ಗೋಣಿಕೊಪ್ಪಲು, ಮೇ 11: ಕೊಡಗು ಜಿಲ್ಲೆಯ ವಿವಿಧೆಡೆ ಅನೇಕ ಸಮುದಾಯಗಳ ನಡುವೆ ಕ್ರೀಡಾಕೂಟಗಳು ನಡೆಯುತ್ತಿವೆ. ಗೋಣಿಕೊಪ್ಪಲುವಿನಲ್ಲಿಯೂ ಉತ್ಸಾಹಿ ಯುವಕರ ತಂಡ ಇದೇ ಮೊದಲ ಬಾರಿಗೆ ಎಲ್ಲ ಜನಾಂಗವನ್ನು ಸೇರಿಸಿಕೊಂಡು ಹೊನಲು ಬೆಳಕಿನ ಪ್ರೀಮಿಯರ್ ಫುಟ್‍ಬಾಲ್ ಪಂದ್ಯಾಟಕ್ಕೆ ಸಜ್ಜಾಗಿದ್ದಾರೆ. ಕಳೆದ ಆರು ವರ್ಷಗಳಿಂದ ಪಂದ್ಯಾಟ ನಡೆಸಿಕೊಂಡು ಬರುತ್ತಿರುವ ಚೆಲ್ಸಿ ಸ್ಪೋಟ್ರ್ಸ್ ಕ್ಲಬ್‍ನ ಸದಸ್ಯರು ಈ ಬಾರಿ ಹೊನಲು ಬೆಳಕಿನ ಫುಟ್‍ಬಾಲ್ ಪಂದ್ಯಾಟ ನಡೆಸಲು ಸಕಲ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಐಪಿಎಲ್ ಮಾದರಿಯಲ್ಲಿ ನಡೆಯುವ ಪಂಧ್ಯಾಟದಲ್ಲಿ 12 ತಂಡಗಳು ಪಾಲ್ಗೊಂಡಿದ್ದು ವಿವಿಧ ಭಾಗದಿಂದ 84 ಅನುಭವಿ ಆಟಗಾರರು ಭಾಗವಹಿಸಲಿದ್ದಾರೆ. ಪ್ರತಿ ಆಟಗಾರರನ್ನು ಈಗಾಗಲೇ ತಂಡದ ವ್ಯವಸ್ಥಾಪಕರು ಬಿಡ್ಡಿಂಗ್ ಮೂಲಕ ಖರೀದಿಸಿದ್ದಾರೆ.
ಗೋಣಿಕೊಪ್ಪಲುವಿನ ಬೈ ಪಾಸ್ ರಸ್ತೆಯ ಗದ್ದೆ ಮೈದಾನದಲ್ಲಿ ಪಂದ್ಯಾಟಕ್ಕೆ ಸಕಲ ವ್ಯವಸ್ಥೆಗಳು ನಡೆದಿವೆ. ಚೆಲ್ಸಿ ಸ್ಪೋಟ್ರ್ಸ್ ಕ್ಲಬ್, ಹಿಂದೂಸ್ಥಾನ್, ಮಡ್ ಹಂಟರ್ಸ್, ಸೈಕ್ಲೋನ್ ಎಫ್‍ಸಿ, ರಾಮಫ್ರೆಂಡ್ಸ್, ಭಗತ್‍ಸಿಂಗ್, ಎಸ್.ಬಿ.ರಾಕರ್ಸ್, ಉಂಬಯಿ ಎಫ್‍ಸಿ, ಫ್ರೆಂಡ್ಸ್ ಎಫ್‍ಸಿ, ನೆಹರು ಎಫ್‍ಸಿ, ಟೀಮ್ 3 ಎಸ್‍ಕೆ ಅರುವತೋಕ್ಲು ಹಾಗೂ ಅನುಗ್ರಹ ಎಫ್‍ಸಿ ತಂಡಗಳು ಸೆಣಸಾಟ ನಡೆಸಲಿವೆ.
