ಮಡಿಕೇರಿ, ಮೇ 11 : ಪ್ರಕೃತಿ ವಿಕೋಪ ಎದುರಿಸುವ ನಿಟ್ಟಿನಲ್ಲಿ ಈಗಾಗಲೇ ಹಲವು ಉಪ ಸಮಿತಿಗಳು ಹಾಗೂ ನೋಡಲ್ ಅಧಿಕಾರಿಗಳನ್ನು ನಿಯೋಜಿಸಿದ್ದು, ತಮಗೆ ವಹಿಸಿರುವ ಜವಾಬ್ದಾರಿಯನ್ನು ಕಟ್ಟುನಿಟ್ಟಾಗಿ ನಿರ್ವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ಸೂಚಿಸಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅತಿವೃಷ್ಟಿ ಮತ್ತು ಅನಾವೃಷ್ಟಿಗೆ ಸಂಬಂಧಿಸಿದಂತೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅಧಿಕಾರಿಗಳು ಹಳ್ಳಿಗಳಿಗೆ ತೆರಳಿ ಸಮಸ್ಯೆ ಬಗೆಹರಿಸಲು ಮುಂದಾಗಬೇಕು. ಜಿಲ್ಲೆಯ ಕುಡಿಯುವ ನೀರು ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಬೇಕು. ಸದ್ಯದಲ್ಲಿ ಮುಂಗಾರು ಆರಂಭ ವಾಗುವದರಿಂದ ಕೇಂದ್ರ ಸ್ಥಾನ ಬಿಟ್ಟು ತೆರಳಬಾರದು. ತುರ್ತು ಸಂದರ್ಭದಲ್ಲಿ ಜಿಲ್ಲಾಧಿಕಾರಿಯವರ ಅನುಮತಿ ಪಡೆದು ಹೊರಡಬೇಕು ಎಂದರು.

ಸಾರ್ವಜನಿಕರನ್ನು ನೋಯಿಸುವದು, ತೊಂದರೆ ನೀಡುವದು ಕೇಳಿ ಬಂದಲ್ಲಿ ಮುಂದಿನ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಸಾ.ರಾ.ಮಹೇಶ್ ಎಚ್ಚರಿಸಿದರು.

ಈಗಾಗಲೇ ಜಿಲ್ಲಾಡಳಿತ ಪ್ರಕೃತಿ ವಿಕೋಪ ಸಂಬಂಧ ಸಾಕಷ್ಟು ಕುಟುಂಬಗಳಿಗೆ ಪರಿಹಾರ ವಿತರಿಸಿದೆ. ಜಮ್ಮಾ ಹಾಗೂ ಬಾಣೆ ಭೂಮಿಗೆ ಸಂಬಂಧಿಸಿದಂತೆ ಇನ್ನೂ ಕೆಲವು ಕುಟುಂಬಗಳಿಗೆ ಪರಿಹಾರ ನೀಡಬೇಕಿರುವ ಬಗ್ಗೆ ಮಾಹಿತಿ ಇದೆ. ಆದ್ದರಿಂದ ಅಂತಹ ನೊಂದ ಎಲ್ಲಾ ಕುಟುಂಬಗಳಿಗೆ ಪರಿಹಾರ ನೀಡಲಾಗುವದು ಎಂದು ಸಚಿವರು ಇದೇ ಸಂದರ್ಭ ತಿಳಿಸಿದರು.

ಮಡಿಕೇರಿ ನಗರದ ಹಳೇ ಖಾಸಗಿ ಬಸ್ ನಿಲ್ದಾಣ ಬಳಿ ತಡೆಗೋಡೆ ನಿರ್ಮಾಣ ಮಾಡುವ ಕೆಲಸವನ್ನು ಕೂಡಲೇ ಕೈಗೆತ್ತಿಕೊಳ್ಳುವಂತೆ ಪೌರಾಯುಕ್ತರಿಗೆ ಸಚಿವರು ಸೂಚನೆ ನೀಡಿದರು.

