ಶನಿವಾರಸಂತೆ, ಮೇ 11: ಮನುಷ್ಯನ ಜನನದಿಂದ ಮರಣದ ತನಕವೂ ಕಾನೂನು ಕಟ್ಟಲೆಯ ಅವಶ್ಯಕತೆ ಇದೆ ಎಂದು ಸೋಮವಾರಪೇಟೆ ಸಿವಿಲ್ ನ್ಯಾಯಾಲಯದ ಸಿವಿಲ್ ನ್ಯಾಯಾಧೀಶ ಪರಶುರಾಮ್ ದೊಡ್ಡಮನಿ ಹೇಳಿದರು.
ಸ್ಥಳೀಯ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಬೆಂಗಳೂರು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಸೋಮವಾರಪೇಟೆ ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕು ವಕೀಲರ ಸಂಘ ಹಾಗೂ ಶನಿವಾರಸಂತೆ ಗ್ರಾ.ಪಂ. ಮತ್ತು ವಿವಿಧ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಇಂದಿನ ಯುವಕರಲ್ಲಿ ಅವಸರದ ಪ್ರವೃತ್ತಿಯಾಗಿದ್ದು, ಇದರಿಂದ ರಸ್ತೆ ಅಪಘಾತ ಸಂಭವಿಸಿ ಹೆಚ್ಚಾಗಿ ಯುವ ಸಮೂಹ ಮೃತಪಡುತ್ತಿರುವದು ಕಳವಳಕಾರಿಯಾಗಿದೆ. ಈ ನಿಟ್ಟಿನಲ್ಲಿ ಯುವ ಸಮೂಹ ಮೋಟಾರು ವಾಹನದ ಕಾನೂನು ನಿಯಮದ ಬಗ್ಗೆ ಅರಿವು ಹೊಂದುವ ಅವಶ್ಯಕತೆ ಇದೆ. ಪೋಷಕರು ತಮ್ಮ ಮಕ್ಕಳಿಗೆ ವಾಹನ ಕೊಡಿಸುವಾಗ ಕಡ್ಡಾಯ ವಾಗಿ ಡಿಎಲ್, ವಾಹನ ಇನ್ಯೂರೆನ್ಸ್ ಮುಂತಾದ ನಿಯಮಗಳ ವ್ಯವಸ್ಥೆ ಮಾಡಿಕೊಡಬೇಕು. ಇದರಿಂದ ಗಾಯಗೊಂಡ ವ್ಯಕ್ತಿಗೂ ಪರಿಹಾರ ಕೊಡಬಹುದಾಗಿದೆ ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ತಾಲೂಕು ವಕೀಲರ ಸಂಘದ ಅಧ್ಯಕ್ಷ ಟಿ.ಕೆ. ತಿಮ್ಮಯ್ಯ, ಕಾನೂನಿನ ಬಗ್ಗೆ ತಾನು ತಿಳಿದು ಕೊಂಡಿದ್ದೇನೆಂಬ ಮನೋಭಾವನೆ ಯನ್ನು ಬಿಡ ಬೇಕು. ಕಾನೂನು ನಿಯಮಗಳಿಗೆ ಪ್ರತಿ ಯೊಬ್ಬರೂ ಗೌರವ ಕೊಡಬೇಕು. ಅದೇ ರೀತಿ ಕಾನೂನು ನಿಯಮಗಳ ತಿಳಿದು ಕೊಂಡವರು ಕಾನೂನನ್ನು ಕೈಗೆತ್ತಿಕೊಳ್ಳಬಾರದು ಎಂದರು.
ಜೀವನಾಂಶದ ಹಕ್ಕು ವಿಚಾರದ ಬಗ್ಗೆ ಸೋಮವಾರಪೇಟೆ ವಕೀಲ ಹೆಚ್.ಎಸ್. ವೆಂಕಟೇಶ್ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಸೋಮವಾರಪೇಟೆ ತಾಹಶೀಲ್ದಾರ್ ಆರ್. ಗೋವಿಂದರಾಜ್, ಶನಿವಾರಸಂತೆ ಗ್ರಾ.ಪಂ. ಅಧ್ಯಕ್ಷ ಮಹಮ್ಮದ್ ಗೌಸ್ ಹಾಜರಿದ್ದರು. ಈ ಸಂದರ್ಭ ವಿವಿಧ ಇಲಾಖೆ ಅಧಿಕಾರಿಗಳು, ವಿವಿಧ ಸ್ತ್ರೀ ಶಕ್ತಿ ಸಂಘಟನೆ ಸದಸ್ಯರು, ವಿವಿಧ ಸಂಘ-ಸಂಸ್ಥೆ ಪದಾಧಿಕಾರಿಗಳು ಮತ್ತು ಸಾರ್ವಜನಿಕರು ಪಾಲ್ಗೊಂಡಿದ್ದರು. ವಕೀಲರ ಸಂಘದ ಅಧ್ಯಕ್ಷ ಜಟ್ಟಿಯಪ್ಪ, ಪ್ರಾರ್ಥಿಸಿ, ಶನಿವಾರಸಂತೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ವಿ.ಜಿ. ಲೋಕೇಶ್ ಸ್ವಾಗತಿಸಿ, ವಂದಿಸಿದರು.