ಮಡಿಕೇರಿ, ಮೇ 11: ಕಾಲೂರು ಗ್ರಾಮಸ್ಥರು ಭತ್ತದ ಗದ್ದೆಗಳಿಲ್ಲದೇ ಕಾಳಿಗಾಗಿ ಕೈಯೊಡ್ಡುವಂತಾಗಿದೆ. ಕಾಲೂರಿನಲ್ಲಿ ಪ್ರಸ್ತುತ ವಾಸವಿರುವವರು ಗುಡುಗು ಬೇಡ.. ಸ್ವಲ್ಪ ದೊಡ್ಡ ಶಬ್ದವಾದಲ್ಲಿ ಮತ್ತೆ ಬೆಟ್ಟ ಕುಸಿಯಿತೇನೋ ಎಂಬ ಭಯದಿಂದ ನಡಗುತ್ತಿದ್ದಾರೆ. ಇನ್ನೇನು ಊರಿಗೆ ಕಾಲಿಡಲಿರುವ ಮಳೆರಾಯ ಎಂತಹ ಅನಾಹುತ ಸೃಷ್ಟಿಸುತ್ತಾನೋ ಎಂಬ ಆತಂಕ ಗ್ರಾಮಸ್ಥರನ್ನು ಕಾಡುತ್ತಿದೆ.
ಕಾಲೂರಿನಲ್ಲಿ ಕಳೆದ ವರ್ಷದ ಜಲಪ್ರಳಯಕ್ಕೆ ಒಂದೇ ಕಡೆ 35 ಎಕರೆಗಳಷ್ಟು ಭತ್ತದ ಗದ್ದೆಗಳು ಸಂಪೂರ್ಣವಾಗಿ ಜಲಾವೃತಗೊಂಡು ಮರಳು, ಮಣ್ಣಿನಿಂದ ಮುಚ್ಚಿ ಹೋಗಿದ್ದವು.
ಇದೀಗ ಕಾಲೂರಿನಲ್ಲಿ ಹೊಸದಾಗಿ ಸೇತುವೆಯೊಂದು ಭತ್ತದ ಗದ್ದೆಗಳಿದ್ದ ಸ್ಥಳದಲ್ಲಿ ಸಂಪರ್ಕ ಸೇತುವಾಗಿ ನಿರ್ಮಾಣವಾಗುತ್ತಿದೆ. ಈ ಸೇತುವೆ ಮಳೆಗಾಲದಲ್ಲಿ ಜನರ ನಡಿಗೆಗೆ ದೊರಕೀತು ಎಂಬದು ಕಷ್ಟವಾದರೂ ಒಂದಿಷ್ಟು ಆಶಾಭಾವನೆಯನ್ನು ಮೂಡಿಸಿದೆ.
ಕಾಲೂರಿನಲ್ಲಿ ಬಲ್ಯಮೊಟ್ಚೆ ಎಂಬ ಬೆಟ್ಟದ ತಪ್ಪಲಿನಲ್ಲಿ ವಾಸವಾಗಿರುವ 8 ಕುಟುಂಬಗಳ ಸ್ಥಿತಿ ಅತಂತ್ರವಾಗಿದೆ. ಇವರ ಮನೆಗಳಿಗೆ ತೆರಳಲು ಇದ್ದ 25 ಅಡಿ ಎತ್ತರದ ಸಂಪರ್ಕ ಸೇತುವೆ ಬಳಿಯೇ ಹೊಳೆ ನೀರು ಹರಿಯುತ್ತಿದ್ದು, ಮಳೆ ಬಂದಲ್ಲಿ ಈ ಸೇತುವೆ ಮೊದಲ ಮಳೆಗೇ ಜಲಾವೃತವಾಗಲಿದೆ. ಆಗ ಸೇತುವೆ ದಾಟಲಾಗದೇ ಈ 8 ಕುಟುಂಬಗಳಲ್ಲಿ 20ಕ್ಕೂ ಅಧಿಕ ನಿವಾಸಿಗಳು ಜೀವ ಕೈಯಲ್ಲಿ ಹಿಡಿದು ಕಾಲ ಕಳೆಯಬೇಕಾದ ಅನಿವಾರ್ಯತೆ ಎದುರಾಗಲಿದೆ.
