ಸೋಮವಾರಪೇಟೆ, ಮೇ 11: ತಾಲೂಕಿನ ಕಿರಗಂದೂರು ಸರಕಾರಿ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿಗಳ ಸಂಘ, ಶಾಲಾಭಿವೃದ್ಧಿ, ಮೇಲುಸ್ತುವಾರಿ ಸಮಿತಿ ಮತ್ತು ಪೋಷಕರ ಸಹಕಾರದೊಂದಿಗೆ ಪ್ರಸಕ್ತ ವರ್ಷದಿಂದ ಆಂಗ್ಲ ಮಾಧ್ಯಮದಲ್ಲಿ ಪೂರ್ವ ಪ್ರಾಥಮಿಕ ತರಗತಿಯನ್ನು ಪ್ರಾರಂಭಿಸಲಾಗುವದು ಎಂದು ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಕೆ.ಈ. ಭರತ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2019-20ನೇ ಸಾಲಿಗೆ ಎಲ್.ಕೆ.ಜಿ. ತರಗತಿಯನ್ನು ತೆರೆಯಲು ಸಾರ್ವಜನಿಕ ಶಿಕ್ಷಣ ಇಲಾಖೆ ಅನುಮತಿ ನೀಡಿದ್ದು, ವಿದ್ಯಾರ್ಥಿಗಳಿಗೆ ಎಲ್.ಕೆ.ಜಿ. ಹಾಗೂ ಮುಂದಿನ ವರ್ಷ ಯು.ಕೆ.ಜಿ.ಗೆ ಉಚಿತ ಪ್ರವೇಶವಿರುತ್ತದೆ ಎಂದರು.

ಪೋಷಕರು ತಮ್ಮ ಮಕ್ಕಳನ್ನು ಇಂಗ್ಲೀಷ್ ಮಾಧ್ಯಮಕ್ಕೆ ಸೇರಿಸಲು ಖಾಸಗಿ ಶಾಲೆಯನ್ನು ಅವಲಂಭಿಸಿ ದ್ದಾರೆ. ಈ ಕಾರಣದಿಂದ ಸರ್ಕಾರಿ ಶಾಲೆಗಳು ಮುಚ್ಚುವ ಹಂತದಲ್ಲಿವೆ. ಕಿರಗಂದೂರು ಶಾಲೆ ಒಳ್ಳೆಯ ಪರಿಸರ ದಲ್ಲಿದ್ದು, ಇಲ್ಲಿನ ಪ್ರೌಢಶಾಲೆಯೂ ಕೂಡ ಕಳೆದ ನಾಲ್ಕು ವರ್ಷಗಳಿಂದ ಹತ್ತನೆ ತರಗತಿಯಲ್ಲಿ ಶೇ.100ರಷ್ಟು ಫಲಿತಾಂಶ ಪಡೆದಿದೆ. ಗ್ರಾಮೀಣ ಭಾಗದಲ್ಲಿನ ಎಲ್ಲಾ ವರ್ಗದ ಮಕ್ಕಳಿಗೂ ಆಂಗ್ಲ ಮಾಧ್ಯಮದ ಶಿಕ್ಷಣ ಸಿಗಬೇಕೆಂಬ ಉದ್ದೇಶದಿಂದ ಎಲ್.ಕೆ.ಜಿ. ತರಗತಿ ಪ್ರಾರಂಭಿಸಲು ಕ್ರಮವಹಿಸಲಾಗಿದೆ ಎಂದು ಮಾಹಿತಿ ನೀಡಿದರು.

ಆಂಗ್ಲ ಮಾಧ್ಯಮ ತರಗತಿಗೆ ಮೂಲಭೂತ ಸೌಲಭ್ಯಗಳನ್ನು ನಾವೇ ಒದಗಿಸಬೇಕಾಗಿದೆ. ಈ ನಿಟ್ಟಿನಲ್ಲಿ ಕಿರಗಂದೂರು, ತಾಕೇರಿ, ಬಿಳಿಗೇರಿ ಗ್ರಾಮಸ್ಥರ ಸಹಕಾರ ಸಿಕ್ಕಿದ್ದು, ಈಗಾಗಲೇ ದಾಖಲಾತಿ ಪ್ರಾರಂಭವಾಗಿದೆ ಎಂದರು. ಗೋಷ್ಠಿಯಲ್ಲಿ ಎಸ್.ಡಿ.ಎಂ.ಸಿ. ಅಧ್ಯಕ್ಷ ಹೆಚ್.ಜೆ. ಪ್ರಸನ್ನ ಕುಮಾರ್, ಸಂಘದ ಕಾರ್ಯದರ್ಶಿ ಪಿ.ಬಿ. ಪೊನ್ನಪ್ಪ, ಖಜಾಂಚಿ ಕೆ.ಕೆ. ಚಂದ್ರಾಜು, ನಿರ್ದೇಶ ಕರುಗಳಾದ ಟಿ.ಜೆ. ಗಣೇಶ್‍ಕುಮಾರ್, ಜಿ.ಸಿ. ಸಿದ್ದಪ್ಪ ಉಪಸ್ಥಿತರಿದ್ದರು.