ವೀರಾಜಪೇಟೆ, ಮೇ. 9:ಪ್ರತಿಯೊಂದು ಸಮುದಾಯದಲ್ಲಿ ಕ್ರೀಡಾಕೂಟವನ್ನು ಹಮ್ಮಿಕೊಳ್ಳುವದರಿಂದ ಸಮುದಾಯದ ಕುಟುಂಬಗಳ ನಡುವಿನ ಸಾಮರಸ್ಯ ,ಜೀವನ ಒಮ್ಮತಕ್ಕೆ ಕಾರಣವಾಗಲಿದೆ. ಸಮುದಾಯದ ಪ್ರತಿಭೆಗಳಿಗೂ ಪಂದ್ಯಾಟದಲ್ಲಿ ಭಾಗವಹಿಸುವ ಅವಕಾಶ ದೊರಕಿದಂತಾಗಿದೆ ಎಂದು ಕೊಡಗು ಖಾಸಗಿ ಬಸ್ಸು ಕಾರ್ಮಿಕರ ಸಂಘದ ಅಧ್ಯಕ್ಷ ಎನ್.ಪಿ.ದಿನೇಶ್ ನಾಯರ್ ಹೇಳಿದರು.
ವೀರಾಜಪೇಟೆ ಕೊಡಗು ಹಿಂದೂ ಮಲಯಾಳಿ ಅಸೋಶಿಯೇಶನ್ ವತಿಯಿಂದ ಇಂದು ರಾತ್ರಿ ಇಲ್ಲಿನ ತಾಲೂಕು ಮೈದಾನದಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಹೊನಲು ಬೆಳಕಿನ ವಿಶು ಕಪ್ 2019ರಲ್ಲಿ ಮುಕ್ತ ಕಾಲ್ಚೆಂಡು ಪಂದ್ಯಾಟದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ದಿನೇಶ್ ನಾಯರ್, ಕ್ರೀಡೆ ಆರೋಗ್ಯವನ್ನು ಕಾಪಾಡುವದರೊಂದಿಗೆ ಮನರಂಜನೆ, ಉಲ್ಲಾಸವನ್ನು ನೀಡುತ್ತದೆ. ಕೊಡಗು ಹಿಂದೂ ಮ¯ಯಾಳಿ ಸಂಘಟನೆ ವರ್ಷಂಪ್ರತಿ ಕ್ರೀಡಾಕೂಟವನ್ನು ಆಯೋಜಿಸಿ ಸಮುದಾಯದ ಒಮ್ಮತಕ್ಕೆ ಕಾರಣವಾಗಿದೆ. ಇದು ಸಂಘಟನೆಯ ಉತ್ತಮ ಕೆಲಸವಾಗಿದೆ ಎಂದರು.
ವೇದಿಕೆಯಲ್ಲಿ ಜಿಲ್ಲಾ ಸಮಿತಿಯ ಅಧ್ಯಕ್ಷ ಕೆ.ಬಿ.ಹರ್ಷವರ್ಧನ್, ಜಿಲ್ಲಾ ಸಮಿತಿಯ ಸಿ.ಎಂ.ದಿನೇಶ್, ಮಾಜಿ ಹವಲ್ದಾರ್ ಮನುಜಯರಾಂ, ಚಾಮಿ ಗ್ರೂಪ್‍ನ ಟಿ.ಸಿ.ಸುರೇಶ್, ಉದ್ಯಮಿಗಳಾದ ಚೋಪಿ ಜೋಸೆಫ್, ಕೆ.ಪಿ.ರಷೀದ್, ಪಟ್ಟಣ ಪಂಚಾಯಿತಿ ಸದಸ್ಯೆ ಆಶಾ ಸುಬ್ಬಯ್ಯ, ಟಿ.ಕೆ.ವಾಸು, ಹಾಜರಿದ್ದರು ಟಿ.ಸಿ.ಸುರೇಶ್ ಕಾರ್ಯಕ್ರಮ ಉದ್ಘಾಟಿಸಿದರು. ವೀರಾಜಪೇಟೆ ಸಮಿತಿಅಧ್ಯಕ್ಷ ಪಿ.ಎಸ್.ಮನೋಜ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ರಾಜ್ಯ ಮಟ್ಟದ ಹೊನಲು ಬೆಳಕಿನ ಫುಟ್‍ಬಾಲ್ ಪಂದ್ಯಾಟವನ್ನು ಉದ್ಯಮಿ ಚೋಪಿ ಜೋಸೆಫ್ ಚೆಂಡು ತಳ್ಳುವದರ ಮೂಲಕ ಉದ್ಘಾಟಿಸಿದರು. ಫುಟ್‍ಬಾಲ್ ಪಂದ್ಯಾಟ ತಾ:12ರವರೆಗೆ ನಡೆಯಲಿದ್ದು ಅಂದು ರಾತ್ರಿ 8ಗಂಟೆಗೆ ಫೈನಲ್ಸ್ ಪಂದ್ಯಾಟದೊಂದಿಗೆ ಸಮಾರೋಪ ಸಮಾರಂಭ ನಡೆಯಲಿದೆ. ರಾಜ್ಯದಿಂದ ಒಟ್ಟು 32 ತಂಡಗಳು ಪಂದ್ಯಾಟದಲ್ಲಿ ಭಾಗವಹಿಸಿವೆ.