ಶನಿವಾರಸಂತೆ, ಮೇ 11: ಸಮಾಜಮುಖಿ ಕಾರ್ಯ ಮತ್ತು ಆಧ್ಯಾತ್ಮ ಧ್ಯಾನದ ಮೂಲಕ ಪ್ರತಿಯೊಬ್ಬ ನಾಗರಿಕನ ಬದುಕನ್ನು ಸುಂದರವಾಗಿಸಿ ಕೊಳ್ಳಲು ಸಾಧ್ಯ ಎಂದು ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ ಅಭಿಪ್ರಾಯಪಟ್ಟರು. ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ನೀರುಗುಂದ ಗ್ರಾಮದಲ್ಲಿ ನಡೆದ ಶಿವಕುಮಾರ ಸ್ವಾಮೀಜಿ ಅವರ ಜನ್ಮ ದಿನಾಚರಣೆ ಹಾಗೂ ಬಸವ ಜಯಂತಿ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು. ಶರಣ ಸಾಹಿತ್ಯ ಪರಿಷಯ್ ಜಿಲ್ಲಾಧ್ಯಕ್ಷ ಎಸ್. ಮಹೇಶ್ ಮಾತನಾಡಿ, ಜಾತ್ಯತೀತ ಬದುಕಿನೊಂದಿಗೆ ಜ್ಞಾನದ ಅರಿವು ಮೂಡಿಸಿದ ದೈವ ಬಸವೇಶ್ವರರು. ಅಂತಹ ಆದರ್ಶ ಪುರುಷರ ಭಾವಚಿತ್ರವನ್ನು ಎಲ್ಲಾ ಸರಕಾರಿ ಕಚೇರಿಗಳಲ್ಲಿ ಅಳವಡಿಸಬೇಕು ಎಂದು ಒತ್ತಾಯಿಸಿದರು.

ಮುದ್ದಿನಕಟ್ಟೆ ಮಠದ ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಜೀವಿತಾವಧಿಯ ಪ್ರತಿ ಕ್ಷಣದ ಬದುಕಿನಲ್ಲಿ ಶಿವಕುಮಾರ ಸ್ವಾಮೀಜಿ 12ನೇ ಶತಮಾನದ ಶರಣದ ಜೀವನವನ್ನು ಮುಡಿಪಾಗಿಟ್ಟು ಕೊಂಡಿದ್ದರು ಎಂದರು.

ಕಲ್ಲಳ್ಳಿ ಮಠದ ರುದ್ರಮುನಿ ಸ್ವಾಮೀಜಿ ಹಾಗೂ ಕಲ್ಲುಮಠದ ಮಹಾಂತ ಸ್ವಾಮೀಜಿ ಆಶೀರ್ವಚನ ನೀಡಿದರು. ವೀರಶೈವ ಸಮಾಜದ ಅಧ್ಯಕ್ಷ ಕೆ.ಬಿ. ಹಾಲಪ್ಪ, ರಾಜ್ಯ ಮಹಿಳಾ ಘಟಕದ ನಿರ್ದೇಶಕಿ ರಾಜೇಶ್ವರಿ ನಾಗರಾಜ್ ಮೊದಲಾದವರು ಹಾಜರಿದ್ದರು.