ಈ ಬೆಟ್ಟ ತಪ್ಪಲಲ್ಲಿ ಕೋಳುಮಾಡಂಡ ಅಯ್ಯಪ್ಪ ಎಂಬ 78 ವರ್ಷದ ದಂಪತಿಯೂ ವಾಸವಾಗಿದ್ದಾರೆ. ಕಳೆದ ಜಲಪ್ರಳಯದ ಸಂದರ್ಭ ಈ ದಂಪತಿಯ ಮಕ್ಕಳು, ಸೊಸೆಯಂದಿರು ಈ ಹಿರಿಯ ಜೀವಗಳನ್ನು ರಕ್ಷಿಸಿದ್ದರಂತೆ. ಕೋಳುಮಾಡಂಡ, ನಂದೀರ ಕುಟುಂಬದ ಹಲವರ ಕಾಫಿ ತೋಟಗಳು ಬಲ್ಯಮೊಟ್ಟೆ ತಪ್ಪಲಲ್ಲಿದೆ. ಪ್ರತೀ ವರ್ಷ ಎಕರೆಗೆ 20 ಚೀಲ ಕಾಫಿ ಕುಯ್ಯುತ್ತಿದ್ದವರಿಗೆ ಪ್ರಕೃತಿ ಮುನಿದ ಈ ವರ್ಷ 3 ಎಕರೆಯಲ್ಲಿ ಒಟ್ಟಾಗಿ 20 ಚೀಲ ಕಾಫಿಯಾಗಿದೆ. ಬೆಟ್ಟ ಕುಸಿದಾಗ ಬಿದ್ದ ಮನೆಯ ಭಾಗಗಳನ್ನೂ ದುರಸ್ತಿಗೊಳಿಸಲೂ ಸಾಧ್ಯವಾಗಿಲ್ಲ. ಪಂಚಾಯಿತಿ ಅಧಿಕಾರಿಗಳೂ ಸೇರಿದಂತೆ ಯಾವ ಅಧಿಕಾರಿಗಳೂ ತಮ್ಮ ಬಳಿ ಬಂದಿಲ್ಲ. ಅಹವಾಲು ಕೇಳಿಲ್ಲ. ಪರಿಹಾರವೂ ದೊರಕಿಲ್ಲ ಎಂಬದು ಈ ಗ್ರಾಮಸ್ಥರ ನೋವಿನ ನುಡಿ.
ಕಾಲೂರಿನ ಅನೇಕ ಕುಟುಂಬಗಳು ವರ್ಷಾನುಗಟ್ಟಲೆ ಕಷ್ಟದ ಜೀವನ ಸವೆಸಿದವರು. ಮೊದಲೆಲ್ಲಾ ಏಲಕ್ಕಿ ಬೆಳೆಯುತ್ತಿದ್ದವರು. ಇತ್ತೀಚಿನ ವರ್ಷಗಳಲ್ಲಿ ಕಾಫಿಯತ್ತ ಮುಖಮಾಡಿ ಒಂದಿಷ್ಟು ಹಣ ಸಂಪಾದನೆ ಮಾಡಿ ಸಮಾಜದ ಮುಖ್ಯವಾಹಿನಿಗೆ ಬಂದವರು. ಜೀವನ ಅಂತೂ-ಇಂತು ಒಂದಿಷ್ಟು ಚೇತರಿಸಿಕೊಳ್ಳುತ್ತಿದೆ ಎಂದು ಸಂತೋಷದ ನಗು ನಕ್ಕಾಗಲೇ ಜಲಪ್ರಳಯ ಈ ಗ್ರಾಮಸ್ಥರ ಪಾಲಿಗೆ ಶಾಪವಾಯಿತು. ಇದ್ದ ಆಸ್ತಿಯೂ ನೀರು ಪಾಲಾಯಿತು.
