ಮಡಿಕೇರಿ, ಮೇ 12: ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ, ಉದ್ಯೋಗ ಸಂಘ ಹಾಗೂ ಕೊಯನಾಡು ನೀಲಾಂಬರ್ ರಬ್ಬರ್ ಸಂಸ್ಥೆ, ಥೋಮ್ಸನ್ ತೋಟ ಇವರ ಸಹಕಾರದಲ್ಲಿ ಸರಕು ಸಾಗಾಣಿಕೆ ವಾಹನದಲ್ಲಿ ಕಾರ್ಮಿಕರನ್ನು ಕರೆದುಕೊಂಡು ಹೋಗುವದು ನಿಷೇಧ ಮತ್ತು ಕಾರ್ಮಿಕ ಕಾನೂನು ಕುರಿತು ಕಾನೂನು ಅರಿವು ಕಾರ್ಯಕ್ರಮ ದೇವರಕೊಲ್ಲಿ ಮತ್ತು ಥೋಮ್ಸನ್ ತೋಟದಲ್ಲಿ ನಡೆಯಿತು.

ತಾಲೂಕು ಕಾರ್ಮಿಕ ಹಿರಿಯ ಅಧಿಕಾರಿ ಎಂ.ಎಂ. ಯತ್ನಟ್ಟಿ ಮಾತನಾಡಿ, ಸರಕು ಸಾಗಾಣಿಕೆ ವಾಹನದಲ್ಲಿ ಕಾರ್ಮಿಕರನ್ನು ಕರೆದುಕೊಂಡು ಹೋಗಬಾರದು ಎಂದು ಹೇಳಿದರು. ಕಾರ್ಮಿಕರಿಗಾಗಿ ಹಲವು ಕಾನೂನುಗಳು ಮತ್ತು ಸೌಲಭ್ಯಗಳಿದ್ದು, ಅವುಗಳನ್ನು ಬಳಸಿಕೊಳ್ಳುವಂತಾಗಬೇಕು ಎಂದು ಹೇಳಿದರು.

ವಿವಿಧ ಕಾರ್ಮಿಕ ಕಾಯ್ದೆಗಳಡಿ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದ ಯತ್ನಟ್ಟಿ, ಕನಿಷ್ಟ ವೇತನ ಪಾವತಿ, ಸಮಾನ ವೇತನ, ಹೆರಿಗೆ ಭತ್ಯೆ, ತೋಟ ಕಾರ್ಮಿಕರ ಕಾಯ್ದೆ, ಬಾಲ ಕಾರ್ಮಿಕ ಪದ್ಧತಿ ನಿಷೇಧ, ಕೆಲಸದ ಸಂದರ್ಭ ದೌರ್ಜನ್ಯ ಆಗದಂತೆ ನೋಡಿಕೊಳ್ಳುವದು ಮತ್ತಿತರ ಬಗ್ಗೆ ಹಲವು ಕಾಯ್ದೆಗಳಿದ್ದು, ಅವುಗಳ ಬಗ್ಗೆ ತಿಳಿದುಕೊಳ್ಳುವಂತಾಗಬೇಕು ಎಂದು ಯತ್ನಟ್ಟಿ ಹೇಳಿದರು.

ದೇವರಕೊಲ್ಲಿಯ ನೀಲಾಂಬರ್ ರಬ್ಬರ್ ಸಂಸ್ಥೆಯ ವ್ಯವಸ್ಥಾಪಕ ಎ.ಎಂ. ಸುಬ್ಬಯ್ಯ, ಥೋಮ್ಸನ್ ತೋಟದ ವ್ಯವಸ್ಥಾಪಕ ಇ.ಎನ್. ಮಾರ್ಕೋಸ್ ಹಿರಿಯ ಕಾರ್ಮಿಕ ನಿರೀಕ್ಷಕ ಎಂ.ಮಹದೇವ ಸ್ವಾಮಿ, ಕಾನೂನು ಸೇವಾ ಪ್ರಾಧಿಕಾರದ ಆಡಳಿತ ಸಹಾಯಕ ಬಿ.ಎಸ್. ಜಯಪ್ಪ ಮತ್ತಿತ್ತರರು ಇದ್ದರು.