ವೀರಾಜಪೇಟೆ, ಮೇ 11: ಮೈತಾಡಿ ಗ್ರಾಮದ ನಾಂಗಾಲ ಚಾಮುಂಡೇಶ್ವರಿ ದೇವಸ್ಥಾನದ ಜೀರ್ಣೋದ್ಧಾರ ಹಾಗೂ ಅಷ್ಟಬಂಧ ಬ್ರಹ್ಮಕಲಶೋತ್ಸವ ತಾ. 13 ರಿಂದ 17 ರವರೆಗೆ ನಡೆಯಲಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಬಾಳೆಕುಟ್ಟಿರ ಮಂದಣ್ಣ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಾಮುಂಡೇಶ್ವರಿ ದೇವಾಲಯಕ್ಕೆ 800 ವರ್ಷಗಳ ಇತಿಹಾಸವಿದೆ. ದೇವಾಲಯದ ಮೇಲೆ ದಾಳಿ ನಡೆದು 237 ವರ್ಷಗಳಾಗಿದೆ ಎಂದು ಇತಿಹಾಸದಲ್ಲಿ ಹೇಳಲಾಗುತ್ತಿದೆ. ದೇವಾಲಯ ಶಿಥಿಲಾವಸ್ಥೆಯಲ್ಲಿದ್ದುದರಿಂದ ಲೋಕಕಲ್ಯಾಣಾಕ್ಕಾಗಿ ಅಷ್ಟಬಂಧ ಬ್ರಹ್ಮ ಕಲಶೋತ್ಸವ ಕಾರ್ಯವನ್ನು ಅಂದಾಜು ರೂ. 10 ಲಕ್ಷ ವೆಚ್ಚದಲ್ಲಿ ಗೋಪಾಲಕೃಷ್ಣ ನಂಬೂದರಿ ನೇತೃತ್ವದಲ್ಲಿ ನಡೆಸಲಾಗುವದು. ಮುಂದಿನ ದಿನಗಳಲ್ಲಿ ತೀರ್ಥಮಂಟಪ, ಪೌಳಿ, ನೈವೇದ್ಯ ಕೋಣೆಗಳನ್ನು ನಿರ್ಮಾಣ ಮಾಡುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು.
ತಾ. 13 ರಂದು ಸಂಜೆ 5ರಿಂದ ರಾತ್ರಿ 9.30 ರವರೆಗೆ ಗೋಪೂಜೆ, ಪಂಚಗವ್ಯ ಸ್ಥಳ ಶುದ್ಧಿ, ಭೂದೇವಿಪೂಜೆ ಅಂಕುರಾರ್ಪಣೆ, ಹೋಮ, ಜಲಾಧಿವಾಸ, ಮಹಾಪೂಜಾ ಸೇವೆ, ತಾ. 14 ರಂದು ಬೆಳಿಗ್ಗೆ 7 ರಿಂದ 12 ರ ತನಕ ಮಹಾಗಣಪತಿ ಹೋಮ, ಬಿಂಬ ಶುದ್ಧಿ, ಅಕ್ಷತ ಹೋಮ ಹಾಗೂ ಮಹಾಪೂಜಾ ಸೇವೆ, ಸಂಜೆ 5 ರಿಂದ 9 ಗಂಟೆಯವರೆಗೆ ದುರ್ಗಾಪೂಜೆ, ಶಾಂತಿ ಹೋಮ, ಮಹಾಪೂಜೆ ನಡೆಯಲಿದೆ. ತಾ. 15 ರಂದು ಬೆಳಿಗ್ಗೆ 7 ರಿಂದ 12 ರವರೆಗೆ ಕಲಾಶಾಭಿಷೇಕ ಮಹಾಪೂಜಾ ಸೇವೆ, ಸಂಜೆ 6 ರಿಂದ 9 ರವರೆಗೆ ಭಗವತಿ ಸೇವೆ, ಕುರುದಿ ತರ್ಪಣ, ತಾ. 16 ರಂದು ಬೆಳಿಗ್ಗೆ 7 ರಿಂದ 12 ರವರೆಗೆ ಪ್ರಾಯಶ್ಚಿತ ಹೋಮ, ತತ್ವ ಕಲಾಶಭಿಷೇಕ, ಮಹಾಪೂಜೆ, ಸಂಜೆ 6.30 ರಿಂದ ರಾತ್ರಿ 9.30 ರವರೆಗೆ ದೀಪಾರಾಧನೆ, ದೇವಿ ಪೂಜೆ, ಪೀಠ ಪ್ರತಿಷ್ಠೆ ಹಾಗೂ ತಾ. 17 ರಂದು ಬೆಳಿಗ್ಗೆ 6.30 ರಿಂದ 108 ಕಲಶ ಪೂಜೆ, ಪೂರ್ವಾಹ್ನ 10.30 ರಿಂದ ಬ್ರಹ್ಮ ಕಲಶೋತ್ಸವ ಜರುಗಲಿದೆ.
ಆಡಳಿತ ಮಂಡಳಿಯ ನಿರ್ದೇಶಕ ಚಪ್ಪಂಡ ಹರೀಶ್ ಮಾತನಾಡಿ, ತಾ. 16 ರಂದು ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಬಲ್ಲಚಂಡ ಪೂವಯ್ಯ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಅರಮೇರಿ ಕಳಂಚೇರಿ ಮಠಾಧೀಶ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ, ಶಾಸಕ ಕೆ.ಜಿ. ಬೋಪಯ್ಯ, ತಡಿಯಂಗಡ ತಾರ ಸದಾನಂದಾ, ಬೆಂಗಳೂರು ಕೊಡವ ಸಮಾಜ ಮಾಜಿ ಅಧ್ಯಕ್ಷ ಬೇರೆರ ಶಂಭು ಅಯ್ಯಣ್ಣ, ಎಲ್.ಐ.ಸಿ. ಇಂಡಿಯಾದ ಆಡಳಿತಾಧಿಕಾರಿ ಬಲ್ಲಚಂಡ ಕಿಶನ್ ಕುಶಾಲಪ್ಪ ಉಪಸ್ಥಿತರಿರುವರು ಎಂದು ಹೇಳಿದರು.
ಗೋಷ್ಠಿಯಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬಲ್ಲಚಂಡ ಪೂವಯ್ಯ, ಉಪಾಧ್ಯಕ್ಷ ಪಿ.ಜಿ. ಅಯ್ಯಪ್ಪ, ನಿರ್ದೇಶಕರುಗಳಾದ ಐಯ್ಯಮಂಡ ವೇಣು ಕಾವೇರಪ್ಪ, ಐಚೇಟ್ಟಿರ ನವೀನ್ ಕಾರ್ಯಪ್ಪ ಹಾಜರಿದ್ದರು.