ಮಡಿಕೇರಿ, ಮೇ 11: ಪ್ರಕೃತಿ ವಿಕೋಪದಿಂದಾಗಿ ಸಂಕಷ್ಟದಲ್ಲಿದ್ದ ಕಾಲೂರು ಗ್ರಾಮದ ಮಹಿಳೆ ಯರಿಗೆ ಭಾರತೀಯ ವಿದ್ಯಾ ಭವನದ ಪ್ರಾಜೆಕ್ಟ್ ಕೂರ್ಗ್ ಯೋಜನೆ ಯಡಿ ಯಶಸ್ವಿ ಹೆಸರಿನಲ್ಲಿ ಪ್ರಾರಂಭಿಸಲಾಗಿದ್ದ ಮಸಾಲೆ ಪದಾರ್ಥಗಳ ಉತ್ಪನ್ನಗಳು ಮತ್ತೊಂದು ಮಹತ್ತರ ಘಟ್ಟ ತಲಪಿದೆ.
ಕಾಲೂರಿನ ಮಹಿಳೆಯರು ಉತ್ಪಾದಿಸಿದ ಮಸಾಲೆ ಪದಾರ್ಥಗಳ ಮಾರಾಟಕ್ಕೆ ಇದೀಗ ಸಂಚಾರಿ ವ್ಯಾನ್‍ನ ಬೆಂಬಲ ದೊರಕಿದೆ. ಉತ್ತರ ಅಮೇರಿಕಾದಲ್ಲಿರುವ ಕೊಡವ ಕೂಟ ಪ್ರಾಯೋಜಕತ್ವದಲ್ಲಿ ಸಂಬಾರ ಪದಾರ್ಥಗಳ ಮಾರಾಟಕ್ಕೆ ಸುಸಜ್ಜಿತ ಸಂಚಾರಿ ವ್ಯಾನ್ ತಾ. 12 ರಿಂದ ಸಂಚಾರ ಪ್ರಾರಂಭಿಸಲಿದೆ.
ತಾ. 12 ರಂದು (ಇಂದು) ಸಂಜೆ 6.30 ಗಂಟೆಗೆ ಮಡಿಕೇರಿಯ ಭಾರತೀಯ ವಿದ್ಯಾಭವನ ಆವರಣದಲ್ಲಿ ಸಂಚಾರಿ ವ್ಯಾನ್ ಲೋಕಾರ್ಪಣೆಯಾಗಲಿದೆ ಎಂದು ಯೋಜನೆಯ ಮುಖ್ಯಸ್ಥ ಬಾಲಾಜಿ ಕಶ್ಯಪ್ ತಿಳಿಸಿದ್ದಾರೆ. ಈಗಾಗಲೇ ಕಾಲೂರು ಮಹಿಳೆಯರು ಉತ್ಪಾದಿಸಿದ ಮಸಾಲೆ ಪದಾರ್ಥಗಳನ್ನು ಮಡಿಕೇರಿಯ ರಾಜಾಸೀಟ್ ಉದ್ಯಾನವನದ ಆವರಣ ಹಾಗೂ ಸರ್ಕಾರಿ ಬಸ್ ನಿಲ್ದಾಣ ಬಳಿಯ ಶಿಶು ಕಲ್ಯಾಣ ಸಂಸ್ಥೆಯ ಮುಂಬದಿಯ ಮಳಿಗೆಗಳಲ್ಲಿ ಮಾರಾಟ ಮಾಡಲಾಗುತ್ತಿದ್ದು, ಇದೀಗ ಸಂಚಾರಿ ಘಟಕದೊಂದಿಗೆ ಕೊಡಗಿನಾದ್ಯಂತ ಈ ಮೊಬೈಲ್ ವಾಹನದ ಮೂಲಕ ಕಾಲೂರು ಮಹಿಳೆಯರ ಉತ್ಪಾದನೆಯ ಮಸಾಲಾ, ಸಂಬಾರ ಪದಾರ್ಥಗಳು, ಕೊಡಗಿನ ಕಾಫಿ, ಜೇನು-ತುಪ್ಪ ಗ್ರಾಹಕರಿಗೆ ಸುಲಭವಾಗಿ ದೊರಕಲಿದೆ. ಶಿಶು ಕಲ್ಯಾಣ ಸಂಸ್ಥೆಯ ಮುಂಬದಿಯ ಕಾಲೂರು ಸ್ಟೋರ್ಸ್ ಮಳಿಗೆಯಲ್ಲಿ ಕಾಲೂರು ಗ್ರಾಮಸ್ಥರ ತಯಾರಿಕೆಯ ಕೊಡಗಿನ ಸ್ವಾದಿಷ್ಟ ಫಿಲ್ಟರ್ ಕಾಫಿ ಕೂಡ ದೊರೆಯುತ್ತಿದೆ.