ವೀರಾಜಪೇಟೆ, ಮೇ 11: ಕ್ರೀಡಾಕೂಟಗಳಲ್ಲಿ ಕ್ರೀಡಾಪಟುಗಳು ಪಾಲಿಸುವ ಶಿಸ್ತು, ಪ್ರಾಮಾಣಿಕತೆ, ದಕ್ಷತೆಯನ್ನು ಜೀವನದಲ್ಲಿಯೂ ಅಳವಡಿಸಿಕೊಂಡರೆ ಭವಿಷ್ಯದಲ್ಲಿ ಸಮಾಜದಲ್ಲಿಯೂ ಉತ್ತಮ ವ್ಯಕ್ತಿಗಳಾಗಲು ಸಾಧ್ಯ ಎಂದು ಇಲ್ಲಿನ ಸರಕಾರಿ ಜೂನಿಯರ್ ಕಾಲೇಜಿನ ಪ್ರಾಂಶುಪಾಲ ತಾತಂಡ ಜ್ಯೋತಿ ಪ್ರಕಾಶ್ ಹೇಳಿದರು.

ವೀರಾಜಪೇಟೆಯ ಬಿಲ್ಲವ ಸೇವಾ ಸಂಘದಿಂದ ಸ್ವಜಾತಿಬಾಂಧವರಿಗಾಗಿ ಇಂದು ಇಲ್ಲಿನ ಜೂನಿಯರ್ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿದ್ದ 18ನೇ ವಾರ್ಷಿಕ ಕ್ರೀಡಾಕೂಟವನ್ನು ಕ್ರಿಕೆಟ್ ಚೆಂಡು ಎಸೆಯುವದರ ಮೂಲಕ ಉದ್ಘಾಟಿಸಿದ ಜ್ಯೋತಿ ಅವರು ಕ್ರೀಡಾಕೂಟ ಸಮುದಾಯಗಳ ನಡುವಿನ ಒಮ್ಮತ ಹಾಗೂ ಏಳಿಗೆಗೆ ಕಾರಣವಾಗಲಿದೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಬಿ.ಎಂ.ಗಣೇಶ್ ಮಾತನಾಡಿ ಕ್ರೀಡಾಕೂಟಗಳಲ್ಲಿ ಸಮುದಾಯದ ಒಗ್ಗಟ್ಟು, ಇದರೊಂದಿಗೆ ಸಮುದಾಯದ ಏಳಿಗೆ, ಪ್ರಗತಿ ಹಾಗೂ ಇತರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಮುಕ್ತವಾಗಿ ಚರ್ಚಿಸಲು ಅವಕಾಶವಾಗಲಿದೆ ಎಂದು ಹೇಳಿದರು.

ವೇದಿಕೆಯಲ್ಲಿ ಉಪಾಧ್ಯಕ್ಷ ಪುರುಷೋತ್ತಮ್, ಕಾರ್ಯದರ್ಶಿ ಜನಾರ್ಧನ, ಗೌರವ ಅಧ್ಯಕ್ಷ ಬಿ.ಆರ್.ರಾಜ, ಉದ್ಯಮಿ ಬಿ.ಆರ್. ಬೋಜಪ್ಪ ಪೂಜಾರಿ ಕ್ರೀಡಾಕೂಟದ ಸಮಿತಿ ಅಧ್ಯಕ್ಷ ರವೀಂದ್ರ, ಮಹಿಳಾ ಘಟಕದ ಅಧ್ಯಕ್ಷೆ ಪವಿತ್ರ ಸುಂದರ್, ಉಪಾಧ್ಯಕ್ಷೆ ಅನಿತಾ ಉಪಸ್ಥಿತರಿದ್ದರು.

ಸಂಘಟನೆಯ ಖಜಾಂಚಿ ಬಿ.ಎಂ.ಸತೀಶ್ ಸ್ವಾಗತಿಸಿ ನಿರೂಪಿಸಿದರು. ಸಂಘಟನೆಯ ಎಲ್ಲ ಪದಾಧಿಕಾರಿಗಳು ಹಾಜರಿದ್ದರು.

ಇಂದು ಫೈನಲ್ಸ್ : ತಾ. 12ರಂದು (ಇಂದು) ಕ್ರಿಕೆಟ್ ಪಂದ್ಯಾಟದ ಫೈನಲ್ ನಡೆಯಲಿದ್ದು ಜೊತೆಗೆ ಸಮುದಾಯ ಬಾಂಧವರಿಗಾಗಿ ಹಗ್ಗ ಜಗ್ಗಾಟ, ವಾಲಿಬಾಲ್, ಥ್ರೋ ಬಾಲ್ ಇತರ ಕ್ರೀಡೆಗಳನ್ನು ಆಯೋಜಿಸಲಾಗಿದೆ, ತಾ. 26ರಂದು ಮಕ್ಕಳ ಕ್ರೀಡಾ ಕೂಟ ಹಾಗೂ ಸಮಾರೋಪ ಸಮಾರಂಭ ಅಂಬಟ್ಟಿ ಬಿಟ್ಟಂಗಾಲ ಗ್ರಾಮದಲ್ಲಿರುವ ಸಂಘದ ಸಭಾಂಗಣದಲ್ಲಿ ನಡೆಯಲಿದ್ದು ಅಂದು ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಗುವದು ಎಂದು ಸಂಘಟನೆಯ ಕಾರ್ಯದರ್ಶಿ ಜನಾರ್ಧನ ತಿಳಿಸಿದರು.