ಕೂಡಿಗೆ, ಮೇ 11: ಬೀದಿನಾಯಿಗಳ ದಾಳಿಗೆ ಹಸುವಿನೊಂದಿಗೆ ಹೊಲದೊಳಗೆ ಮೇಯುತ್ತಿದ್ದ ಕರು ಬಲಿಯಾಗಿರುವ ಘಟನೆ ಕೂಡುಮಂಗಳೂರು ಗ್ರಾಮದಲ್ಲಿ ನಡೆದಿದೆ. ಕೂಡುಮಂಗಳೂರು ಗ್ರಾಮದ ನಿವಾಸಿ ಹಾಸನ ಹಾಲು ಒಕ್ಕೂಟದ ಮಾಜಿ ನಿರ್ದೇಶಕ ಕೆ.ಟಿ. ಅರುಣ್‍ಕುಮಾರ್ ಅವರ ಹಸು ಮತ್ತು ಕರು ಹೊಲದಲ್ಲಿ ಎಂದಿನಂತೆ ಮೇಯುತ್ತಿದ್ದವು. ಕರುವನ್ನು ಬಲಿ ಪಡೆದ ನಾಯಿಗಳು...(ಮೊದಲ ಪುಟದಿಂದ) ಆದರೆ 10ಕ್ಕೂ ಹೆಚ್ಚು ಬೀದಿನಾಯಿಗಳು ಮಧ್ಯಾಹ್ನದ ಸಂದರ್ಭ ಕರುವಿನ ಮೇಲೆ ದಾಳಿ ನಡೆಸಿವೆ. ಕರುವಿನ ಹೊಟ್ಟೆಯ ಭಾಗಕ್ಕೆ ಕಚ್ಚಿ ಎಳೆದಾಡಿದ ಪರಿಣಾಮ ಕರುವು ಸ್ಥಳದಲ್ಲೆ ಸಾವನ್ನಪ್ಪಿದೆ.
ಹಸು ಮತ್ತು ಕರುವನ್ನು ಮೇಯಿಸುತ್ತಿದ್ದ ಮಾಲೀಕರು ಊಟಕ್ಕೆ ಮನೆಗೆ ತೆರಳಿದ ಸಂದರ್ಭ ಈ ಘಟನೆಯು ನಡೆದಿದ್ದು, ಮನೆಯಿಂದ ವಾಪಾಸ್ ಬಂದ ಮಾಲೀಕರಿಗೆ ಕರುವಿನ ಮೇಲೆ ನಾಯಿಗಳು ದಾಳಿ ನಡೆಸಿರುವದು ತಿಳಿದು ಬಂದಿದೆ.
ಈ ನಾಯಿಗಳ ಗುಂಪು ಆಟವಾಡುತ್ತಿದ್ದ ಮಕ್ಕಳಿಗೂ ಕಚ್ಚಿರುವ ಘಟನೆಗಳು ಕೂಡುಮಂಗಳೂರು ಮತ್ತು ಕೂಡಿಗೆ ಗ್ರಾ.ಪಂ ವ್ಯಾಪ್ತಿಯಲ್ಲಿ ನಡೆದಿವೆ.
ಬೇಸಿಗೆ ರಜೆಯಾಗಿರುವದರಿಂದ ಮಕ್ಕಳು ಹೊರಗೆ ಆಟವಾಡುವಾಗ ಬೀದಿ ನಾಯಿಗಳಿಂದ ತೊಂದರೆ ಉಂಟಾಗುವ ಸಾಧ್ಯತೆಗಳಿದ್ದು, ಕೂಡುಮಂಗಳೂರು ಮತ್ತು ಕೂಡಿಗೆ ಗ್ರಾಮ ಪಂಚಾಯಿತಿಯವರು ಬೀದಿನಾಯಿಗಳಿಂದ ಮುಂದಾಗುವ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಬೀದಿನಾಯಿಗಳ ಹಾವಳಿಯನ್ನು ನಿಯಂತ್ರಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.