ಒಂದಿಷ್ಟು ದುಡ್ಡು ಕೈಗೆ ಸಿಕ್ಕಿದಾಗ ಇಲ್ಲಿನವರು ಬೇರೆಯವರಂತೆ ತಾವೂ ಸ್ವಂತ ವಾಹನದ ಕನಸು ಕಂಡು ಕಾರು, ಜೀಪು ಖರೀದಿಸಿದ್ದರು. ಆದರೆ ಜಲಪ್ರಳಯದಿಂದಾಗಿ ಇವರ ಸ್ವಂತ ಕಾರು, ಜೀಪು ಮನೆಯ ಪಕ್ಕದಲ್ಲಿ ನಿಂತು 5-6 ತಿಂಗಳಾಗುತ್ತಾ ಬಂದಿದೆ. ಈ ತಿಂಗಳಾಂತ್ಯದಲ್ಲಿ ಹಲವರು ತಮ್ಮ ಕಾರ್, ಜೀಪುಗಳನ್ನು ಮಡಿಕೇರಿಗೆ ಕೊಂಡೊಯ್ದು ಪರಿಚಿತರ ಮನೆಯಲ್ಲಿ ನಿಲ್ಲಿಸುವ ಆಲೋಚನೆಯಲ್ಲಿದ್ದಾರೆ. ಯಾಕೆ ಹೀಗೆ ಎಂದರೆ, ಮತ್ತೇನು ಮಾಡುವದು, ಊರಿಗೆ ಸುರಕ್ಷಿತವಾಗಿ ಈ ಮಳೆಯಲ್ಲಿ ತೆರಳುವ ವಿಶ್ವಾಸವಿಲ್ಲ. ಮನೆಗೆ ಸಂಪರ್ಕ ಕಲ್ಪಿಸಲು ಸೇತುವೆ ನಿರ್ಮಾಣವಾಗಿಲ್ಲ. ರಸ್ತೆಯೂ ಹೋಗಿದೆ ಎಂದು ನೊಂದು ನುಡಿದರು.
ಸರಕಾರ ಪ್ರಕೃತಿ ವಿಕೋಪ ಪ್ರದೇಶಗಳ ನದಿಪಾತ್ರಗಳಲ್ಲಿ ಹೂಳೆತ್ತುವ, ಮರಳು ತೆಗೆದು ನದಿ ನೀರಿನ ಸರಾಗ ಹರಿವಿಕೆಗೆ ಇನ್ನೂ ಕಾರ್ಯೋನ್ಮುಖವಾಗಿಲ್ಲ. ದನ-ಕರು, ಜಾನುವಾರು ಸಾಕುವಿಕೆಯನ್ನೇ ಕೈಬಿಟ್ಟಿದ್ದೇವೆ. ತರಕಾರಿ ಬೆಳೆದರೂ ಈ ಮಳೆಯಲ್ಲಿ ಅದೂ ಹೊಳೆಯಲ್ಲಿ ಕೊಚ್ಚಿ ಹೋಗುವ ಆತಂಕವಿದೆ. 2 ಕಿ.ಮೀ. ತಲೆ ಮೇಲೆ ಕಾಫಿ ಹೊತ್ತುಕೊಂಡು ನಡೆದಿದ್ದೇನೆ. ಇಂತಹ ನರಕ ಯಾರಿಗೆ ಬೇಕು. ಕಾಲೂರಿಗೆ ಮದುವೆಯಾಗಿ ಬಂದು 28 ವರ್ಷಗಳಲ್ಲಿ ಇಂತಹ ದಾರುಣ ಸ್ಥಿತಿ ಕಾಣಲಿಲ್ಲ ಎಂದು ಮರುಗುವ ತಂಬುಕುತ್ತೀರ ದಮಯಂತಿ, ಶಾಸಕರು ಸೂಕ್ತ ಸ್ಪಂದನ ನೀಡಿದ್ದಾರೆ. ಆದರೆ, ಸರಕಾರದ ಸವಲತ್ತುಗಳನ್ನು ಸಂತ್ರಸ್ತರಿಗೆ ನೀಡಬೇಕಾದ ಅಧಿಕಾರಿಗಳು ಮಾತ್ರ ಇಂದಿಗೂ ನಾಪತ್ತೆಯಾಗಿದ್ದಾರೆ ಎಂದು ಬೇಸರದಿಂದಲೇ ಹೇಳಿದರು.
