ಶ್ರೀಮಂಗಲ, ಮೇ 13: ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಟಿ.ಶೆಟ್ಟಿಗೇರಿ ಗ್ರಾಮದಲ್ಲಿ ಲಕ್ಷ್ಮಣ ತೀರ್ಥ ನದಿಯಲ್ಲಿ ಅಕ್ರಮ ಮರಳು ಗಣಿಗಾರಿಕೆಯಲ್ಲಿ ತೊಡಗಿ ಮರಳು ಸಾಗಿಸುತ್ತಿದ್ದ ನಾಲ್ಕು ಟಿಪ್ಪರ್‍ಗಳನ್ನು ಪೊಲೀಸರು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.
ಟಿ.ಶೆಟ್ಟಿಗೇರಿ ಗ್ರಾಮದ ನಾಲ್ಕೇರಿ ರಸ್ತೆಯಲ್ಲಿರುವ ಲಕ್ಷ್ಮಣತೀರ್ಥ ನದಿಯಲ್ಲಿ ಮರಳು ತುಂಬುತಿದ್ದ ವೇಳೆ ಎರಡು ಟಿಪ್ಪರ್‍ಗಳನ್ನು ಹಾಗೂ ಇದೇ ಜಾಗದಿಂದ ಮರಳು ತುಂಬಿಸಿಕೊಂಡು ತೆರಳುತ್ತಿದ್ದ ಎರಡು ಟಿಪ್ಪರ್‍ಗಳ ಮೇಲೆ ಪೊಲೀಸರು ಧಾಳಿ ನಡೆಸಿದ್ದಾರೆ. ಪೊಲೀಸರು ಧಾಳಿ ನಡೆಸುತ್ತಿರುವ ಸುಳಿವು ಅರಿತು ಮರಳು ತುಂಬಿಕೊಂಡು ತೆರಳುತ್ತಿದ್ದ ಎರಡು ಟಿಪ್ಪರ್ ಗಳು ಮುಖ್ಯ ರಸ್ತೆಯಿಂದ ಗ್ರಾಮೀಣ ರಸ್ತೆಗಳಲ್ಲಿ ನುಗ್ಗಿಸಿ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ ವೇಳೆ ಅವುಗಳ ಬೆನ್ನಟ್ಟಿದ ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡಿದ್ದು, ಆ ವೇಳೆಗಾಗಲೇ ಟಿಪ್ಪರಿನಿಂದ ಮರಳನ್ನು ಸ್ಥಳದಲ್ಲಿ ಇಳಿಸಿ ಚಾಲಕರು ಪರಾರಿಯಾಗಿದ್ದಾರೆ.
ಗೋಣಿಕೊಪ್ಪಲಿನ ಅಮೃತ್ ರಾಜ್‍ರವರಿಗೆ ಸೇರಿದ (ಕೆ.ಎ 12 ಬಿ 6464) ಬಿರುನಾಣಿಯ ಉಮೇಶ್ ರವರಿಗೆ ಸೇರಿದ (ಕೆ.ಎ 12 ಎ 8379) ಬಾಡಗರಕೇರಿಯ ಅಪ್ಪಣ್ಣರವರಿಗೆ ಸೇರಿದ (ಕೆ.ಎ 12 ಬಿ 6716) ಮತ್ತು ಸಚಿನ್‍ರವರಿಗೆ ಸೇರಿದ (ಕೆ.ಎ 12 ಬಿ 0110) ಟಿಪ್ಪರ್‍ಗಳಾಗಿವೆ ಎಂದು ಪೊಲೀಸರ ತನಿಖೆಯಲ್ಲಿ ತಿಳಿದುಬಂದಿದ್ದು, ಟಿಪ್ಪರ್ ಮಾಲೀಕರ ಮೇಲೆ ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಾಳಿಯ ವೇಳೆ 4 ಲೋಡ್ ಮರಳು, ಮರಳು ತುಂಬಲು ಬಳಸುತ್ತಿದ್ದ ಹಲವು ಪರಿಕರಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪಿ., ವೀರಾಜಪೇಟೆ ಪೊಲೀಸ್ ಉಪ ಅಧೀಕ್ಷಕ ನಾಗಪ್ಪ, ಕುಟ್ಟ ವೃತ್ತ ನಿರೀಕ್ಷಕ ಮಹೇಶ್ ಅವರ ಮಾರ್ಗದರ್ಶನದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಗೋಣಿ ಕೊಪ್ಪಲು ಠಾಣಾಧಿಕಾರಿ ಯಾಗಿರುವ ಹಾಗೂ ಶ್ರೀಮಂಗಲ ಠಾಣಾಧಿಕಾರಿ (ಪ್ರಭಾರ) ಶ್ರೀಧರ್ ಅವರ ನೇತೃತ್ವದಲ್ಲಿ ಸಿಬ್ಬಂದಿಗಳು ಪಾಲ್ಗೊಂಡಿದ್ದರು.