 ವಿಕೆಟ್ ಗಳಿಗೆ 17 ರನ್ ಗಳನಷ್ಟೆ ಪೇರಿಸಲು ಶಕ್ತವಾಯಿತು. ಆ ಮೂಲಕ ಸೋಲನುಭವಿಸಿತು. ಮಕ್ಕಳಿಗೆ ನಡೆದ ಗೋಲಿ ಹೆಕ್ಕುವ ಸ್ಪರ್ಧೆಯಲ್ಲಿ ಭವಿತ್ ಪ್ರಥಮ ಬಹುಮಾನ ಪಡೆದುಕೊಂಡರು. ಮಹಿಳೆಯರ ಹಗ್ಗಜಗ್ಗಾಟದಲ್ಲಿ ಕೈಕೇರಿ ಪ್ರಥಮ, ಹಾತೂರು ದ್ವಿತೀಯ, ಭಾರದ ಗುಂಡು ಎಸೆತದಲ್ಲಿ ಸುಜಾತ ಮಹೇಶ್ ಪ್ರಥಮ, ಪುರುಷರಲ್ಲಿ ಸುರೇಶ್ ಕುಮಾರ್ ಪ್ರಥಮ ಸ್ಥಾನ ಪಡೆದರು. - ಸುದ್ದಿಪುತ್ರ