ಕಾಲೂರಿನ ಬಲ್ಯಮೊಟ್ಟೆ ತಪ್ಪಲಲ್ಲಿರುವ ಕಿರುಸೇತುವೆಯನ್ನು ಇನ್ನೂ ಕೊಂಚ ಎತ್ತರಿಸಿ, ಮಳೆಯಲ್ಲಿ ಜಲಾವೃತವಾಗದಂತೆ ನೋಡಿಕೊಳ್ಳಿ. ಸಂತ್ರಸ್ತರಿಗೆಂದು ಜಗತ್ತಿನ ಎಲ್ಲೆಡೆಯಿಂದ ಬಂದ ಕೋಟಿಗಟ್ಟಲೆ ಹಣವನ್ನು ಈಗಲಾದರೂ ಬಳಸಿ ಕಾಲೂರು ಹೊಳೆಯ ಹೂಳೆತ್ತಿ. ಮರಳು ತೆಗೆಯಿರಿ. 2 ಜೆಸಿಬಿ ಬದಲಿಗೆ 4 ಜೆಸಿಬಿ ಬಳಸಿ, ಮಳೆಗಾಲಕ್ಕೆ ಮುನ್ನ ಈ ಕೆಲಸ ಮಾಡಿ ಗ್ರಾಮಸ್ಥರನ್ನು ಇಲ್ಲಿಯೇ ಉಳಿಸಿ ಎಂಬದು ಗ್ರಾಮಸ್ಥರ ಆಗ್ರಹ.
ಜಲಪ್ರಳಯದ ಸಂತ್ರಸ್ತರಿರುವ ಪ್ರದೇಶಗಳಿಗೆ ತೆರಳಿ ಅವರ ಸದ್ಯದ ಸಮಸ್ಯೆಯೇನು. ಯಾವೆಲ್ಲಾ ಪರಿಹಾರ ಕೂಡಲೇ ಆಗಬೇಕು. ಜನರಲ್ಲಿನ ಭಯವನ್ನು ಹೇಗೆ ನಿವಾರಿಸಬೇಕೆಂದು ಕಾರ್ಯಯೋಜನೆ ರೂಪಿಸಬೇಕಾದ ಅಧಿಕಾರಿಗಳು ಮಾತ್ರ ರಾಜ್ಯದ ರಾಜಧಾನಿ ಹಾಗೂ ಜಿಲ್ಲಾ ಕೇಂದ್ರದಲ್ಲಿಯೇ ಕುಳಿತು ಈ ವರ್ಷ ಮಳೆ ಕಡಿಮೆ ಸಾಧ್ಯತೆಯಿದೆ. ಅಕಸ್ಮಾತ್ ಹೆಚ್ಚಿನ ಮಳೆ ಬಂದರೂ ಬರಬಹುದು. 2-3 ದಿನ ನಿರಂತರವಾಗಿ ಮಳೆ ಬಂದರೆ ನೀವು ಜಾಗ ಖಾಲಿ ಮಾಡಬೇಕಾದೀತು ಎಂಬೆಲ್ಲಾ ಹಾಸ್ಯಾಸ್ಪದ ಹೇಳಿಕೆ ನೀಡುತ್ತಿದ್ದಾರೆ. ಜಿಲ್ಲಾಡಳಿತ ವಿಶೇಷ ಸಭೆ ಆಯೋಜಿಸಿ ಸಮಸ್ಯೆ ನಿವಾರಿಸಲು ಸಾಧ್ಯವಿಲ್ಲವೇ?
- ಅನಿಲ್ ಎಚ್.ಟಿ.