ಎರಡು ಲಕ್ಷ ಅಂದಾಜು ವೆಚ್ಚದಲ್ಲಿ ಪಂದ್ಯಾಟ ನಡೆಯುತ್ತಿದ್ದು ಭಾನುವಾರ ಮುಂಜಾನೆ 7.30ಗಂಟೆಗೆ ಪಂದ್ಯಾಟಕ್ಕೆ ಚಾಲನೆ ದೊರೆಯಲಿದೆ. ರಾತ್ರಿ ಹೊನಲು ಬೆಳಕಿನಲ್ಲಿ ಪಂದ್ಯಾಟಗಳು ನಡೆಯಲಿದ್ದು ನಗರದ ಕ್ರೀಡಾಭಿಮಾನಿಗಳಿಗೆ ಪಂದ್ಯ ವೀಕ್ಷಿಸಲು ಆಯೋಜಕರು ವ್ಯವಸ್ಥೆ ಕಲ್ಪಿಸಿದ್ದಾರೆ.
ಸಂಜೆ ನಡೆಯುವ ವೇದಿಕೆ ಕಾರ್ಯಕ್ರಮದಲ್ಲಿ ದಾನಿಗಳಾದ ಮೀನು ಉಂಬಯಿ, ರಾಹತ್ ಟಿಂಬರ್ ಮಾಲೀಕರಾದ ಸಮೀರ್, ಜಿಲ್ಲಾ ಪಂಚಾಯ್ತಿ ಸದಸ್ಯರು, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಸಿ.ಕೆ.ಬೋಪಣ್ಣ, ಕುಟ್ಟ ಜಿಲ್ಲಾ ಪಂಚಾಯ್ತಿ ಸದಸ್ಯರಾದ ಮುಕ್ಕಾಟಿರ ಶಿವು ಮಾದಪ್ಪ, ಗೋಣಿಕೊಪ್ಪ ಗ್ರಾಮ ಪಂಚಾಯ್ತಿ ಸದಸ್ಯರಾದ ಕುಲ್ಲಚಂಡ ಪ್ರಮೋದ್ ಗಣಪತಿ, ಬೇಕರಿ ಮಾಲೀಕರಾದ ರಾಜ, ಹಿಂದೂ ಮಲಯಾಳಿ ಸಮಾಜದ ಅಧ್ಯಕ್ಷ ಶರತ್‍ಕಾಂತ್, ಬಸ್ ಮಾಲೀಕರಾದ ಅಮೃತ ರಾಜಣ್ಣ, ಜುಮಾಮಸೀದಿ ಅಧ್ಯಕ್ಷರಾದ ಬಶೀರ್, ಕಾಫಿ ಬೆಳೆಗಾರರಾದ ಕೊಲ್ಲೀರ ಬೋಪಣ್ಣ, ಪಾಲಿಬೆಟ್ಟ ಗ್ರಾಮ ಪಂಚಾಯ್ತಿಯ ಅಧ್ಯಕ್ಷರಾದ ಪುಲಿಯಂಡ ಬೋಪಣ್ಣ, ಆಲ್ಫೀಯಾ ಮೊಬೈಲ್ ಶಾಪ್‍ನ ಮಾಲೀಕರಾದ ಅಪ್ಸರ್, ‘ಕೊಡಗು ದ್ವನಿ’ ಪತ್ರಿಕೆಯ ಸಂಪಾದಕ ಹೆಚ್.ಕೆ.ಜಗದೀಶ್, ಬಿಎಸ್‍ಎನ್‍ಎಲ್‍ನ ಮಣಿ, ಸೇರಿದಂತೆ ಇನ್ನಿತರ ಗಣ್ಯರು ಭಾಗವಹಿಸಲಿದ್ದಾರೆ. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಿ ಗೌರವಿಸುವ ಕಾರ್ಯಕ್ರಮ ನಡೆಯಲಿದೆ.