ನಗರದಲ್ಲಿ ಒಳಚರಂಡಿ ನಿರ್ಮಾಣದಿಂದಾಗಿ ರಸ್ತೆ ಹದಗೆಟ್ಟಿದೆ ಎಂದು ದೂರುಗಳು ಕೇಳಿ ಬರುತ್ತಿದ್ದು, ಕೂಡಲೇ ಇದನ್ನು ಸರಿಪಡಿಸಬೇಕು. ಮಳೆಗಾಲ ಮುಗಿಯುವವರೆಗೆ ರಸ್ತೆ ಅಗೆಯಲು ಹೋಗಬೇಡಿ ಎಂದು ನಿರ್ದೇಶನ ನೀಡಿದರು.

ಲೋಕೋಪಯೋಗಿ, ಜಿಲ್ಲಾ ಪಂಚಾಯತ್ ಎಂಜಿನಿಯರಿಂಗ್ ವಿಭಾಗ, ಪಿಎಂಜಿಎಸ್‍ವೈ, ರಾಷ್ಟ್ರೀಯ ಹೆದ್ದಾರಿ ವಿಭಾಗ, ಸಣ್ಣ ನೀರಾವರಿ ಹಾಗೂ ಬೃಹತ್ ನೀರಾವರಿ ಮತ್ತಿತರ ಇಂಜಿನಿಯರಿಂಗ್ ವಿಭಾಗದ ಇಲಾಖೆಗಳು ಬಾಕಿ ಇರುವ ಕಾಮಗಾರಿಗಳನ್ನು ಕೂಡಲೇ ಪೂರ್ಣಗೊಳಿಸುವಂತೆ ಸಚಿವರು ಸೂಚನೆ ನೀಡಿದರು.

ಜಿಲ್ಲಾಡಳಿತ ಭವನದ ಬಳಿ ಮಂಗಳೂರು ರಸ್ತೆ ಭಾಗದಲ್ಲಿ ತಡೆಗೋಡೆ ನಿರ್ಮಾಣಕ್ಕೆ ಈಗಾಗಲೇ ರೂ. 5 ಕೋಟಿ ಇದ್ದು, ಹೆಚ್ಚುವರಿಯಾಗಿ ರೂ. 2 ಕೋಟಿ ಬಿಡುಗಡೆ ಮಾಡಲಾಗುವದು. ತ್ವರಿತವಾಗಿ ತಡೆಗೋಡೆ ಕಾಮಗಾರಿ ಕೈಗೊಳ್ಳುವಂತೆ ಲೋಕೋಪಯೋಗಿ ಇಂಜಿನಿಯರ್‍ಗಳಿಗೆ ಸೂಚಿಸಿದರು.

‘ನಿರ್ಮಿತಿ ಕೇಂದ್ರದಿಂದ ಕೈಗೊಳ್ಳಲಾಗುತ್ತಿರುವ ಕಾಮಗಾರಿಗಳು ಗುಣಮಟ್ಟದಿಂದ ಕೂಡಿಲ್ಲ ಎಂಬ ದೂರುಗಳು ಕೇಳಿ ಬರುತ್ತಿದ್ದು, ಗುಣಮಟ್ಟದ ಕಾಮಗಾರಿ ಕೈಗೊಳ್ಳುವಂತೆ ಸಂಬಂಧಪಟ್ಟ ಇಂಜಿನಿಯರ್‍ಗೆ ಸೂಚಿಸಿದರು.’

ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಪ್ರಕೃತಿ ವಿಕೋಪ ಹಾಗೂ ಬರ ನಿರ್ವಹಣೆಗೆ ಸಂಬಂಧಿಸಿದಂತೆ ಹಲವು ಮಾಹಿತಿ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ. ಪಿ., ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಲಕ್ಷ್ಮಿಪ್ರಿಯಾ, ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಶಿವರಾಜು. ಉಪ ವಿಭಾಗಾಧಿಕಾರಿ ಟಿ.ಜವರೇಗೌಡ. ನಾನಾ ಇಲಾಖೆ ಅಧಿಕಾರಿಗಳು ಇದ್ದರು.