ಶನಿವಾರಸಂತೆ, ಮೇ 11: ಸಮೀಪದ ನಿಡ್ತ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಒಡೆಯನಪುರ ಗ್ರಾಮದಲ್ಲಿ ಸ್ವಾತಂತ್ರ್ಯ ಬಂದು ವರ್ಷಗಳಾದರೂ ಕೆಲ ಗ್ರಾಮಸ್ಥರು ಸಮಸ್ಯೆಗಳೊಂದಿಗೆ ಗುದ್ದಾಡುತ್ತಿದ್ದಾರೆ. ಮೂಲ ಸೌಲಭ್ಯ ವಂಚಿತರಾಗಿ ತಲೆ ಮೇಲೆ ವಸತಿ ಹೀನರಾಗಿ ಡೇರೆಯೊಳಗೆ ಬದುಕು ಸಾಗಿಸುತ್ತಿದ್ದಾರೆ. ಅಕ್ಕಪಕ್ಕದ ಗಿಡಗಂಟಿ, ಪೊದೆಗಳೇ ಅವರ ಶೌಚಾಲಯಗಳಾಗಿವೆ.
ಗ್ರಾಮದಲ್ಲಿ ಸರಕಾರದ ಸಾಮಾಜಿಕ ಸುರಕ್ಷಾ ಯೋಜನೆಯ ಯಾವದೇ ಲಾಭವೂ ಜಾರಿಯಾಗಿಲ್ಲ. ಈ ಜನ ತಮ್ಮ ಸೂರಿನ ಹೊರತಾಗಿ ಬೇರೆ ಏನನ್ನೂ ಬಯಸುತ್ತಿಲ್ಲ. ನಿಡ್ತ ಗ್ರಾಮ ಪಂಚಾಯಿತಿಯಿಂದ ಹಿಡಿದು ಜಿಲ್ಲಾ ಪಂಚಾಯಿತಿಯವರೆಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಲಿಲ್ಲ. ಸ್ಥಳೀಯ ಜನಪ್ರತಿನಿಧಿಗಳಿಗೆ ಮಾಡಿಕೊಂಡ ಮನವಿಯೂ ವ್ಯರ್ಥವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಚುನಾವಣೆ ಬಂದಾಗ ಮತ ಭಿಕ್ಷೆ ಬೇಡಲು ಡೇರೆ ಬಳಿ ಕೈ ಮುಗಿದು ಬರುವ ರಾಜಕಾರಣಿಗಳು ಮರು ದಿನದಿಂದ ಈ ಕಡೆ ನೋಡುವದಿಲ್ಲ. ಈವರೆಗೆ ಯಾವ ಜನಪ್ರತಿನಿಧಿಗಳಾಗಲೀ, ಅಧಿಕಾರಿಗಳಾಗಲೀ ಗ್ರಾಮದ ಅಭಿವೃದ್ಧಿ ಹಾಗೂ ವಸತಿ ಕಲ್ಪಿಸಲು ಸಹಕರಿಸಲಿಲ್ಲ ಎಂದು ಗ್ರಾಮಸ್ಥೆ ಶಾಹಿನ್ ಅಳಲು ತೋಡಿಕೊಂಡಿದ್ದಾರೆ.