ಸೋಮವಾರಪೇಟೆ, ಮೇ 11: ಸುರಕ್ಷಿತ ಬೈಕ್ ಚಾಲನೆಗಾಗಿ ಹೆಲ್ಮೆಟ್ ಅತ್ಯವಶ್ಯವಾಗಿದ್ದು, ದಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸುವದನ್ನು ಕಡ್ಡಾಯಗೊಳಿಸಲಾಗಿದೆ. ಆದರೂ ಸಹ ಹಲವಷ್ಟು ಮಂದಿ ಹೆಲ್ಮೇಟ್ ಧರಿಸದೇ ಪಟ್ಟಣದಲ್ಲಿ ಬೈಕ್ ಚಾಲನೆ ಮಾಡುತ್ತಿದ್ದು, ಪೊಲೀಸರು ಇಂತಹ ಚಾಲಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತಿದ್ದಾರೆ.

ಹೆಲ್ಮೆಟ್ ರಹಿತ ಚಾಲನೆ, ಅಗತ್ಯ ದಾಖಲಾತಿ ಇಲ್ಲದೇ ಬೈಕ್ ಚಾಲಿಸುವದು, ಡ್ರಿಂಕ್ ಅಂಡ್ ಡ್ರೈವ್ ಸೇರಿದಂತೆ ಇನ್ನಿತರ ನಿಯಮ ಉಲ್ಲಂಘನೆಗಳಿಗೆ ಪೊಲೀಸರು ದಂಡ ವಿಧಿಸುತ್ತಿದ್ದು, ಒಂದೇ ದಿನದಲ್ಲಿ ಬರೋಬ್ಬರಿ 180 ಮಂದಿಯ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದಾರೆ.

ಪೊಲೀಸ್ ವೃತ್ತ ನಿರೀಕ್ಷಕ ನಂಜುಂಡೇಗೌಡ ಬಾಣಾವರ ರಸ್ತೆಯಲ್ಲಿ 80 ಹಾಗೂ ಪೊಲೀಸ್ ವೃತ್ತ ನಿರೀಕ್ಷಕ ಶಿವಶಂಕರ್ ಅವರು ಇಲ್ಲಿನ ಜೂನಿಯರ್ ಕಾಲೇಜು ಜಂಕ್ಷನ್ ಬಳಿ ಕಾರ್ಯಾಚರಣೆ ನಡೆಸಿ 100 ಮಂದಿಗೆ ದಂಡ ವಿಧಿಸುವದರೊಂದಿಗೆ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ಬೈಕ್ ಚಾಲಿಸುವಂತೆ ಸೂಚನೆ ನೀಡಿದ್ದಾರೆ.