ಮಡಿಕೇರಿ, ಮೇ 12: ಜಿಲ್ಲೆಯ ವೀರಾಜಪೇಟೆ ತಾಲೂಕಿನ ಬಾಳುಗೋಡು ಗ್ರಾಮದಲ್ಲಿ ಪರಿಶಿಷ್ಟ ವರ್ಗಗಳ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಪ್ರಾರಂಭಿಸಿದ ಏಕಲವ್ಯ ಮಾದರಿ ವಸತಿ ಕಾಲೇಜಿನಲ್ಲಿ 2019-20ನೇ ಸಾಲಿಗೆ ಪ್ರಥಮ ಪಿಯುಸಿ (ಪಿಸಿಎಂಬಿ, ಪಿಸಿಎಂಸಿ) ತರಗತಿಯ ದಾಖಲಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಏಕಲವ್ಯ ಮಾದರಿ ವಸತಿ ಕಾಲೇಜಿನಲ್ಲಿ ಬಾಲಕ-ಬಾಲಕಿಯರಿಗೆ ಪ್ರತ್ಯೇಕ ವಸತಿ ಸೌಲಭ್ಯವಿದೆ. ನುರಿತ ಉಪನ್ಯಾಸಕರಿಂದ ತರಬೇತಿ ನೀಡಲಾಗುವದು. ಊಟ, ವಸತಿ, ಪಠ್ಯ ಪುಸ್ತಕ, ಸಮವಸ್ತ್ರ ಇನ್ನಿತರ ಸೌಲಭ್ಯಗಳನ್ನು ಉಚಿತವಾಗಿ ಒದಗಿಸಲಾಗುತ್ತದೆ. ಸ್ಮಾರ್ಟ್ ಕ್ಲಾಸ್ ವ್ಯವಸ್ಥೆಯಲ್ಲಿ ಒದಗಿಸಲಾಗಿದೆ. ಪ್ರತ್ಯೇಕ ಸುಸಜ್ಜಿತ ಪ್ರಯೋಗಾಲಯ ವ್ಯವಸ್ಥೆ, ಸುಸಜ್ಜಿತ ಗ್ರಂಥಾಲಯ ವ್ಯವಸ್ಥೆ, ಗಣಕ ಯಂತ್ರ ಕೊಠಡಿ ವ್ಯವಸ್ಥೆ ಇದೆ. ವಸತಿ ನಿಲಯಗಳು ಮತ್ತು ಬೋಧನಾ ಕಟ್ಟಡಕ್ಕೆ 24*7 ಸೋಲಾರ್ ವ್ಯವಸ್ಥೆ ಇದೆ. ಶಾಲಾ ಆವರಣದಲ್ಲಿ ಸಿಸಿ ಕ್ಯಾಮರಗಳನ್ನು ಅಳವಡಿಸಲಾಗಿದೆ ಹಾಗೂ ಇತರ ಸೌಲಭ್ಯಗಳನ್ನು ವಿದ್ಯಾರ್ಥಿಗಳು ಪಡೆಯಬಹುದಾಗಿದೆ.
ಆಸಕ್ತ ವಿದ್ಯಾರ್ಥಿಗಳು ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ತಾ. 15 ರೊಳಗೆ ಕಚೇರಿಗೆ ಸಲ್ಲಿಸಬೇಕು. ಅರ್ಜಿಗಳನ್ನು ಬಾಳುಗೋಡಿನ ಏಕಲವ್ಯ ಮಾದರಿ ಪದವಿ ಕಾಲೇಜಿನ ಕಚೇರಿಯಲ್ಲಿ ಪಡೆಯಬಹುದು.
ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಇಂಗ್ಲೀಷ್, ಗಣಿತ ಮತ್ತು ವಿಜ್ಞಾನ ವಿಷಯಗಳಲ್ಲಿ ಕನಿಷ್ಟ ಶೇ. 60 ಹೊಂದಿರಬೇಕು. ಅರ್ಜಿಯನ್ನು ಪ್ರಾಂಶುಪಾಲರ ಕಚೇರಿ, ಏಕಲವ್ಯ ಮಾದರಿ ವಸತಿ ಶಾಲೆ, ಬಾಳುಗೋಡು ವೀರಾಜಪೇಟೆ ತಾಲೂಕು, ದೂ.ಸಂ: 9483162466, 9902499269 ಸಲ್ಲಿಸಬಹುದು ಎಂದು ಸಮಗ್ರ ಗಿರಿಜನ ಅಭಿವೃದ್ಧಿ ಯೋಜನಾ ಸಮನ್ವಯಾಧಿಕಾರಿ ತಿಳಿಸಿದ್ದಾರೆ.